ನವೆಂಬರ್‌ 1ರಿಂದ ಕಬ್ಬು ನುರಿಸುವಿಕೆ ಆರಂಭ: ಕಬ್ಬು ನಿಯಂತ್ರಣ ಮಂಡಳಿ ಸಭೆ ತೀರ್ಮಾನ
x

ನವೆಂಬರ್‌ 1ರಿಂದ ಕಬ್ಬು ನುರಿಸುವಿಕೆ ಆರಂಭ: ಕಬ್ಬು ನಿಯಂತ್ರಣ ಮಂಡಳಿ ಸಭೆ ತೀರ್ಮಾನ

ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಯಲ್ಲಿ ಇದೇ ತಿಂಗಳು ೨೨ರಿಂದ ಕಬ್ಬು ನುರಿಸುವಿಕೆ ಪ್ರಾರಂಭ. ಕಬ್ಬಿನ ಬಾಕಿ ಬಿಲ್‌ ಪಾವತಿ ವಿಚಾರದಲ್ಲಿ ಕರ್ನಾಟಕ ಮಾದರಿಯಾಗಿದೆ.


ರಾಜ್ಯದಲ್ಲಿ ಕಬ್ಬು ನುರಿಸುವಿಕೆಯನ್ನು ನವೆಂಬರ್‌ ೧ರಿಂದ ಆರಂಭಿಸಲು ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಬ್ಬು, ಸಕ್ಕರೆ ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆ ಹೊರತು ಪಡಿಸಿ ಇನ್ನುಳಿದ ಜಿಲ್ಲೆಯಲ್ಲಿ ನವೆಂಬರ್‌ ೧ರಿಂದ ಕಬ್ಬು ನುರಿಸುವಿಕೆ ಆರಂಭಿಸಲಾಗುತ್ತಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ಇದೇ ತಿಂಗಳು ೨೨ರಿಂದ ಆರಂಭಿಸಲಾಗುತ್ತದೆ. ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಕಬ್ಬು ಇಳುವರಿ ಕೂಡಾ ಚೆನ್ನಾಗಿದೆ. ಹೀಗಾಗಿ ಮುಂಚಿತವಾಗಿಯೇ ಕಬ್ಬು ನುರಿಸುವಿಕೆ ಆರಂಭಿಸುವ ಅಭಿಪ್ರಾಯಕ್ಕೆ ರೈತ ಮುಖಂಡರನ್ನೊಳಗೊಂಡ ಕಬ್ಬು ನಿಯಂತ್ರಣ ಮಂಡಳಿ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ.

ಬಳಿಕ ಮಾಧ್ಯಮಗೋಷ್ಠಿಯಲ್ಲಿ ಸಚಿವ ಶಿವಾನಂದ ಪಾಟೀಲ್‌, ತೂಕದಲ್ಲಿ ವಂಚನೆ ತಡೆ, ಕಬ್ಬು ಪೂರೈಕೆ ಮಾಡಿದ ರೈತರಿಗೆ ನಿಗದಿತ ಸಮಯದಲ್ಲಿ ಬಿಲ್‌ ಪಾವತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕಳೆದ ಮೂರು ವರ್ಷದ ಹಂಗಾಮಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬಿಲ್‌ ಪಾವತಿಯಾಗಿದೆ. ಕಬ್ಬು ಪೂರೈಕೆ ಮಾಡಿದ 14 ದಿನಗಳೊಳಗೆ ಬಿಲ್‌ ಪಾವತಿ ಮಾಡಬೇಕು ಎಂಬ ನಿಯಮ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನವಹಿಸುತ್ತಿದೆ. ಕಬ್ಬಿನ ಬಾಕಿ ಬಿಲ್‌ ಪಾವತಿ ವಿಚಾರದಲ್ಲಿ ಕರ್ನಾಟಕ ಇತರೆ ಕಬ್ಬು ಬೆಳೆಯುವ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಬ್ಬು ಪೂರೈಕೆ ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಉತ್ತರ ಪ್ರದೇಶದಲ್ಲಿ 594 ಕೋಟಿ ರೂಪಾಯಿ, ಮಹಾರಾಷ್ಟ್ರದಲ್ಲಿ 123 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ. ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಕರ್ನಾಟಕ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮೇಲೆ ಒತ್ತಡ ಹಾಕಿ ಬಿಲ್‌ ಪಾವತಿಗೆ ಕ್ರಮ ಕೈಗೊಂಡಿದೆ. 2025-26ನೇ ಸಾಲಿನ ಹಂಗಾಮಿಗೆ ಎಫ್‌ಆರ್‌ಪಿ ದರವನ್ನು ಪ್ರತಿಶತ9.5ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಮೆಟ್ರಿಕ್‌ ಟನ್‌ಗೆ ೪,೪೪೦ ರೂಪಾಯಿ ಅಥವಾ 4200 ರೂಪಾಯಿ ನಿಗದಿಪಡಿಸಬೇಕು ಎಂಬುದಾಗಿ ಕೇಂದ್ರ ಸರ್ಕಾರಕ್ಕೆ ಕಳೆದ ಜನವರಿಯಲ್ಲೇ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಕೇಂದ್ರ ಸರ್ಕಾರ ಪ್ರತಿಶತ 10.25 ಸಕ್ಕರೆ ಇಳುವರಿಗೆ ಪ್ರತಿಟನ್‌ಗೆ 3,550 ರೂಪಾಯಿ, ಪ್ರತಿಶತ 10.25ಕ್ಕೂ ಮೇಲ್ಪಟ್ಟ ಇಳುವರಿಗೆ ನಂತರದ ಶೇಕಡ 1ರಷ್ಟು ಇಳುವರಿಗೆ ಪ್ರತಿ ಮೆಟ್ರಿಕ್‌ ಟನ್‌ಗೆ ೩೪೬ ರೂಪಾಯಿ ಹೆಚ್ಚುವರಿ ಬೆಲೆ ನಿಗದಿಪಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.

