
ಕನಿಷ್ಠ ಐದು ವರ್ಷ ವಯೋಮಿತಿ ಹೆಚ್ಚಳ ಮಾಡುವಂತೆ ಸ್ಪರ್ಧಾರ್ಥಿಗಳು ಮನವಿ ಮಾಡಿದರು.
ವಿವಿಧ ಇಲಾಖೆಗಳಲ್ಲಿ ಉದ್ಯೋಗ: ಕನಿಷ್ಠ ಐದು ವರ್ಷಕ್ಕಾದರೂ ವಯೋಮಿತಿ ಸಿಡಿಲಿಸಿ: ಸ್ಪರ್ಧಾರ್ಥಿಗಳ ಕಣ್ಣೀರ ನಿವೇದನೆ
ಶೀಘ್ರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಸ್ಪರ್ಧಾರ್ಥಿಗಳು ಇತ್ತೀಚೆಗೆ ಧಾರವಾಢದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಈ ಹೋರಾಟವನ್ನು ನಿರ್ಲಕ್ಷಿಸದೇ ವಯೋಮಿತಿ ಕನಿಷ್ಠ ಐದು ವರ್ಷ ಹೆಚ್ಚಳ ಮಾಡಬೇಕು.
ರಾಜ್ಯ ಸರ್ಕಾರ ಹೊರಡಿಸುವ ವಿವಿಧ ನೇಮಕಾತಿ ಅಧಿಸೂಚನೆಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಮೂರು ವರ್ಷ ಹೆಚ್ಚಳ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್} ಆದೇಶಿಸಿದೆ. ಆದರೆ ಈ ವಯೋಮಿತಿ ಸಡಿಲಿಕೆ ವಿರುದ್ಧ ಸ್ಪರ್ಧಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕನಿಷ್ಠ ಐದು ವರ್ಷ ಸಡಿಲಿಕೆ ಮಾಡುವಂತೆ ಆಗ್ರಹಿಸಿದ್ದಾರೆ. ಜತೆಗೆ ಕಣ್ಣೀರು ಹಾಕಿ ಮನವಿಯನ್ನೂ ಮಾಡಿದ್ದಾರೆ.
ದ ಫೆಡರಲ್ ಜತೆ ಆನೇಕ ಸ್ಪರ್ಧಾಕಾಂಕ್ಷಿ ಅಭ್ಯರ್ಥಿಗಳು ಮಾತನಾಡಿದ್ದು, ಸರ್ಕಾರಕ್ಕೆ ಕೆಲವರು ಕಣ್ಣೀರಿನ ಮನವಿ ಮಾಡಿದ್ದರೆ, ಇನ್ನೂ ಹಲವರು ಹೋರಾಟದ ಬಾವುಟ ಹಾರಿಸುವ ಶಪಥಮಾಡಿದ್ದಾರೆ.
ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರವ ಉತ್ತರ ಕರ್ನಾಟಕದ ಶಾರದಾ ಹಾವೇರಿ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ಒಳಮೀಸಲಾತಿ ನೀಡಲು ಸರ್ಕಾರ ಕಳೆದೊಂದು ವರ್ಷದಿಂದ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಆದರೆ ಬೆಂಗಳೂರು, ಧಾರವಾಡ, ವಿಜಯಪುರ, ಕಲಬುರಗಿ ಸೇರಿದಂತೆ ವಿವಿಧೆಡೆ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿನ ನೇಮಕಾತಿಗಳಿಗೆ ಬೇರೆ ರಾಜ್ಯಗಳಂತೆ 33 ವರ್ಷಕ್ಕೆ ವಯೋಮಿತಿ ಹೆಚ್ಚಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ವಿರೋಧ ಪಕ್ಷದಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಯೋಮಿತಿ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದಾಗ ವಯೋಮಿತಿ ಹೆಚ್ಚಳ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು".
"ರಾಜ್ಯ ಸರ್ಕಾರ ನುಡಿದಂತೆ ನಡೆಯದೇ ಮಾತಿಗೆ ತಪ್ಪುತ್ತಿದೆ. ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಒಂದು ಲಕ್ಷ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗುವುದು ಹಾಗೂ ಪೊಲೀಸ್ ಹುದ್ದೆಗಳಿಗೆ ವಯೋಮಿತಿ ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ವಿವಿಧ ಕಾರಣಗಳಿಂದಾಗಿ ಕಳೆದೊಂದು ವರ್ಷದಿಂದ ನೇಮಕಾತಿಯನ್ನು ತಡೆಹಿಡಿಹಿಡಿಯಲಾಗಿತ್ತು. ಇದರಿಂದ ಸಾವಿರಾರು ಆಕಾಂಕ್ಷಿಗಳಿಗೆ ವಯೋಮಿತಿ ಮೀರುವ ಆತಂಕವೂ ಇದೆ. ಹೊಸ ಅಧಿಸೂಚನೆಗಳಿಗೆ ಕನಿಷ್ಠ ಐದು ವರ್ಷ ಸಡಿಲಿಕೆ ಮಾಡಬೇಕು ಎಂದು ವಿದ್ಯಾರ್ಥಿಗಳ ಮನವಿಯಾಗಿತ್ತು. ಆದರೆ ಇದೀಗ ವಿವಿಧ ಇಲಾಖೆಗಳ ನೇರ ನೇಮಕಾತಿಗಳಲ್ಲಿ ಕೇವಲ ಮೂರು ವರ್ಷ ಮಾತ್ರ ವಯೋಮಿತಿ ಸಡಿಲಿಕೆ ಮಾಡಿರುವುದು ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯ" ಎಂದು ಸ್ಪರ್ಧಾರ್ಥಿ ಸುನೀಲ್ ತಿಳಿಸಿದರು.
"ವಯೋಮಿತಿ ಸಡಿಲಿಕೆ ಮಾಡಬೇಕು ಹಾಗೂ ಶೀಘ್ರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಸ್ಪರ್ಧಾರ್ಥಿಗಳು ಇತ್ತೀಚೆಗೆ ಧಾರವಾಢದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಈ ಹೋರಾಟವನ್ನು ನಿರ್ಲಕ್ಷಿಸದೇ ವಯೋಮಿತಿ ಕನಿಷ್ಠ ಐದು ವರ್ಷ ಹೆಚ್ಚಳ ಮಾಡಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ವಿಜಯಪುರ, ಕಲುಬುರಗಿ, ಕೊಪ್ಪಳ, ಬೆಳಗಾವಿ ಹಾಗೂ ಬೆಂಗಳೂರಿನಲ್ಲೂ ಬೃಹತ್ ಪ್ರತಿಭಟನೆ ಮಾಡಲಾಗುವುದು" ಎಂದು ಸ್ಪರ್ಧಾರ್ಥಿ ದೇವರಾಜು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಅಭ್ಯರ್ಥಿಗಳಲ್ಲರೂ ದ ಫೆಡರಲ್ ಕರ್ನಾಟಕದ ಜತೆ ಅಳಲುತೋಡಿಕೊಂಡಿರುವ ಈ ವಿಡಿಯೋಗೆ ಇಲ್ಲಿ ಕ್ಲಿಕ್ ಮಾಡಿ..