
Sugarcane Crisis| ಕಾರ್ಖಾನೆ ಮಾಲೀಕರ ಮನವೊಲಿಕೆಗೆ ಕಸರತ್ತು; ಸರ್ಕಾರದಿಂದಲೇ ಹೆಚ್ಚುವರಿ 100 ರೂ.?
ಕಾರ್ಖಾನೆ ಮಾಲೀಕರು ಈಗಾಗಲೇ ಪ್ರತಿ ಟನ್ ಕಬ್ಬಿಗೆ 3,200 ರೂ. ನೀಡಲು ಸಮ್ಮತಿಸಿದ್ದು, ಸರ್ಕಾರವು ರೈತರಿಗೆ ಹೆಚ್ಚುವರಿಯಾಗಿ 100 ರೂ. ಕೊಡಿಸಿ ಒಟ್ಟು 3,300 ರೂ. ನೀಡುವ ಸಂಬಂಧ ಚರ್ಚೆ ನಡೆಸಿದೆ.
ಬೆಳಗಾವಿ ಮತ್ತಿತರ ಭಾಗಗಳಲ್ಲಿ ಭುಗಿಲೆದ್ದಿರುವ ಕಬ್ಬು ಬೆಳೆಗಾರರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಮನೆಯಲ್ಲಿ ನಿಗದಿಯಾಗಿದ್ದ ಊಟವನ್ನೂ ಬಿಟ್ಟು, ವಿಧಾನಸೌಧದಲ್ಲೇ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಮಾತುಕತೆ ಮುಂದುವರಿಸಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿ ಸೇರಿದಂತೆ ಹಲವು ಬೇಡಿಕೆಗಳ ಒತ್ತಾಯಿಸಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಚರ್ಚೆ ನಡೆಸಿ ತಮ್ಮ ನೋವು ತೋಡಿಕೊಂಡಿದ್ದಾರೆ. ರೈತರ ಬೇಡಿಕೆಯನ್ನು ಈಡೇರಿಸುವ ಸಂಬಂಧ ಸರ್ಕಾರ ಮತ್ತು ಬಹುತೇಕ ರಾಜಕೀಯ ನಾಯಕರೇ ಇರುವ ಸಕ್ಕರೆ ಕಾರ್ಖಾನೆ ಮಾಲೀಕರ ಮನವೊಲಿಕೆಗೆ ಮುಂದಾಗಿರುವ ಮುಖ್ಯಮಂತ್ರಿ ತಮ್ಮ ಅಪರಾಹ್ನದ ತುಮಕೂರು ಜಿಲ್ಲಾ ಪ್ರವಾಸವನ್ನು ಕೆಲಕಾಲ ಮಂದೂಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತಿತರ ಕಾರ್ಯಕ್ರಮಗಳಿಗಿಂತ ಮುನ್ನ ಮಾಜಿ ಸಚಿವ ರಾಜಣ್ಣ ಮನೆಯಲ್ಲಿ ಊಟ ನಿಗದಿಯಾಗಿತ್ತು. ಆದರೆ ಸಭೆಯಲ್ಲಿ ಸಕ್ಕರೆ ಕರ್ಖಾನೆ ಮಾಲೀಕರ ಜತೆ ಒಂದು ನಿರ್ದಿಷ್ಟ ನಿಲುವಿಗೆ ಬರಲು ಇನ್ನೂ ಸಾಧ್ಯವಾಗದೇ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯನ್ನು ಮುಂದುವರಿಸಿದ್ದಾರೆ.
ಮುಖ್ಯಮಂತ್ರಿ ಸಭೆ
ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರತಿ ಟನ್ ಕಬ್ಬಿಗೆ ಸೂಕ್ತ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಸಭೆಯಲ್ಲಿ ಕಬ್ಬಿನ ದರ ನಿಗದಿ, ರೈತರಿಗೆ ಆಗುತ್ತಿರುವ ಸಮಸ್ಯೆಗಳು ಮತ್ತು ಸಕ್ಕರೆ ಕಾರ್ಖಾನೆಗಳ ಸವಾಲುಗಳ ಕುರಿತು ಗಂಭೀರ ಚರ್ಚೆ ನಡೆದಿದೆ.
