ಕಬ್ಬಿನ ಬವಣೆ: Part-7| ಕಬ್ಬಿನ ಬೆಂಕಿಯಲ್ಲಿ ಕಂಡ ರೈತರ ಬಿರುಕು : ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ ಮಧ್ಯೆ ಸಂಘರ್ಷ ಏಕೆ?
x

ಕಬ್ಬಿನ ಬವಣೆ: Part-7| ಕಬ್ಬಿನ ಬೆಂಕಿಯಲ್ಲಿ ಕಂಡ ರೈತರ ಬಿರುಕು : ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ ಮಧ್ಯೆ ಸಂಘರ್ಷ ಏಕೆ?

ಸಕ್ಕರೆ ಉದ್ಯಮದಲ್ಲಿ ಬೇರೂರಿರುವ ಆಳವಾದ ಬಿಕ್ಕಟ್ಟು, ಆಡಳಿತಾತ್ಮಕ ವೈಫಲ್ಯ ಮತ್ತು ರೈತರ ಆರ್ಥಿಕ ಹತಾಶೆಯ ಸ್ಫೋಟಕ ಸಂಕೇತವಾಗಿದೆ. ರೈತ ಸಮುದಾಯದ ಒಡಕು ಮೂಡಿಸಿರುವುದೇ ಸಂಘರ್ಷಕ್ಕೆ ಕಾರಣ ಎನ್ನಲಾಗಿದೆ


Click the Play button to hear this message in audio format

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಬಿಕ್ಕಟ್ಟು ದಿನೇ ದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರೂ ಬಾಗಲಕೋಟೆಯಲ್ಲಿ ಕಬ್ಬಿನ ಜ್ವಾಲೆ ಭುಗಿಲೆದ್ದಿದೆ. ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ 100ಕ್ಕೂ ಹೆಚ್ಚು ಕಬ್ಬು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲಿಗೆಯಲ್ಲಿ ರೈತರ ಬಿರುಕು ದಟ್ಟವಾಗಿ ಕಂಡು ಬಂದಿದೆ.

ರೈತರ ಉಗ್ರ ಪ್ರತಿಭಟನೆಯ ವೇಳೆ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚುವುದರೊಂದಿಗೆ ಹಿಂಸಾರೂಪಕ್ಕೆ ತಿರುಗಿದೆ. ಇದು ಕೇವಲ ಒಂದು ಆಕಸ್ಮಿಕ ಘಟನೆಯಲ್ಲ. ಇದು ಸಕ್ಕರೆ ಉದ್ಯಮದಲ್ಲಿ ಬೇರೂರಿರುವ ಆಳವಾದ ಬಿಕ್ಕಟ್ಟು, ಆಡಳಿತಾತ್ಮಕ ವೈಫಲ್ಯ ಮತ್ತು ರೈತರ ಆರ್ಥಿಕ ಹತಾಶೆಯ ಸಂಕೇತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಘಟನೆಯ ಹಿಂದೆ ಕಾಣದ ಕೈಗಳ ಕೈವಾಡದ ಬಗ್ಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಹೇಳಿದರೂ ರೈತ ಸಮುದಾಯದ ನಡುವಿನ ದಶಕಗಳ ತಿಕ್ಕಾಟ ಪ್ರಧಾನವಾಗಿ ಕಂಡುಬರುತ್ತಿದೆ.

ಸಮೀರ‌ವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಯ ಬಳಿ ನಡೆದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಘಟನೆಯು ರೈತರ ಸಹನೆ ಕಟ್ಟೆಯೊಡೆದಿರುವುದನ್ನು ಸೂಚಿಸುತ್ತದೆ. ಪ್ರತಿಭಟನೆ ನಡುವೆಯೂ ಬೆಳಗಾವಿ ಜಿಲ್ಲೆಯ ರೈತರು ಪೊಲೀಸ್ ರಕ್ಷಣೆಯಲ್ಲಿ ಕಬ್ಬು ಪೂರೈಸಲು ಮುಂದಾದಾಗ ಸ್ಥಳೀಯ ಪ್ರತಿಭಟನಾಕಾರರು ಕೆರಳಿದರು. ಇದು ಮಾತಿನ ಚಕಮಕಿಗೆ, ನಂತರ ಕಲ್ಲು ತೂರಾಟ ಮತ್ತು ಅಂತಿಮವಾಗಿ ವಾಹನಗಳಿಗೆ ಬೆಂಕಿ ಹಚ್ಚುವ ಕೃತ್ಯಕ್ಕೆ ಕಾರಣವಾಯಿತು ಎಂಬುದು ಸ್ಥಳೀಯ ಮೂಲಗಳು ಹೇಳಿವೆ.

