
ಸಾಂದರ್ಭಿಕ ಚಿತ್ರ
ಸನ್‌ರೂಫ್‌ನಲ್ಲಿ ಮಕ್ಕಳನ್ನು ನಿಲ್ಲಿಸಿ ಕಾರು ಚಲಾಯಿಸಿದರೆ ಲೈಸನ್ಸ್ ರದ್ದು; ಸಾರಿಗೆ ಇಲಾಖೆ ಎಚ್ಚರಿಕೆ
ಕಾರಿನ ಸನ್‌ರೂಫ್ ತೆರೆದು ಮಕ್ಕಳನ್ನು ನಿಲ್ಲಿಸಿಕೊಂಡು ಚಾಲನೆ ಮಾಡುವುದು ಸಂಚಾರ ನಿಯಮಗಳ ಉಲ್ಲಂಘನೆಯಾಗಲಿದೆ. ಈ ನಿಯಮ ಉಲ್ಲಂಘಿಸಿದರೆ ಕಾರು ಚಾಲಕರಿಗೆ ದಂಡ ಹಾಕಲಾಗುತ್ತದೆ. ಜತೆಗೆ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ.
ಕಾರುಗಳ ಸನ್‌ರೂಫ್ ಮೂಲಕ ಮಕ್ಕಳನ್ನು ನಿಲ್ಲಿಸಿಕೊಂಡು ವಾಹನ ಚಾಲನೆ ಮಾಡುವ ಮುನ್ನ ಕಾರು ಮಾಲೀಕರು ಅಥವಾ ಚಾಲಕರು ಒಮ್ಮೆ ಯೋಚಿಸಿ. ಇನ್ನು ಮುಂದೆ ಕಾರಿನ ಸನ್‌ರೂಫ್ ತೆರೆದು ಮಕ್ಕಳನ್ನು ನಿಲ್ಲಿಸಿಕೊಂಡು ಪ್ರಯಾಣಿಸಿದರೆ ಚಾಲನಾ ಪರವಾನಗಿ ರದ್ದಾಗಲಿದೆ.
ಹೌದು, ಸನ್‌ರೂಫ್ ಪ್ರವೃತ್ತಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಾಹನದಲ್ಲಿರುವ ಎಲ್ಲ ಪ್ರಯಾಣಿಕರು ಒಳಗೆ ಕುಳಿತು ಪ್ರಯಾಣಿಸುವುದು ಕಡ್ಡಾಯ. ಈ ನಿಯಮ ಉಲ್ಲಂಘಿಸಿದರೆ ಚಾಲಕರ ವಿರುದ್ಧ ದಂಡ ವಿಧಿಸಲಾಗುವುದು. ಜತೆಗೆ ಚಾಲನಾ ಪರವಾನಗಿ ಅಮಾನತುಗೊಳಿಸಲಾಗುವುದು. ಜತೆಗೆ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನ ಸನ್‌ರೂಫ್‌ನಲ್ಲಿ ಮಕ್ಕಳನ್ನು ನಿಲ್ಲಿಸಿಕೊಂಡು ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ. ಮೋಟಾರು ವಾಹನ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಲಿದೆ. ವೇಗವಾಗಿ ಬ್ರೇಕ್ ಹಾಕಿದಾಗ ಅಥವಾ ವಾಹನ ಅನಿರೀಕ್ಷಿತವಾಗಿ ತಿರುಗಿದಾಗ ಮಕ್ಕಳು ಹೊರಗೆ ಬಿದ್ದು ಗಾಯಗೊಳ್ಳುವ ಅಥವಾ ಪ್ರಾಣ ಕಳೆದುಕೊಳ್ಳುವ ಅಪಾಯ ಇರಲಿದೆ. ಇದು ಕೇವಲ ಮಕ್ಕಳ ಜೀವಕ್ಕೆ ಅಪಾಯ ತರುವುದು ಮಾತ್ರವಲ್ಲದೆ, ರಸ್ತೆಯಲ್ಲಿ ಸಂಚರಿಸುವ ಇತರರಿಗೂ ತೊಂದರೆ ಉಂಟು ಮಾಡಲಿದೆ ಎಂದಿದೆ.
ಕಾನೂನು ಹೇಳುವುದೇನು?
ಮೋಟಾರು ವಾಹನ ಕಾಯಿದ-1988 ರ ಪ್ರಕಾರ, ಈ ರೀತಿ ಚಾಲನೆ ಮಾಡುವುದು ಎರಡು ಪ್ರಮುಖ ಸೆಕ್ಷನ್‌ಗಳ ಅಡಿ ಶಿಕ್ಷಾರ್ಹ ಅಪರಾಧವಾಗಲಿದೆ.
ಸಾಮಾನ್ಯ ಅಪರಾಧ (ಸೆಕ್ಷನ್ 177): ಪ್ರಾಥಮಿಕ ನಿಯಮ ಉಲ್ಲಂಘನೆಗೆ 500 ರೂ.ರಿಂದ 1,000 ರೂ. ವರೆಗೆ ದಂಡ ವಿಧಿಸಬಹುದು.
ಅಪಾಯಕಾರಿ ಚಾಲನೆ (ಸೆಕ್ಷನ್ 184): ಮಕ್ಕಳ ಜೀವಕ್ಕೆ ಅಪಾಯ ಉಂಟು ಮಾಡುವಷ್ಟು ನಿರ್ಲಕ್ಷ್ಯತನ ತೋರಿದಲ್ಲಿ ಪೊಲೀಸರು ಈ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದು. ಮೊದಲ ಬಾರಿಯ ಅಪರಾಧಕ್ಕೆ 5,000 ರೂ. ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
ಪೋಷಕರು ಮತ್ತು ಚಾಲಕರು ಮಕ್ಕಳ ಸುರಕ್ಷತೆ ವಿಷಯದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ವಿದ್ಯಾರಣ್ಯಪುರಂನಲ್ಲಿ ಸಂಚರಿಸುತ್ತಿದ್ದ ಕಾರಿನ ಸನ್‌ರೂಫ್‌ನಿಂದ ಹೊರಗೆ ನಿಂತಿದ್ದ 6 ವರ್ಷದ ಬಾಲಕನೊಬ್ಬ ರಸ್ತೆಯ ಮೇಲಿದ್ದ ಓವರ್‌ಹೆಡ್ ಬ್ಯಾರಿಯರ್‌ಗೆ ತಲೆ ತಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು.
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯ ಕುರಿತು ಪೋಲಿಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281 (ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಾಲನೆ) ಅಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.

