Students Beware |ಕಾಲೇಜು ವಿದ್ಯಾರ್ಥಿಗಳೇ ... ದಂಧೆಕೋರರ  ಕಬಂಧಬಾಹುಗಳ ತೆಕ್ಕೆಗೆ ಜಾರಬೇಡಿ..!
x

Students Beware |ಕಾಲೇಜು ವಿದ್ಯಾರ್ಥಿಗಳೇ ... ದಂಧೆಕೋರರ ಕಬಂಧಬಾಹುಗಳ ತೆಕ್ಕೆಗೆ ಜಾರಬೇಡಿ..!

ಸಾಮಾಜಿಕ ವ್ಯವಸ್ಥೆಯನ್ನೇ ಹಾಳು ಮಾಡುವ ಹಾಗೂ. ಮಕ್ಕಳ ಸುಂದರ ಬದುಕನ್ನು ನಾಶ ಮಾಡುವ ಅನಿಷ್ಟ ಕೆಲಸವಿದು. ಇದಕ್ಕೆ ಸ್ಥಳೀಯರು, ಅಧಿಕಾರಿಗಳು ಕಡಿವಾಣ ಹಾಕಬೇಕು ಎನ್ನುತ್ತಾರೆ ಒಡನಾಡಿ ಸಂಸ್ಥೆಯ ಪರಶುರಾಮ್.


ಮಂಡ್ಯದಲ್ಲಿ ಮೊನ್ನೆ ಮೊನ್ನೆ ವೇಶ್ಯಾವಾಟಿಕೆ ಕೇಂದ್ರದ ಮೇಲೆ ದಾಳಿ ನಡೆದು, ಸ್ಪಾ ಮಾಲಕಿ ಮತ್ತು ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ದಂಧೆಯ ಹಿಂದೆ ಅತ್ಯಂತ ಕರಾಳವಾದ ಕಬಂಧ ಬಾಹುಗಳು ಇರುವುದು, ಕಾನೂನಿನ ಹಿಡಿತಕ್ಕೆ ಸಿಕ್ಕದೇ ಇರುವುದು ದೊಡ್ಡ ಆಘಾತಕಾರಿ ವಿಚಾರ.

ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು, ಅವರ ಅಸಹಾಯಕತೆ, ದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡಿರುವ ದುರುಳರು ಹೊಸ ಹೊಸ ದಾಳಗಳನ್ನು ಉರುಳಿಸಿ ವಿದ್ಯಾರ್ಥಿಗಳನ್ನು ಬಲೆಗೆ ಬೀಳಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯದ ಪ್ರತಿಷ್ಠಿತ ಕಾಲೇಜು ಪಕ್ಕದಲ್ಲಿ, ಟ್ಯೂಷನ್ ಸೆಂಟರ್‌ನ ತಳ ಮಹಡಿಯೊಂದರಲ್ಲಿ ನಡೆಯುತ್ತಿದ್ದ ಕ್ಲೌಡ್ 11 ಸ್ಪಾ ಮೇಲೆ ಆರು ತಿಂಗಳ ಹಿಂದೆಯೂ ದಾಳಿ ನಡೆದಿತ್ತು. ಇದೀಗ ಮತ್ತೆ ದಾಳಿ ನಡೆದು ಕೆಲವರ ಬಂಧನವಾಗಿದೆ ಎಂದರೆ ಅದಕ್ಕೆ ಇರುವ ಶಕ್ತಿ, ಅಧಿಕಾರಿಗಳು, ಜನಪ್ರತಿನಿಧಿಗಳ ಬೆಂಬಲ ಇಲ್ಲದೇ ಇದು ಸಾಧ್ಯವಾಗುತ್ತದೆಯೇ ಎನ್ನುವ ಪ್ರಶ್ನೆಯನ್ನೂ ಸಾರ್ವಜನಿಕರಲ್ಲಿ ಹುಟ್ಟುಹಾಕಿದೆ.

ಕಾಲೇಜುಗಳ ಪಕ್ಕದಲ್ಲಿಯೇ ಸೆಂಟರ್..!

