
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರೈತರು ನಡೆಸುತ್ತಿದ್ದ ತೀವ್ರ ಸ್ವರೂಪದ ಹೋರಾಟವು ಅಂತಿಮವಾಗಿ ಸುಖಾಂತ್ಯ ಕಂಡಿದೆ.
ಕಬ್ಬು ಬೆಳೆಗಾರರ ಹೋರಾಟ ಸುಖಾಂತ್ಯ: ರಿಕವರಿ ಪರಿಗಣಿಸದೇ ಪ್ರತಿ ಟನ್‌ಗೆ 3,300 ರೂ. ನೀಡಲು ಒಪ್ಪಿಗೆ
ಸರಣಿ ಸಭೆಗಳ ಬಳಿಕ, ಕಬ್ಬಿನ ರಿಕವರಿ ದರವನ್ನು ಪರಿಗಣಿಸದೆ ಪ್ರತಿ ಟನ್‌ಗೆ 3,300 ರೂಪಾಯಿ ನೀಡಬೇಕೆಂಬ ರೈತರ ಪ್ರಮುಖ ಬೇಡಿಕೆಗೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ, ಬಾಕಿ ಹಣವನ್ನು ಪಾವತಿಸಲು ನಾಲ್ಕು ಸಕ್ಕರೆ ಕಾರ್ಖಾನೆಗಳು ಸಮ್ಮತಿಸಿವೆ.
ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರೈತರು ನಡೆಸುತ್ತಿದ್ದ ತೀವ್ರ ಸ್ವರೂಪದ ಹೋರಾಟವು ಸುಖಾಂತ್ಯ ಕಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮತ್ತು ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ರೈತರು ತಮ್ಮ ಪ್ರತಿಭಟನೆ ಹಿಂಪಡೆದಿದ್ದಾರೆ.
ಸರಣಿ ಸಭೆಗಳ ಬಳಿಕ, ಕಬ್ಬಿನ ರಿಕವರಿ ದರ ಪರಿಗಣಿಸದೆ ಪ್ರತಿ ಟನ್‌ಗೆ 3,300 ರೂಪಾಯಿ ನೀಡಬೇಕೆಂಬ ರೈತರ ಪ್ರಮುಖ ಬೇಡಿಕೆಗೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ, ಬಾಕಿ ಹಣವನ್ನು ಪಾವತಿಸಲು ನಾಲ್ಕು ಸಕ್ಕರೆ ಕಾರ್ಖಾನೆಗಳು ಸಮ್ಮತಿಸಿವೆ.
ರೈತರ ಬೇಡಿಕೆಯಂತೆ, ಮೊದಲ ಕಂತಿನಲ್ಲಿ ಕಾರ್ಖಾನೆಗಳು ಪ್ರತಿ ಟನ್‌ಗೆ 3,200 ರೂಪಾಯಿ ನೀಡಲಿದ್ದು, ನಂತರದಲ್ಲಿ ಕಾರ್ಖಾನೆಯಿಂದ 50 ರೂಪಾಯಿ ಹಾಗೂ ಸರ್ಕಾರದಿಂದ 50 ರೂಪಾಯಿ ಸೇರಿ ಒಟ್ಟು 3,300 ರೂಪಾಯಿ ರೈತರ ಕೈ ಸೇರಲಿದೆ. ಆರಂಭದಲ್ಲಿ, ಕಾರ್ಖಾನೆಗಳು 3,250 ರೂಪಾಯಿ ಮತ್ತು ಸರ್ಕಾರ 50 ರೂಪಾಯಿ ನೀಡಬೇಕೆಂದು ಪಟ್ಟು ಹಿಡಿದಿದ್ದರು, ಆದರೆ ಅಂತಿಮವಾಗಿ ಈ ಸೂತ್ರಕ್ಕೆ ಸಮ್ಮತಿಸಿ ಹೋರಾಟ ಅಂತ್ಯಗೊಳಿಸಿದ್ದಾರೆ.
ಹಿಂಸಾರೂಪಕ್ಕೆ ತಿರುಗಿದ್ದ ಪ್ರತಿಭಟನೆ
ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಈ ಹೋರಾಟ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೂ ತಿರುಗಿತ್ತು. ರೈತರು ಟನ್‌ಗೆ 3,500 ರೂಪಾಯಿ ಬೇಕೆಂದು ಪಟ್ಟು ಹಿಡಿದಿದ್ದು, ಸರ್ಕಾರದೊಂದಿಗೆ ನಡೆಸಿದ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿದ್ದವು. ಈ ವೇಳೆ, ರಬಕವಿ-ಬನಹಟ್ಟಿ ತಾಲೂಕಿನ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಕಲ್ಲು ತೂರಾಟ ನಡೆದಿತ್ತು. ಐದಕ್ಕೂ ಹೆಚ್ಚು ಬೈಕ್‌ಗಳು ಮತ್ತು ಕಬ್ಬು ತುಂಬಿದ್ದ 40-50 ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು.
ಬೆಳಗಾವಿ ಅಧಿವೇಶನಕ್ಕೆ ಸಿದ್ಧತೆ
ಉತ್ತರ ಕರ್ನಾಟಕದಲ್ಲಿ ಕಬ್ಬಿನ ಹೋರಾಟದ ಕಿಚ್ಚು ತಣ್ಣಗಾಗುತ್ತಿದ್ದಂತೆ, ಡಿಸೆಂಬರ್ 8 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆಗಳು ಆರಂಭವಾಗಿವೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ, ಅಗತ್ಯ ಸಿದ್ಧತೆಗಳ ಕುರಿತು ಚರ್ಚಿಸಲಾಗಿದೆ.

