CET exam| ಸಿಇಟಿ ಬರೆಯಲು ಬಂದ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಆರೋಪ; ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
x

ಸಾಂಧರ್ಬಿಕ ಚಿತ್ರ

CET exam| ಸಿಇಟಿ ಬರೆಯಲು ಬಂದ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಆರೋಪ; ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ವಿದ್ಯಾರ್ಥಿಗಳು ಜನಿವಾರ ತೆಗೆದುಹಾಕುವಂತೆ ಹೇಳುವುದು ವಿದ್ಯಾರ್ಥಿಗಳು ಮತ್ತು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ದೂರುದಾರರು ಆರೋಪಿಸಿದ್ದರು.


ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಬಲವಂತವಾಗಿ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಪಿಯು ಕಾಲೇಜಿನ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಜನಿವಾರ ತೆಗೆದು ಪರೀಕ್ಷಾ ಕೇಂದ್ರಕ್ಕೆ ಹೋಗಲು ಹೇಳಿದ್ದಾರೆ. ಅದಕ್ಕೆ ವಿದ್ಯಾರ್ಥಿ ಇದು ಗಾಯತ್ರಿ ದೀಕ್ಷೆಯಿಂದ ಹಾಕಿರುವ ಜನಿವಾರ. ಇದನ್ನು ತೆಗೆಯಲ್ಲ ಎಂದಿದ್ದಾನೆ. ಆದರೂ ಒಪ್ಪದ ಪರೀಕ್ಷಾ ಕೇಂದ್ರದ ಸಿಬ್ಬಂದಿ ಜನಿವಾರವನ್ನು ಬಲವಂತವಾಗಿ ತೆಗೆಸಿದ್ದಾರೆ. ಅಲ್ಲದೇ ವಿದ್ಯಾರ್ಥಿ ಕೈಲಿದ್ದ ಕಾಶಿದಾರವನ್ನು ತೆಗೆಸಿದ್ದಾರೆ. ಸಿಬ್ಬಂದಿಗಳ ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ಬಗ್ಗೆ ಕರ್ನಾಟಕ ಬ್ರಾಹ್ಮಣ ಸಭಾದ ನಟರಾಜ್ ಭಾಗವತ್ ಅವರು ಶುಕ್ರವಾರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಸೆಕ್ಷನ್ 115 (2) (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 299 (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಅವರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), 351 (1) (ಕ್ರಿಮಿನಲ್ ಬೆದರಿಕೆ), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಭಾರತೀಯ ನ್ಯಾಯ ಸಂಹಿತಾದ 3(5) (ಸಾಮಾನ್ಯ ಉದ್ದೇಶ) ಸೆಕ್ಷನ್‌ನಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನಿವಾರ ತೆಗೆಸಿದ ಪ್ರಕರಣ ಸಂಬಂಧ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಶುಕ್ರವಾರ ಸಂಜೆ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆಯ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ, ಅಧಿಕಾರಿಗಳ ವಿರುದ್ದ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗಿಲ್ಲ. ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ವಿದ್ಯಾರ್ಥಿಗಳು ಜನಿವಾರ ತೆಗೆದುಹಾಕುವಂತೆ ಹೇಳುವುದು ವಿದ್ಯಾರ್ಥಿಗಳು ಮತ್ತು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ದೂರುದಾರರು ಆರೋಪಿಸಿದ್ದರು.

ಈ ಘಟನೆಯು ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಅಧಿಕಾರಿಗಳ ​​ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಭರವಸೆ ನೀಡಿದ್ದಾರೆ.

ಏನಿದು ಪ್ರಕರಣ

ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಾಗುತ್ತದೆ. ಬುಧವಾರ ಆದಿಚುಂಚನಗಿರಿ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಮೂವರು ವಿದ್ಯಾರ್ಥಿಗಳು ತಾವು ಧರಿಸಿದ್ದ ಜನಿವಾರವನ್ನು ತೆಗೆದು ಪರೀಕ್ಷೆ ಬರೆಯಲು ಸೂಚಿಸಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಜನಿವಾರ ತೆಗೆಯಲು ನಿರಾಕರಿಸಿದ್ದು, ಉಳಿದ ಇಬ್ಬರು ಪರೀಕ್ಷಾ ಕೊಠಡಿ ಪ್ರವೇಶಿಸುವ ಮೊದಲು ಜನಿವಾರವನ್ನು ತೆಗೆದು ಪರೀಕ್ಷೆ ಬರೆದಿದ್ದಾರೆ.

Read More
Next Story