ಸಾವಿರಾರು ವಿದ್ಯಾರ್ಥಿಗಳೇ ದಂಧೆಕೋರರ ಗುರಿ. ಹಂತ ಹಂತವಾಗಿ ವಿದ್ಯಾರ್ಥಿಗಳನ್ನು ಗಮನಿಸುವ ಇವರು, ತಮ್ಮ ಹಿಡಿತಕ್ಕೆ ಸಿಕ್ಕಿಹಾಕಿಕೊಳ್ಳಬಹುದಾದ ವಿದ್ಯಾರ್ಥಿಗಳನ್ನು ಪತ್ತೆ ಮಾಡುತ್ತಾರೆ. ನಿಧಾನವಾಗಿ ಪರಿಚಯ ಮಾಡಿಕೊಂಡು ಬೇರೆ ಬೇರೆ ಆಮಿಷಗಳನ್ನು ಒಡ್ಡಿ, ನಿಯಂತ್ರಣ ಸಾಧಿಸುತ್ತಾರೆ. ಮೊದ ಮೊದಲು ಕೇಳಿದ್ದೆಲ್ಲಾವೂ ಸುಲಭಕ್ಕೆ ಸಿಕ್ಕುತ್ತಿದೆ ಎನ್ನುವ ಸಂತೋಷ, ವಯಸ್ಸಿನ ಕಾರಣಕ್ಕೆ ಹುಟ್ಟಿಕೊಳ್ಳುವ ಆಸೆಗಳು ಈಡೇರುತ್ತಿವೆ ಎನ್ನುವ ಉತ್ಸಾಹ, ದಂಧೆಕೋರರು ನಮ್ಮ ಪಾಲಿನ ಬಂಧುಗಳು ಎನ್ನುವ ಭ್ರಮಾಲೋಕಕ್ಕೆ ಸುಲಭವಾಗಿ ಜಾರುತ್ತಾರೆ. ಹೀಗೆ ಗಾಢಾಂಧಕಾರಕ್ಕೆ ಜಾರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ಘೋರ ದುರಂತವೇ ಸರಿ ಎಂದು ಪೊಲೀಸ್‌ ಹಿರಿಯ ಅಧಕಾರಿಗಳ ಅನಿಸಿಕೆ.

ಜಾಗೃತರಾಗಿರಿ...

ವಿದ್ಯಾರ್ಥಿಗಳು ಕಾಲೇಜು, ಟ್ಯೂಷನ್ ಕೇಂದ್ರಗಳಿಗೆ ಹೇಗೆ ಬರುತ್ತಾರೆ, ಧರಿಸುವ ಬಟ್ಟೆ, ಹಾಕುವ ಚಪ್ಪಲಿ, ಒಡವೆ, ನಡವಳಿಕೆ ಎಲ್ಲವನ್ನೂ ದಂಧೆಕೋರರು ಗಮನಿಸುತ್ತಿರುತ್ತಾರೆ. ಅವರ ಬಳಿ ಮೊಬೈಲ್ ಇದೆಯೇ..? ಅವರ ಸ್ನೇಹಿತರ ಕೂಟ ಹೇಗಿದೆ ಎನ್ನುವ ಬಗ್ಗೆ ಎಲ್ಲಾ ಅಧ್ಯಯನ ಮಾಡುತ್ತಾರೆ. ಇದೇ ಕಾರಣಕ್ಕೆ ಟ್ಯೂಷನ್ ಕೇಂದ್ರದ ಕೆಳಗೇ ಇವರು ಸಲೂನ್ ಸೆಂಟರ್ ತೆರೆಯುವುದು. ಬಳಿಕ ಆಯ್ದ ವಿದ್ಯಾರ್ಥಿಗಳ ಪರಿಚಯ ಮಾಡಿಕೊಂಡು, ನಮ್ಮಲ್ಲಿಯೇ ಪಾರ್ಟ್ ಟೈಮ್ ಜಾಬ್ ಮಾಡಿ, ನಿಮಗೆ ಇಷ್ಟು ಸಂಬಳ ಕೊಡುತ್ತೇವೆ, ಕೆಲಸ ಕೊಡುತ್ತೇವೆ, ಮೊಬೈಲ್ ಕೊಡಿಸುತ್ತೇವೆ, ಖರ್ಚಿಗೆ ಹಣ ಕೊಡುತ್ತೇವೆ ಎಂದು ಆಮಿಷ ಒಡ್ಡುತ್ತಾರೆ. ಹೆಚ್ಚಿನವರು ಇದನ್ನು ಒಪ್ಪದೇ ಇದ್ದರೂ ಕೇವಲ ಶೇ.1 ಅಥವಾ 2% ವಿದ್ಯಾರ್ಥಿಗಳು ಒಪ್ಪಿದರೆ ಸಾಕು. ಮೂರು ಸಾವಿರ ವಿದ್ಯಾರ್ಥಿಗಳಲ್ಲಿ 50, 60 ವಿದ್ಯಾರ್ಥಿಗಳು ಇವರ ಬಲೆಗೆ ಬಿದ್ದರೂ ಇವರ ಅವ್ಯವಹಾರ ಆಬಾಧಿತವಾಗಿ ಸಾಗುತ್ತದೆ.

