
ಸಿಇಟಿ ಕೀ ಉತ್ತರ ಪ್ರಕಟವಾಗಿದೆ.
CET Exam | ಒಎಂಆರ್ ಶೀಟ್ ಸಾರ್ವಜನಿಕ ವೀಕ್ಷಣೆಗೆ ಮುಕ್ತ; ಪಾರದರ್ಶಕತೆಯಲ್ಲಿ ಕೆಇಎ ಮತ್ತೊಂದು ಹೆಜ್ಜೆ
ಪರೀಕ್ಷೆ ಮುಗಿದ ಎರಡು ದಿನಗಳಲ್ಲಿ 155ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳ ಸುಮಾರು ಮೂರು ಲಕ್ಷ ಓಎಂಆರ್ ಶೀಟ್ ಗಳನ್ನು ಈಗಾಗಲೇ ಅಪ್ ಲೋಡ್ ಮಾಡಿದ್ದು, ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಿವೆ ಎಂದು ಕೆಇಎ ತಿಳಿಸಿದೆ.
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೊಂದು ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಎಲ್ಲ ವಿಷಯಗಳ ಓಎಂಆರ್ ಶೀಟ್ ಗಳನ್ನು ತನ್ನ ವೆಬ್ ಸೈಟ್ ನಲ್ಲಿ ಪರೀಕ್ಷಾ ಕೇಂದ್ರವಾರು ಅಪ್ ಲೋಡ್ ಮಾಡುತ್ತಿದ್ದು ಯಾರು ಬೇಕಾದರೂ ಅವುಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷೆ ಮುಗಿದ ಎರಡು ದಿನಗಳಲ್ಲಿ 155ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳ ಸುಮಾರು ಮೂರು ಲಕ್ಷ ಓಎಂಆರ್ ಶೀಟ್ ಗಳನ್ನು ಈಗಾಗಲೇ ಅಪ್ ಲೋಡ್ ಮಾಡಿದ್ದು, ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಿವೆ. ಇನ್ನೂ ಸುಮಾರು 8.5 ಲಕ್ಷ ಒಎಂಆರ್ ಶೀಟ್ ಗಳ ಸ್ಕ್ಯಾನಿಂಗ್ ನಿರಂತರವಾಗಿ ನಡೆಯುತ್ತಿದ್ದು, ಅದು ಮುಗಿದ ಮೇಲೆ ಅವುಗಳನ್ನೂ ಅಪ್ ಲೋಡ್ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ವ್ಯವಸ್ಥೆ ಮೇಲೆ ಯಾರಿಗೂ ಅಪನಂಬಿಕೆ ಇರಬಾರದು. ಯಾರೊ ಓಎಂಆರ್ ತಿದ್ದುತ್ತಾರೆ ಎನ್ನುವ ಎಲ್ಲ ರೀತಿಯ ಅನುಮಾನಗಳಿಗೆ ಇತಿಶ್ರೀ ಹಾಡಲು ಈ ತೀರ್ಮಾನ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಜಿಲ್ಲೆ ಮತ್ತು ಪರೀಕ್ಷಾ ಕೇಂದ್ರವಾರು ಎಲ್ಲ ವಿಷಯಗಳ ಓಎಂಆರ್ ವೆಬ್ ಸೈಟ್ ನಲ್ಲಿ ಲಭ್ಯ ಇರಲಿವೆ. ಹೀಗಾಗಿ ಯಾರದ್ದು, ಯಾರು ಬೇಕಾದರೂ ನೋಡಿಕೊಂಡು ತಮ್ಮ ಫಲಿತಾಂಶವನ್ನು ತಿಳಿಯಬಹುದು ಎಂದೂ ಅವರು ಹೇಳಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಅಭ್ಯರ್ಥಿಗಳ ಮುಖ ಚಹರೆ ದೃಢೀಕರಣ ವ್ಯವಸ್ಥೆಯನ್ನು ಚಾಲ್ತಿಗೆ ತಂದಿತ್ತು. ನಕಲು ತಡೆಯಲು ಎಐ ಆಧರಿತ ಕಣ್ಗಾವಲು ವ್ಯವಸ್ಥೆಯನ್ನೂ ಮಾಡಿತ್ತು.