ಬೀದಿ ನಾಯಿ ಕಚ್ಚಿ ಯೋಧನ ಅತ್ತೆ ಸಾವು | ಬಿಬಿಎಂಪಿ ವಿರುದ್ಧ ಆಕ್ರೋಶ
ರಾಜಧಾನಿಯಲ್ಲಿ ಮಿತಿಮೀರಿರುವ ಬೀದಿನಾಯಿ ಹಾವಳಿಗೆ ಇದೀಗ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ.
ಜಾಲಹಳ್ಳಿ ವಾಯುನೆಲೆಯ ಏಳನೇ ವಸತಿಸಮುಚ್ಛಯ ಕ್ಯಾಂಪ್‌ನಲ್ಲಿ ಯೋಧರೊಬ್ಬರ ಅತ್ತೆಯ ಮೇಲೆ ದಾಳಿ ನಡೆಸಿದ ಬೀದಿ ನಾಯಿಗಳ ಗುಂಪು, ಅವರನ್ನು ಕಚ್ಚಿ ತೀವ್ರ ಗಾಯಗೊಳಿಸಿದ್ದವು. ನಿವೃತ್ತ ಶಿಕ್ಷಕಿಯಾಗಿದ್ದ ರಾಜ್ ದುಲಾರಿ ಸಿನ್ಹಾ ಎಂಬ 76 ವಯಸ್ಸಿನ ಮಹಿಳೆ ಬೆಳಿಗ್ಗೆ 6.30 ರ ಸುಮಾರಿಗೆ ವಾಕ್ ಮಾಡುತ್ತಿರುವಾಗ ಗುಂಪಾಗಿ ಬಂದ 10-12 ಬೀದಿ ನಾಯಿಗಳು ಮಾರಣಾಂತಿಕ ದಾಳಿ ನಡೆಸಿದ್ದವು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ರಕ್ತದ ಮಡುವಿನಲ್ಲಿ ಪ್ರಾಣಬಿಟ್ಟಿದ್ದಾರೆ.
ವಾಯು ಪಡೆಯ ಯೋಧರೊಬ್ಬರ ಅತ್ತೆಯಾಗಿದ್ದ ಅವರು, ಬಿಹಾರದಿಂದ ಅಳಿಯ ಮಗಳ ಮನೆಗೆ ಆಗಮಿಸಿದ್ದರು. ಘಟನೆಯ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವಿವರಿಸಿದ್ದು, "ವಾಯುನೆಲೆಯ ಆಟದ ಮೈದಾನದಲ್ಲಿ ಬೆಳಿಗ್ಗೆ ಒಂದು ಡಜನ್‌ಗೂ ಹೆಚ್ಚು ಬೀದಿ ನಾಯಿಗಳು ಏಕಾಏಕಿ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದವು. ಜಾಲಹಳ್ಳಿಯ ವಿದ್ಯಾರಣ್ಯಪುರ ವಾಯುನೆಲೆ ಮೈದಾನದಲ್ಲಿ ಈ ಘಟನೆ ನಡೆಯಿತು. ನಡುವೆ ಭಾರೀ ಗೋಡೆಯಿದ್ದ ಕಾರಣದಿಂದ ನಾನು ಕಣ್ಣಾರೆ ಕಂಡರೂ, ಮಹಿಳೆಗೆ ರಕ್ಷಣೆ ನೀಡಲಾಗಲಿಲ್ಲ" ಎಂದು ಬರೆದುಕೊಂಡಿದ್ದಾರೆ.
Its a tragic scene in the morning itself.Dozen of stray dogs attack a lady.I shouted,and my family joined me,until a gentleman comes the dogs attacked.Jalahalli Airforce playground,Vidyaranyapura.I am guilty that I couldnt help her because of this wall. @IAF_MCC @RajnathSingh_in pic.twitter.com/rccgoFM9OJ
— Harikrishnan (@smarthari) August 28, 2024
ಸಾರ್ವಜನಿಕರ ಆಕ್ರೋಶ
ಗಂಗಮ್ಮನಗುಡಿ ವ್ಯಾಪ್ತಿಯಲ್ಲಿ ಸೇರಿದಂತೆ ಬೆಂಗಳೂರು ನಗರಾದ್ಯಂತ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಬ್ರಾಂಡ್ ಬೆಂಗಳೂರು ಮಾತನಾಡುವ ರಾಜಕಾರಣಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಕನಿಷ್ಟ ಬೀದಿ ನಾಯಿ ಹಾವಳಿಯನ್ನು ನಿಯಂತ್ರಿಸಲಾಗದ ಸ್ಥಿತಿಯಲ್ಲಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಜನವಸತಿ ಪ್ರದೇಶಗಳಲ್ಲೇ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು ರಾತ್ರಿ ಮತ್ತು ಬೆಳಗಿನ ಜಾವ ಜನರು ಓಡಾಡುವುದೇ ದುಸ್ತರವಾಗಿದೆ. ಗುಂಪುಗುಂಪಾಗಿ ಓಡಾಡುವ ನಾಯಿಗಳು ನಡೆದುಕೊಂಡು ಹೋಗುವವರು, ಬೈಕ್ ಚಾಲಕರ ಮೇಲೆ ದಾಳಿ ಮಾಡಿ ಗಾಯಗೊಳಿಸುವುದು, ಸಾವಿಗೆ ಕಾರಣವಾಗುವುದು ಸಿಲಿಕಾನ್ ಸಿಟಿಯಲ್ಲಿ ಸಾಮಾನ್ಯ ಎಂಬಂತಾಗಿದೆ.
"ಅದರಲ್ಲೂ ಮಕ್ಕಳು ಮತ್ತು ವೃದ್ಧರ ಮೇಲೆ ದಾಳಿ ಮಾಡುವುದು ಹೆಚ್ಚಾಗಿದೆ. ಈ ಘಟನೆಯಲ್ಲಿ ವೃದ್ಧೆ ತನ್ನ ಪಾಡಿಗೆ ತಾನು ವಾಕ್ ಮಾಡುತ್ತಿರುವಾಗ ಗುಂಪಾಗಿ ಬಂದು ನಾಯಿಗಳು ದಾಳಿ ನಡೆಸಿರುವುದು ಆಘಾತಕಾರಿ. ನಗರ ವ್ಯಾಪ್ತಿಯಲ್ಲಿ ಜನರಿಗೆ ಕನಿಷ್ಟ ನಾಯಿಗಳಿಂದಲೂ ರಕ್ಷಣೆ ಇಲ್ಲ ಎಂದಾದರೆ ಬಿಬಿಎಂಪಿ ಅಧಿಕಾರಿಗಳು, ಆಡಳಿತ ವ್ಯವಸ್ಥೆ ಇನ್ನಾರಿಂದ, ಇನ್ನಾವುದರಿಂದ ತನ್ನ ಪ್ರಜೆಗಳನ್ನು ರಕ್ಷಿಸಲಿದೆ" ಎಂದು ಸ್ಥಳೀಯರೊಬ್ಬರು ಬಿಬಿಎಂಪಿಗೆ ಛೀಮಾರಿ ಹಾಕಿದ್ದಾರೆ.