ಮೊದಲು ಹಿತ ನುಡಿ, ಆಮೇಲೆ ಬೆದರಿಕೆ

ಮೊದ ಮೊದಲು ನಯವಾಗಿ ವಿದ್ಯಾರ್ಥಿಗಳನ್ನು ಒಲಿಸಿಕೊಂಡು, ಅವರು ಕೇಳಿದ್ದನ್ನು ಕೊಡಿಸುವ ಈ ಆರೋಪಿಗಳು, ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳ ನಡುವೆ ಪ್ರೀತಿ, ಪ್ರೇಮದ ಹುಚ್ಚು ಹತ್ತಿಸುತ್ತಾರೆ. ಅವರ ವಯಕ್ತಿಕ ಫೋಟೋ, ವಿಡಿಯೋಗಳನ್ನು ಸಂಗ್ರಹಿಸಿಕೊಳ್ಳುತ್ತಾರೆ. ನಂತರ ತಾವು ಹೇಳಿದ ಹಾಗೆ ಕುಣಿಸಲು ಮುಂದಾಗುತ್ತಾರೆ. ವಿರೋಧ ಮಾಡುವವನ್ನು ಬ್ಲಾಕ್ ಮೇಲ್ ಮಾಡುತ್ತಾರೆ. ಅವರ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅವರಿಗೆ ಮಾನಸಿಕ ಹಿಂಸೆ ನೀಡುತ್ತಾರೆ. ಒಂದು ಬಾರಿ ಈ ಬಲೆಯೊಳಗೆ ಸಿಕ್ಕಿಕೊಂಡರೆ ಮತ್ತೆ ಬಿಡಿಸಿಕೊಂಡು ಆಚೆ ಬರಲಾರದಂತಹ ಬೇಲಿಯನ್ನು ಹಾಕಿಬಿಡುತ್ತಾರೆ. ವಿದ್ಯಾರ್ಥಿನಿಯರಿಗೆ ತಾವು ಹೇಳಿದ ದಿನಕ್ಕೆ, ಸಮಯಕ್ಕೆ ಬರಬೇಕು ಎಂದು ಷರತ್ತು ಹಾಕುತ್ತಾರೆ. ಭಯವನ್ನೇ ಗುರಾಣಿಯಾಗಿಸಿಕೊಳ್ಳುತ್ತಾರೆ. ಒಂದು ಕಡೆ ಇದನ್ನೆಲ್ಲಾ ಹೊರಗೂ ಹೇಳಿಕೊಳ್ಳಲಾಗದೇ, ಒಪ್ಪಿಕೊಳ್ಳಲೂ ಆಗದೇ ಒದ್ದಾಡುವ ಮನಸ್ಥಿತಿಗೆ ವಿದ್ಯಾರ್ಥಿಗಳು ಇಳಿಯುತ್ತಿದ್ದಾರೆ.