ಬಾಗಲಕೋಟೆ ರೈತರು ಸಮೀರ್‌ವಾಡಿ ಕಾರ್ಖಾನೆಯ ಪ್ರಮುಖ ಪೂರೈಕೆದಾರರು. ಉತ್ತಮ ಬೆಲೆ ಸಿಕ್ಕರೆ ಅದು ಈ ಭಾಗದ ಎಲ್ಲ ರೈತರಿಗೆ ದೀರ್ಘಾವಧಿಯಲ್ಲಿ ಲಾಭ ತರುತ್ತದೆ. ಆದರೆ, ಬೆಳಗಾವಿ ಜಿಲ್ಲೆಯ ರೈತರು ತಮ್ಮ ಕಬ್ಬನ್ನು ತಂದು ಮಾರಾಟ ಮಾಡಲು ಮುಂದಾಗಿದ್ದರು. ಕಟಾವಾದ ಕಬ್ಬನ್ನು ಹೆಚ್ಚು ದಿನ ಇಡಲು ಸಾಧ್ಯವಿಲ್ಲ. ಅದು ಒಣಗಿದರೆ ತೂಕ ಕಡಿಮೆಯಾಗಿ ನಷ್ಟವಾಗುತ್ತದೆ. ಈಗಾಗಲೇ ಮಾಡಿದ ಸಾಲ, ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ಖರ್ಚುಗಳ ಒತ್ತಡದಲ್ಲಿರುವ ಇವರಿಗೆ, ಸಿಕ್ಕ ಬೆಲೆಗೆ ಕಬ್ಬು ಮಾರಾಟ ಮಾಡುವುದು ಅನಿವಾರ್ಯ. ಹೀಗಾಗಿ ಮಾರಾಟಕ್ಕೆ ಮುಂದಾಗಿದ್ದರು. ಒಂದು ಗುಂಪಿನ ರೈತರು ಪ್ರತಿಭಟನೆ ನಡೆಸಿದರೆ, ಇನ್ನೊಂದು ಗುಂಪು ಕಬ್ಬು ಮಾರಾಟಕ್ಕೆ ಮುಂದಾಗಿತ್ತು. ರೈತರ ನಡುವಿನ ಭಿನ್ನ ನಡೆಯಿಂದಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು ಎಂದು ಹೇಳಲಾಗಿದೆ.

ಬೆಳಗ್ಗೆ ಪೂಜೆ, ಸಂಜೆ ಬೆಂಕಿ

ಬೆಳಿಗ್ಗೆಯಷ್ಟೇ ಪೂಜೆ ಮಾಡಿ ಪ್ರಾರಂಭಿಸಲಾಗಿದ್ದ ಸಕ್ಕರೆ ಕಾರ್ಖಾನೆಗೆ ಕಬ್ಬು ತಂದ ಟ್ರ್ಯಾಕ್ಟರ್‌ಗಳಿಗೆ ಸಂಜೆ ಬೆಂಕಿ ಹಚ್ಚಿದ ಘಟನೆ ನಡೆಯಿತು. ಏಕಾಏಕಿ ಮುಧೋಳ ಭಾಗದಿಂದ ಬಸ್‌ನಲ್ಲಿ ಬಂದ ರೈತರು ಸಕ್ಕರೆ ಕಾರ್ಖಾನೆಯನ್ನು ಮುತ್ತಿದರು. ಅಲ್ಲಿ ರಸ್ತೆ ಮೂಲಕ ಕಾರ್ಖಾನೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ದುಷ್ಕರ್ಮಿಗಳು ಉರುಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೂಗಾಡ ತೊಡಗಿದರು. ಅಲ್ಲದೇ ಸಕ್ಕರೆ ಕಾರ್ಖಾನೆಯ ಮುಂದಿನ ದೊಡ್ಡ ಗೇಟ್ ಮುಚ್ಚಿ ಸಿಬ್ಬಂದಿ ಮೇಲೆ ಕಲ್ಲುತೂರಾಟ ನಡೆಸಿದರು.

