
ಸಾಂದರರ್ಭಿಕ ಚಿತ್ರ
ಬೀದಿ ನಾಯಿಗಳಿಗೆ ಶೆಲ್ಟರ್,ಚಿಕನ್‌ರೈಸ್| ವಾರ್ಷಿಕ 18 ಕೋಟಿ ರೂ. ವೆಚ್ಚ
ಜನನಿಬಿಡ ಪ್ರದೇಶಗಳಾದ ಶಾಲೆ, ಆಸ್ಪತ್ರೆ, ಕ್ರೀಡಾಂಗಣ ಮತ್ತು ಸರ್ಕಾರಿ ಕಚೇರಿಗಳ ಬಳಿ ಇರುವ ಬೀದಿ ನಾಯಿಗಳನ್ನು ಪ್ರತ್ಯೇಕ ಶೆಲ್ಟರ್‌ಗಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ರಾಜಧಾನಿಯ ಬೀದಿ ನಾಯಿಗಳಿಗೆ ಇನ್ಮುಂದೆ ರಾಜಾತಿಥ್ಯ ಸಿಗಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜನನಿಬಿಡ ಪ್ರದೇಶಗಳ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಅವುಗಳಿಗೆ ಬರೀ ಆಶ್ರಯ ನೀಡುವುದಷ್ಟೇ ಅಲ್ಲದೆ, ದಿನಕ್ಕೆರಡು ಬಾರಿ ಪೌಷ್ಟಿಕಾಂಶಯುಕ್ತ 'ಚಿಕನ್ ರೈಸ್' ನೀಡಲು ಸಜ್ಜಾಗಿದೆ. ಈ ಯೋಜನೆಗಾಗಿ ವಾರ್ಷಿಕ ಸುಮಾರು 18 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶವೇನು?
ಸಾರ್ವಜನಿಕರ ಸುರಕ್ಷತೆ ಮತ್ತು ಪ್ರಾಣಿ ಕಲ್ಯಾಣ ಎರಡನ್ನೂ ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಲ್ಲಾ ರಾಜ್ಯಗಳಿಗೂ ಮಹತ್ವದ ಸೂಚನೆ ನೀಡಿತ್ತು. ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ಕ್ರೀಡಾಂಗಣಗಳು ಮತ್ತು ಇತರೆ ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ತಡೆಯಲು ಅವುಗಳನ್ನು ಅಲ್ಲಿಂದ ತೆರವುಗೊಳಿಸಬೇಕು. ಆದರೆ, ಅವುಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವಂತಿಲ್ಲ. ಬದಲಾಗಿ, ಪ್ರತ್ಯೇಕ ಶೆಲ್ಟರ್‌ಗಳನ್ನು (ಆಶ್ರಯ ತಾಣ) ನಿರ್ಮಿಸಿ, ಅಲ್ಲಿಗೆ ಸ್ಥಳಾಂತರಿಸಿ ಲಸಿಕೆ ಹಾಗೂ ಸೂಕ್ತ ಆಹಾರ ನೀಡಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು.
ಕಳೆದ ಕೆಲವು ವರ್ಷಗಳಿಂದ ಮಕ್ಕಳ ಮೇಲಿನ ನಾಯಿ ದಾಳಿ ಮತ್ತು ರೇಬಿಸ್ ಭೀತಿ ಹೆಚ್ಚಾಗಿದ್ದರಿಂದ ಕೋರ್ಟ್ ಈ ಮಧ್ಯಪ್ರವೇಶ ಮಾಡಿತ್ತು. ಈ ಆದೇಶ ಪಾಲನೆಗೆ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದೆ.
ದಿನಕ್ಕೆರಡು ಬಾರಿ ಚಿಕನ್ ಊಟ
ಜಿಬಿಎ ಅಧಿಕಾರಿಗಳು ಸಿದ್ಧಪಡಿಸಿರುವ ಪ್ರಸ್ತಾವನೆಯ ಪ್ರಕಾರ, ಶೆಲ್ಟರ್‌ಗೆ ಸ್ಥಳಾಂತರವಾಗುವ ನಾಯಿಗಳಿಗೆ ದಿನಕ್ಕೆರಡು ಬಾರಿ 'ಚಿಕನ್ ರೈಸ್' ನೀಡಲಾಗುತ್ತದೆ. ಪ್ರತಿ ಊಟದಲ್ಲಿ 150 ಗ್ರಾಂ ಅಕ್ಕಿ, 100 ಗ್ರಾಂ ಚಿಕನ್ ಹಾಗೂ ತರಕಾರಿಗಳನ್ನು ಮಿಶ್ರಣ ಮಾಡಿ ನೀಡಲು ನಿರ್ಧರಿಸಲಾಗಿದೆ. ಒಂದು ನಾಯಿಯ ಆಹಾರ ಮತ್ತು ಆರೈಕೆಗಾಗಿ ದಿನವೊಂದಕ್ಕೆ ಅಂದಾಜು 102 ರೂಪಾಯಿ ವ್ಯಯವಾಗಲಿದೆ.
4,428 ನಾಯಿಗಳ ಗುರುತು, 18 ಕೋಟಿ ಬಜೆಟ್
ನಗರದ 5 ಪ್ರಮುಖ ನಗರಪಾಲಿಕೆ ವ್ಯಾಪ್ತಿಗಳಲ್ಲಿ ಸಮೀಕ್ಷೆ ನಡೆಸಿರುವ ಅಧಿಕಾರಿಗಳು, ಸ್ಥಳಾಂತರಕ್ಕೆ ಅರ್ಹವಾದ 4,428 ನಾಯಿಗಳನ್ನು ಗುರುತಿಸಿದ್ದಾರೆ. ಈ ನಾಯಿಗಳಿಗೆ ಶೆಲ್ಟರ್ ನಿರ್ಮಾಣ, ಸಿಬ್ಬಂದಿ ನಿರ್ವಹಣೆ, ಲಸಿಕೆ ಮತ್ತು ಮುಖ್ಯವಾಗಿ ಆಹಾರ ಪೂರೈಕೆಗಾಗಿ ವಾರ್ಷಿಕ 18 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ವಲಯವಾರು ನಾಯಿಗಳ ಸಂಖ್ಯೆ ಹೀಗಿದೆ
* ಬೆಂಗಳೂರು ಉತ್ತರ: 2,339 (ಅತಿ ಹೆಚ್ಚು)
* ಕೇಂದ್ರ ವಲಯ: 1,223
* ಪಶ್ಚಿಮ ವಲಯ: 525
* ಪೂರ್ವ ವಲಯ: 274
* ದಕ್ಷಿಣ ವಲಯ: 131
ಸಾರ್ವಜನಿಕರ ತೆರಿಗೆ ಹಣದಲ್ಲಿ ನಾಯಿಗಳಿಗೆ ಇಷ್ಟೊಂದು ದುಬಾರಿ ಮೊತ್ತದ ಆರೈಕೆ ಬೇಕೇ ಎಂಬ ಪ್ರಶ್ನೆ ಒಂದೆಡೆಯಾದರೆ, ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮತ್ತು ಪ್ರಾಣಿ ದಯೆಗಾಗಿ ಇದು ಅನಿವಾರ್ಯ ಎಂಬ ವಾದವೂ ಕೇಳಿಬರುತ್ತಿದೆ.