ಕಾರ್ಖಾನೆ ಮಾಲೀಕರು ಈಗಾಗಲೇ ಪ್ರತಿ ಟನ್ ಕಬ್ಬಿಗೆ 3,200 ರೂ. ನೀಡಲು ಸಮ್ಮತಿಸಿದ್ದು, ಸರ್ಕಾರವು ರೈತರಿಗೆ ಹೆಚ್ಚುವರಿಯಾಗಿ 100 ರೂ. ಕೊಡಿಸಿ ಒಟ್ಟು 3,300 ರೂ. ನೀಡಲು ಚರ್ಚೆ ನಡೆಸಿದೆ. ಕಬ್ಬು ಬೆಳೆಗಾರರು ಮಾತ್ರ 3,500 ರೂ.ಗೆ ಪಟ್ಟು ಹಿಡಿದಿದ್ದು, ಕನಿಷ್ಠಪಕ್ಷ 3,400 ರೂ. ದರಕ್ಕೆ ಒಪ್ಪಿಸಿ ರೈತರ ಮನವೊಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
ಕಾರ್ಖಾನೆ ಮಾಲೀಕರ ಆರ್ಥಿಕ ಸಂಕಷ್ಟದ ಅಳಲು
ಸಿಎಂ ನೇತೃತ್ವದ ಸಭೆಯಲ್ಲಿ ಮಾತನಾಡಿದ ಸಕ್ಕರೆ ಕಾರ್ಖಾನೆ ಮಾಲೀಕರು, ತಾವು ಎದುರಿಸುತ್ತಿರುವ ಸವಾಲುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಸದ್ಯದ ಪರಿಸ್ಥಿತಿಯಲ್ಲಿ ಒಟ್ಟು ಸಕ್ಕರೆ ಉತ್ಪಾದನೆ ಮತ್ತು ಮಾರಾಟದ ಲೆಕ್ಕಾಚಾರದಲ್ಲಿ ಉತ್ತರ ಭಾರತದ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚು ಅನುಕೂಲವಾಗುತ್ತಿದೆ ಮತ್ತು ದಕ್ಷಿಣ ಭಾರತದ ಕಾರ್ಖಾನೆಗಳಿಗೆ ಅನ್ಯಾಯ ಆಗುತ್ತಲೇ ಇದೆ ಎಂದು ಅವರು ದೂರಿದರು. ಈ ಕಾರಣದಿಂದಲೇ ಉತ್ತರ ಭಾರತದ ಮಾಲೀಕರು ಕೇಂದ್ರದ ವಿರುದ್ಧ ಧ್ವನಿ ಎತ್ತುತ್ತಿಲ್ಲ, ಆದರೆ ನಾವು ಧ್ವನಿ ಎತ್ತಿಯೂ ಪ್ರಯೋಜನವಾಗುತ್ತಿಲ್ಲ ಎಂಬ ನೋವನ್ನು ವ್ಯಕ್ತಪಡಿಸಿದರು.
"ಕಬ್ಬು ಬೆಳೆಗಾರರ ಕಣ್ಣೀರು ಒರೆಸಲು ನಾವು ಸಾಲ ಮಾಡಿ, ಬ್ಯಾಂಕ್‌ಗಳ ಬೆನ್ನು ಬಿದ್ದು ಕಾರ್ಖಾನೆಗಳನ್ನು ಸ್ಥಾಪಿಸಿದ್ದೇವೆ. ಆದರೆ, ರೈತರ ಹೆಸರಿನಲ್ಲಿ ಕೆಲವರು ನಮ್ಮನ್ನು ದರೋಡೆಕೋರರು ಎಂದು ಕರೆಯುತ್ತಿರುವುದು ನೋವು ತರುತ್ತಿದೆ. ಇದೆಲ್ಲಾ ಸಾಕಾಗಿದೆ. ನಷ್ಟದಲ್ಲಿಯೇ ನಾವು ಕಾರ್ಖಾನೆ ನಡೆಸಬೇಕೆಂದರೆ, ಕಾರ್ಖಾನೆಗಳನ್ನೇ ಸರ್ಕಾರಕ್ಕೆ ಬಿಟ್ಟುಕೊಡಲು ಸಿದ್ಧರಿದ್ದೇವೆ ಸರ್ಕಾರವೇ ನಡೆಸಲಿ ಅಥವಾ ಬೇರೆಯವರಿಗೆ ನೀಡಲಿ" ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾರ್ಖಾನೆ ನಡೆಸುವುದು ಬಹಳ ಕಷ್ಟವಾಗಿದೆ. ಮಹಾರಾಷ್ಟ್ರದ ಕಬ್ಬಿನಲ್ಲಿ ʼರಿಕವರಿ ಪ್ರಮಾಣʼ ಶೇ.14ರಷ್ಟಿದೆ. ಆದರೆ ಇಲ್ಲಿನ ಕಬ್ಬಿನಿಂದ ಸಿಗುವ ರಿಕವರಿ ಪ್ರಮಾಣ ಕಡಿಮೆ ಇದ್ದರೂ, ಅದೇ ಹಣವನ್ನು ಇಲ್ಲಿನವರು ಕೇಳುತ್ತಾರೆ ಎಂದು ಅಳಲು ತೋಡಿಕೊಂಡರು. ಸಕ್ಕರೆ ಕಾರ್ಖಾನೆಗಳು ಸಕ್ಕರೆ, ವಿದ್ಯುತ್ ಮತ್ತು ಎಥೆನಾಲ್ ಉತ್ಪಾದನೆ ಮಾಡಿದರೂ, ಕಾರ್ಮಿಕರ ಸವಲತ್ತು, ಸಂಬಳ ಮತ್ತು ರೈತರ ಬೇಡಿಕೆಗಳನ್ನು ಪೂರೈಸುವುದರಿಂದ ನಿರಂತರ ನಷ್ಟದಲ್ಲಿಯೇ ಮುಂದುವರಿದಿವೆ ಎಂದು ಅವರು ಸಿಎಂ ಮುಂದೆ ಸಮಸ್ಯೆಗಳನ್ನು ತೋಡಿಕೊಂಡರು.