2024-25ನೇ ಹಂಗಾಮಿನಲ್ಲಿ ಕಬ್ಬು ಬಿಲ್‌ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ವಸೂಲಾತಿ ಪ್ರಮಾಣ ಪತ್ರವನ್ನು ಜಾರಿಗೊಳಿಸಲಾಗಿದೆ. ಕೆಲವು ಕಾರ್ಖಾನೆಗಳು ಎಫ್‌ಆರ್‌ಪಿ ದರದಂತೆ ಸಂಪೂರ್ಣ ಹಣ ಪಾವತಿ ಮಾಡಿದ್ದರೂ ಕಬ್ಬು (ನಿಯಂತ್ರಣ) ಆದೇಶದ ಅನ್ವಯ ವಿಳಂಬದ ಅವಧಿಗೆ ರೈತರಿಗೆ ಪ್ರತಿಶತ 15ರಂತೆ ಬಡ್ಡಿ ವಿತರಿಸಿರುವ ಬಗ್ಗೆ ಮಾಹಿತಿ ನೀಡಿಲ್ಲ. ಕೆಲವು ಕಾರ್ಖಾನೆಗಳು ಅಸಲು ಮೊತ್ತವನ್ನೂ ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಮೊತ್ತದ ವಿಚಾರವಾಗಿ ಕಬ್ಬು ಬೆಳೆಗಾರರ ಸಭೆ ಕರೆದು ಕಬ್ಬಿನ ಬಾಕಿ ಬಿಲ್‌ ಪಾವತಿ ಬಗ್ಗೆ ಖಚಿತಪಡಿಸಕೊಳ್ಳಲು ಹಾಗೂ ಈ ವಿಚಾರವಾಗಿ ಅನುಪಾಲನಾ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಡಿಜಿಟಲ್‌ ತೂಕದ ಯಂತ್ರಗಳನ್ನು ಅಳವಡಿಸಿದ ನಂತರ ವಂಚನೆ ದೂರುಗಳು ಕಡಿಮೆಯಾಗಿವೆ. ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಅನಿರೀಕ್ಷಿತವಾಗಿ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಬೇಕು. ಡಿಜಿಟಲ್‌ ತೂಕದ ಯಂತ್ರಗಳಲ್ಲಿ ವಂಚನೆ ಮಾಡಲು ಅವಕಾಶ ಇರುವುದಿಲ್ಲ ಎನ್ನಲಾಗಿದೆ. ಆದರೂ ಅಧಿಕಾರಿಗಳು ಪರಿಶೀಲನೆ ಮಾಡುವುದು ಕಡ್ಡಾಯ. ಮಾಪನಶಾಸ್ತ್ರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಹೀಗಾಗಿ ಸಬೂಬು ಹೇಳದೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ರಾಜ್ಯದ ಎಲ್ಲ ಎಪಿಎಂಸಿಗಳಲ್ಲೂ ತೂಕದ ಯಂತ್ರಗಳನ್ನು ಅಳವಡಿಸಿ ಉಚಿತವಾಗಿ ತೂಕ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

ಐದು ಲಕ್ಷ ರೂಪಾಯಿ ಬಹುಮಾನ

ತೂಕದಲ್ಲಿ ವಂಚನೆಯನ್ನು ದಾಖಲೆ ಸಹಿತ ದೂರು ನೀಡುವ ರೈತರಿಗೆ ಈಗಾಗಲೇ ಐದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ. ಜೊತೆಗೆ ರೈತರ ಕಬ್ಬು ನುರಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಇದುವರೆಗೆ ತೂಕದಲ್ಲಿ ವಂಚನೆಯ ದೂರುಗಳು ಬಂದಿಲ್ಲ. ಅನ್‌ಲಾಗ್‌ ತೂಕದ ಯಂತ್ರಗಳು ಇದ್ದ ಸಮಯದಲ್ಲಿ ಸುಮಾರು ನೂರು ದೂರುಗಳು ಬರುತ್ತಿದ್ದವು. ಆದರೆ ಡಿಜಿಟಲ್‌ ತೂಕದ ಯಂತ್ರ ಅಳವಡಿಸಿದ ನಂತರ ದೂರುಗಳ ಸಂಖ್ಯೆ ಹತ್ತಕ್ಕಿಂತ ಕಡಿಮೆ ಇದೆ. ದೂರುಗಳು ಶೂನ್ಯಕ್ಕೆ ಇಳಿಯಬೇಕು. ಇದು ಸರ್ಕಾರದ ಆಶಯ ಎಂದಿದ್ದಾರೆ.

Read More
Next Story