
ಚಿನ್ನಪ್ಪನಹಳ್ಳಿಯಲ್ಲಿ ಅನಧಿಕೃತ ಕಟ್ಟಡಕ್ಕೆ ಪಾಲಿಕೆ ಬಿಸಿ: 3ನೇ ಮಹಡಿ ತೆರವು ಕಾರ್ಯಾಚರಣೆ
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ವಿರುದ್ಧ ನಿರಂತರ ಪರಿಶೀಲನೆ, ಕಾನೂನು ಕ್ರಮ ಮತ್ತು ತೆರವು ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ನಿರ್ಮಾಣಗಳ ವಿರುದ್ಧ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಚಿನ್ನಪ್ಪನಹಳ್ಳಿ 6ನೇ ‘ಸಿ’ ಅಡ್ಡರಸ್ತೆಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸುತ್ತಿದ್ದ ಕಟ್ಟಡದ ಮೂರನೇ ಮಹಡಿಯನ್ನು ಶನಿವಾರ (ಡಿ.20) ತೆರವುಗೊಳಿಸಲಾಗಿದೆ. ಈ ಮೂಲಕ ನಿಯಮಬಾಹಿರ ನಿರ್ಮಾಣಗಳಿಗೆ ಪಾಲಿಕೆ ಕಠಿಣ ಸಂದೇಶ ರವಾನಿಸಿದೆ.
ದೊಡ್ಡನೆಕ್ಕುಂದಿ ವಾರ್ಡ್‌ನ ಚಿನ್ನಪ್ಪನಹಳ್ಳಿ 6ನೇ ‘ಸಿ’ ಅಡ್ಡರಸ್ತೆಯ ನಿವೇಶನ ಸಂಖ್ಯೆ 01ರಲ್ಲಿ ಮಾಲೀಕರು, ಪಾಲಿಕೆಯಿಂದ ಯಾವುದೇ ನಕ್ಷೆ ಮಂಜೂರಾತಿ ಪಡೆಯದೆ ಕಟ್ಟಡ ನಿರ್ಮಾಣ ಆರಂಭಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಮಗಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದ ತಂಡ, ಬಿಬಿಎಂಪಿ ಕಾಯ್ದೆ, 2020 ರ ಕಲಂ 248(1) ಮತ್ತು 248(2)ರ ಅಡಿಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲು ಮತ್ತು ಸಮಜಾಯಿಷಿ ನೀಡಲು ನೋಟಿಸ್ ಜಾರಿ ಮಾಡಿತ್ತು.
ಆದರೆ, ಮಾಲೀಕರು ನೋಟಿಸ್‌ಗೆ ಯಾವುದೇ ಉತ್ತರ ಅಥವಾ ಸಮಜಾಯಿಷಿ ನೀಡದೆ ನಿರ್ಮಾಣ ಕಾರ್ಯ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ, ಶನಿವಾರ ಕಾರ್ಯಾಚರಣೆ ನಡೆಸಿದ ಪಾಲಿಕೆ ಸಿಬ್ಬಂದಿ, ಕಟ್ಟಡದ ಮೂರನೇ ಮಹಡಿಯ ಭಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಿದರು.
ನಿರಂತರ ಕಾರ್ಯಾಚರಣೆ: ಆಯುಕ್ತರ ಎಚ್ಚರಿಕೆ
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್, "ನಕ್ಷೆ ಮಂಜೂರಾತಿ ಇಲ್ಲದೆ ಅಥವಾ ನಕ್ಷೆ ಉಲ್ಲಂಘಿಸಿ ನಿರ್ಮಿಸುವ ಕಟ್ಟಡಗಳ ವಿರುದ್ಧ ಪಾಲಿಕೆಯು ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ. ಅನಧಿಕೃತ ಕಟ್ಟಡಗಳ ವಿರುದ್ಧ ನಿರಂತರ ಪರಿಶೀಲನೆ ಮತ್ತು ತೆರವು ಕಾರ್ಯಾಚರಣೆ ಮುಂದುವರಿಯಲಿದೆ" ಎಂದು ತಿಳಿಸಿದರು. "ಮುಂದಿನ ಹಂತದಲ್ಲಿ ಈ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುವುದು. ನಗರದ ಸುವ್ಯವಸ್ಥಿತ ಅಭಿವೃದ್ಧಿಗಾಗಿ ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಮೊದಲು ಅನುಮತಿ ಪಡೆಯುವುದು ಕಡ್ಡಾಯ" ಎಂದು ಅವರು ಮನವಿ ಮಾಡಿದರು.
ಪಲ್ಸ್ ಪೋಲಿಯೋ ಜಾಗೃತಿಗೆ ಬೈಕ್ ರ್‍ಯಾಲಿ
ಇದೇ ವೇಳೆ, ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾನುವಾರ (ಡಿ.21) ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಪಾಲಿಕೆಯ ಸಾರ್ವಜನಿಕ ಆಸ್ಪತ್ರೆ, ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ‘ಹ್ಯುಮಾನಿಟಿ ಕಾಲ್ಸ್ ಬೈಕ್ ರೈಡರ್ಸ್’ ಸಹಯೋಗದಲ್ಲಿ ನಡೆದ ಈ ಜಾಥಕ್ಕೆ ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಮತ್ತು ಜಂಟಿ ಆಯುಕ್ತರಾದ ಡಾ. ಸುಧಾ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