ಹೊರ ರಾಜ್ಯಗಳಿಂದ...

ಹೊರ ರಾಜ್ಯದ ವಿದ್ಯಾರ್ಥಿಗಳೇ ದಂಧೆಕೋರರ ಪ್ರಮುಖ ಗುರಿ. ಅಕ್ಕಪಕ್ಕದ ಊರಿನವರು, ಗೊತ್ತಿರುವವರು ನಿಮ್ಮನ್ನು ನೋಡುವುದಿಲ್ಲ. ನೀವು ಯಾವುದೇ ಭಯಪಡುವ ಅಗತ್ಯ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬುತ್ತಾರೆ. ಆರು ತಿಂಗಳ ಹಿಂದೆ ದಾಳಿಯಾದರೂ ಮತ್ತೆ ನಾವು ಸೆಲ್ಯೂನ್ ಶುರು ಮಾಡಿದ್ದೇವೆ, ನಮಗೆ ದೊಡ್ಡ ದೊಡ್ಡವರ ಬೆಂಬಲ ಇದೆ, ನೀವು ಏನೂ ಹೆದರುವುದು ಬೇಡ ಎಂದು ಪೊಳ್ಳು ಭರವಸೆ ನೀಡಿ ದಂಧೆಯನ್ನು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತಾರೆ. ಇದು ನಮ್ಮ ವ್ಯವಸ್ಥೆಯ ದೊಡ್ಡ ಕೊಳಕು. ಇದು ನಿಧಾನವಾಗಿ ಯುವ ಸಮುದಾಯವನ್ನು ಬಲಿ ತೆಗೆದುಕೊಳ್ಳುತ್ತದೆ ಎನ್ನುವ ಆತಂಕ ಇದೀಗ ಹೆಚ್ಚಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ಒಂದು ಸ್ಥಳದ ನೈತಿಕ ಶಕ್ತಿಯನ್ನೇ ಕುಗ್ಗಿಸುತ್ತಿದೆ

ಮಂಡ್ಯದ ದಾಳಿ, ದಂಧೆಕೋರರ ಕಾರ್ಯಾಚರಣೆ ಬಗ್ಗೆ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಒಡನಾಡಿ ಸಂಸ್ಥೆಯ ಪರಶುರಾಮ್ ಅವರು, ಈ ರೀತಿಯ ದಂಧೆ ನಿರಾತಂಕವಾಗಿ ನಡೆಯುತ್ತಿದೆ ಎಂದು ಅಭಿಪ್ರಾಯ ಪಡುತ್ತಾರೆ. "ಆಡಳಿತ, ಪೊಲೀಸ್ ವ್ಯವಸ್ಥೆ ಏನು ಮಾಡುತ್ತಿದೆ .? ಇದು ಒಂದು ಪ್ರದೇಶದ ನೈತಿಕ ಶಕ್ತಿಯನ್ನೇ ಕುಂದಿಸುತ್ತದೆ. ಇವರ ಜಾಲಕ್ಕೆ ವಿದ್ಯಾರ್ಥಿಗಳು, ಗ್ರಾಮೀಣ ಭಾಗದ ಹೆಣ್ಣು ಮಕ್ಕಳೇ ಬಲಿಯಾಗುತ್ತಿದ್ದಾರೆ. ಮೈಸೂರಿನಲ್ಲಿ ಇವರದ್ದೇ ಸಂಸ್ಥೆಯ ಮೇಲೆ ದಾಳಿಯಾಗಿತ್ತು. ಇದೀಗ ಇವರು ಮಂಡ್ಯಕ್ಕೆ ಸ್ಥಳಾಂತರವಾಗಿದ್ದಾರೆ. ಅಲ್ಲಿಯೂ ಆರು ತಿಂಗಳ ಹಿಂದೆ ದಾಳಿ ನಡೆದಿತ್ತು. ನಂತರ ಮತ್ತೆ ಪ್ರಾರಂಭವಾಗಿದೆ ಎಂದರೆ ನಮಗೆ ಅನುಮಾನ ಹೆಚ್ಚಾಗಿದೆ. ನಮ್ಮ ಅಧಿಕಾರಿಗಳ ಶಕ್ತಿ ಕಡಿಮೆ ಆಗಿ, ಅವರ ಕೈ ಮೇಲಾಗಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ," ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಹಸಿವು, ಆಮಿಷಗಳೇ ಇವರ ಬಂಡವಾಳ..!