ಪ್ರತಿಭಟನೆಯಲ್ಲಿ ಸಾಕಷ್ಟು ರೈತರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಕಾರ್ಖಾನೆ ಆವರಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಕಾರಣಕ್ಕೂ ನಾವು ಸರ್ಕಾರ ಹೇಳಿದ ದರಕ್ಕೆ ಒಪ್ಪುವುದಿಲ್ಲ. ನಮಗೆ ನ್ಯಾಯಯುತವಾದ 3500 ರೂ. ಬೇಕು. ಇದಕ್ಕೆ ಒಪ್ಪಿದರೆ ಮಾತ್ರ ಕಾರ್ಖಾನೆ ತೆಗೆಯಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಕಾರ್ಖಾನೆ ತೆಗೆಯಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

ಬಾಗಲಕೋಟೆ, ಬೆಳಗಾವಿ ಕಬ್ಬು ಹೋರಾಟವೇ ವಿಭಿನ್ನ

ಕಬ್ಬು ಬೆಳೆಗಾರರ ಹೋರಾಟ ಬೇರೆ ಜಿಲ್ಲೆಯಲ್ಲೇ ಒಂದು ರೀತಿಯದ್ದಾದರೆ, ಬಾಗಲಕೋಟೆ ಜಿಲ್ಲೆಯ ಹೋರಾಟದ ತೂಕವೇ ಬೇರೆ. ಇಲ್ಲಿ ರೈತರು ಎಂದಿಗೂ ಸರ್ಕಾರ ಘೋಷಿಸುವ ಎಫ್‌ಆರ್‌ಪಿ ಒಪ್ಪಿದ ಉದಾಹರಣೆಯೇ ಇಲ್ಲ. ಕಾರ್ಖಾನೆ ಹಾಗೂ ರೈತರ ನಡುವೆ ನಡೆಯುವ ಒಪ್ಪಂದವೇ ಅಂತಿಮ. ಅದಾದ ಮೇಲೆಯೇ ಕಬ್ಬು ನುರಿಸುವ ಹಂಗಾಮು ಶುರುವಾಗುತ್ತದೆ.

ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ಈ ಬಾರಿ ನಡೆದ ಹೋರಾಟ ರಾಜ್ಯ ಸರ್ಕಾರಕ್ಕೆ ಇರಿಸುಮುರಿಸು ಉಂಟು ಮಾಡಿತು. ಆದರೆ ಇಂಥದೊಂದು ಹೋರಾಟ ಬಾಗಲಕೋಟೆ ಜಿಲ್ಲೆಯಲ್ಲಿ ದಶಕಗಳಿಂದಲೂ ನಡೆಯುತ್ತಲೇ ಬಂದಿದೆ. ಹೋರಾಟ ತಾರಕಕ್ಕೆ ಏರಿದ ನಂತರವೇ ತಣ್ಣಗಾಗುತ್ತದೆ. ಆದರೆ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಹಿಂಸಾರೂಪ ಪಡೆದುಕೊಂಡಿದೆ. ಮುಧೋಳದಲ್ಲಿ ಕಬ್ಬು ಬೆಳೆಗಾರರು ಬೀದಿಗಿಳಿದಿದ್ದಾರೆಂದರೆ ವಾಹನಗಳ ಸಂಚಾರ ಸ್ಥಗಿತಗೊಳ್ಳುತ್ತವೆ. ಅದು ಒಂದು ದಿನದ ಮಟ್ಟಿಗಲ್ಲ. ವಾರಗಟ್ಟಲೇ ಪ್ರತಿಭಟನೆ ನಡೆಯುತ್ತದೆ. ರೈತರ ಹೋರಾಟವಾಗಿರುವುದರಿಂದ ಅದಕ್ಕೆ ಜನರೂ ಸಹಕಾರ ನೀಡುತ್ತ ಬಂದಿದ್ದಾರೆ. ಆದರೆ ಈ ಬಾರಿ ಕಬ್ಬು ಆಹುತಿ ಆಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲೆಯಲ್ಲಿ ರೈತರು ಪ್ರತಿ ಟನ್‌ ಕಬ್ಬಿಗೆ 3500 ರೂ. ದರ ಘೋಷಿಸುವಂತೆ ಬಿಗಿ ಪಟ್ಟು ಹಿಡಿದಿದ್ದಾರೆ. ಸರ್ಕಾರ ಸರ್ಕಾರ ತನ್ನ ಪಾಲಿನ 50 ರೂಪಾಯಿ ಸಬ್ಸಿಡಿ ಹಣ ನೀಡಿದ ನಂತರ, ಘೋಷಿಸಿರುವಂತೆ 3200 ರೂ.ಗಳನ್ನು ಮೊದಲು ಕೊಡುತ್ತೇವೆ. ಕಾರ್ಖಾನೆಗಳು 50 ರೂಪಾಯಿ ನೀಡುವುದಾಗಿ ಹೇಳಿವೆ. ಇದಕ್ಕೆ ರೈತ ಸಂಘಟನೆಗಳು ಸುತರಾಂ ಒಪ್ಪುತ್ತಿಲ್ಲ. ಸರ್ಕಾರ 3300 ರೂ. ಗಳ ದರ ಘೋಷಣೆ ವೇಳೆ 11.25 ಇಳುವರಿ ನಿಗದಿಪಡಿಸಬೇಕೆಂಬ ಷರತ್ತು ವಿಧಿಸಿದೆ. ಈ ಷರತ್ತು ವಿಧಿಸಿಯೇ ಕೇಂದ್ರ ಸರ್ಕಾರ ಎಫ್‌ಆರ್‌ಪಿ ಘೋಷಿಸುವುದರಿಂದ ಅದು ಸಂಪೂರ್ಣ ಅವೈಜ್ಞಾನಿಕ, ಹೀಗಾಗಿ ಒಪ್ಪಂದದ ದರಕ್ಕೆ ಬರಬೇಕೆಂಬುದು ರೈತರು ಹಲವು ವರ್ಷಗಳಿಂದ ವಾದವಿಡುತ್ತೆ ಬಂದಿದ್ದಾರೆ. ಈ ಬಾರಿ ಒಪ್ಪಂದದ ದರಕ್ಕೆ ಕಾರ್ಖಾನೆಗಳು ಒಂದು ಹೆಜ್ಜೆ ಮುಂದಿಟ್ಟರೆ ಚೌಕಾಸಿಗೆ ರೈತರೂ ಸಿದ್ದರಿದ್ದಾರೆ.

ಇದಲ್ಲದೇ ಕಾರ್ಖಾನೆಗಳು 2017-18ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ಪ್ರತಿ ಟನ್ ಮೇಲಿನ 175 ರೂ., 2021-22ನೇ ಸಾಲಿನ 62 ರೂ. ಹಾಗೂ 114 ರೂ.ಗಳ ಸಾಗಾಣಿಕೆ ವೆಚ್ಚವನ್ನು ಪಾವತಿಸಬೇಕೆಂಬ ಬೇಡಿಕೆಯಿಟ್ಟಿದ್ದಾರೆ. ಈ ಎಲ್ಲ ವಿಚಾರಗಳು ಕಬ್ಬಿನ ವಿಷಯದಲ್ಲಿ ಕಗ್ಗಂಟಾಗಿ ಪರಿಣಮಿಸಿದೆ.

Read More
Next Story