ಮೂರ್ನಾಲ್ಕು ಸಾವಿರ ವಿದ್ಯಾರ್ಥಿಗಳು ಇರುವ ಪ್ರದೇಶದಲ್ಲಿ ಈ ಆರೋಪಿಗಳು ಕಾರ್ಯಾಚರಣೆ ಮಾಡುತ್ತಾರೆ ಎಂದರೆ ಅದರಲ್ಲಿ ಶೇ. 10 ರಷ್ಟು ವಿದ್ಯಾರ್ಥಿಗಳು ಇವರ ಬಲೆಗೆ ಬಿದ್ದರೆ ಸಾಕು. ಅಲ್ಲಿಗೆ 300 ಜನ ಆಗುತ್ತಾರೆ. ವರ್ಷ ಪೂರ್ತಿ ಇರವ ದಂಧೆ ನಿರಾತಂಕವಾಗಿ ನಡೆಯುತ್ತದೆ. ನಮ್ಮ ವಿದ್ಯಾರ್ಥಿಗಳು ಈ ರೀತಿಯ ಕೂಪದಲ್ಲಿ ಬಿದ್ದರೆ ಅವರ ಭವಿಷ್ಯ, ದೇಶದ ಭವಿಷ್ಯ ಏನಾಗುತ್ತದೆ..? ಒಂದು ಕಡೆ ಇವರ ಮುಖವಾಡ ಬಯಲಾದರೆ ಮತ್ತೊಂದು ಕಡೆ ಹೋಗಿ ಮತ್ತೆ ದಂಧೆ ಶುರು ಮಾಡುತ್ತಾರೆ ಎಂದರೆ ಇದರ ಹಿಂದೆ ಎಷ್ಟು ದೊಡ್ಡ ಜಾಲ ಇದೆ, ಎಷ್ಟು ಪ್ರಭಾವಿಗಳ ಬೆಂಬಲ ಇದೆ ಎನ್ನುವುದನ್ನು ಊಹಿಸುವುದಕ್ಕೂ ಅಸಾಧ್ಯ. ತಮಗೇ ಗೊತ್ತಿಲ್ಲದ ಹಾಗೆ ಈ ರೀತಿಯ ಕೂಪಕ್ಕೆ ಬಿದ್ದ ಮಕ್ಕಳ ಭವಿಷ್ಯ ಏನು..? ಇದು ವೇಶ್ಯಾವಾಟಿಕೆ ಮಾತ್ರವಲ್ಲ, ಸಾಮಾಜಿಕ ವ್ಯವಸ್ಥೆಯನ್ನೇ ಹಾಳು ಮಾಡುವ ದಂಧೆ. ಮಕ್ಕಳ ಸುಂದರ ಬದುಕನ್ನು ನಾಶ ಮಾಡುವ ಅನಿಷ್ಟ ಕೆಲಸ. ಇದಕ್ಕೆ ಸರ್ಕಾರ, ಸ್ಥಳೀಯರು, ಅಧಿಕಾರಿಗಳು ಕಡಿವಾಣ ಹಾಕಬೇಕು. ಇಲ್ಲದೇ ಇದ್ದರೆ ಸಮಾಜಕ್ಕೆ ದೊಡ್ಡ ನಷ್ಟ ಆಗಲಿದೆ ಎನ್ನುತ್ತಾರೆ ಒಡನಾಡಿ ಸಂಸ್ಥೆಯ ಪರಶುರಾಮ್.

Read More
Next Story