Stray dog attack in Koppal: 30 people, including a boy, injured, admitted to hospital
x

ಸಾಂದರ್ಭಿಕ ಚಿತ್ರ

ಕೊಪ್ಪಳದಲ್ಲಿ ಬೀದಿ ನಾಯಿಗಳ ಭೀತಿ: 30 ಜನರ ಮೇಲೆ ದಾಳಿ, ಬಾಲಕನ ಸ್ಥಿತಿ ಗಂಭೀರ

ಮನೆಯ ಬಳಿ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕ ಯಮನೂರುಸಾಬ್ ಮಾಬುಸಾಬ್ ನದಾಫ್ ಎಂಬ ಮಗುವಿನ ಮೇಲೆ ನಾಯಿ ತೀವ್ರವಾಗಿ ದಾಳಿ ನಡೆಸಿ ಮಗುವನ್ನು ಗಂಭೀರವಾಗಿ ಗಾಯಗೊಳಿಸಿದೆ.


ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಕಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಗಂಭೀರ ಘಟನೆಯೊಂದು ವರದಿಯಾಗಿದೆ. ಕುಕನೂರು ತಾಲೂಕಿನ ತಳಕಲ್ ಮತ್ತು ತಳಬಾಳ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಒಂದು ಬೀದಿ ನಾಯಿಯು ಏಕಾಏಕಿ ಸುಮಾರು 30 ಜನರ ಮೇಲೆ ದಾಳಿ ನಡೆಸಿದ್ದು ಒಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ.

ಮನೆಯ ಬಳಿ ಆಟವಾಡುತ್ತಿದ್ದ ಯಮನೂರುಸಾಬ್ ಮಾಬುಸಾಬ್ ನದಾಫ್ ಎಂಬ ಎಂಟು ವರ್ಷದ ಮಗುವಿನ ಮೇಲೆ ನಾಯಿ ತೀವ್ರವಾಗಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ನಾಯಿ ದಾಳಿಯಿಂದ ಮಗುವಿನ ಕೆಳಗಿನ ತುಟಿ ಸಂಪೂರ್ಣವಾಗಿ ಹರಿದು ಹೋಗಿದ್ದು, ತಲೆ ಮತ್ತು ಕೆನ್ನೆ ಮೇಲೆ ಗಂಭೀರ ಗಾಯಗಳಾಗಿವೆ.

ಪ್ರತ್ಯಕ್ಷದರ್ಶಿಗಳ ಕಳವಳ

ರಸ್ತೆಯ ಮೇಲೆ ಬೀದಿ ನಾಯಿ ಏಕಾಏಕಿಯಾಗಿ ಕಂಡ ಕಂಡವರಿಗೆ ಕಡಿದಿದೆ. ಮಗು ಅಳುವಿನ ಶಬ್ದ ಕೇಳಿ ತಕ್ಷಣ ಅಕ್ಕಪಕ್ಕದವರು ಬಂದು ನಾಯಿಯನ್ನು ಹೊಡೆದೋಡಿಸಿದ್ದಾರೆ. ಇಲ್ಲದಿದ್ದರೆ ಬಾಲಕ ನಾಯಿಯ ದಾಳಿಗೆ ಬಲಿಯಾಗಬೇಕಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನಾಯಿ ದಾಳಿಯಿಂದ ಗಾಯಗೊಂಡಿದ್ದ ಬಾಲಕ ಮತ್ತು ಇತರ ಸಾರ್ವಜನಿಕರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಂಭೀರವಾಗಿ ಗಾಯಗೊಂಡಿರುವ ಬಾಲಕ ಯಮನೂರುಸಾಬ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ನಾಯಿ ಕಡಿತ ಪ್ರಕರಣಗಳು

ಇತ್ತೀಚೆಗೆ ಬೆಂಗಳೂರಿನಲ್ಲಿಯೂ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ಒಬ್ಬ ವೃದ್ಧರು ಮೃತಪಟ್ಟಿದ್ದರು ಮತ್ತು ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಕಳುಹಿಸಬೇಕು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದಾಗ್ಯೂ, ರಾಜ್ಯದ ಹಲವು ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ಘಟನೆಗಳು ಬೀದಿ ನಾಯಿಗಳ ನಿರ್ವಹಣೆಗೆ ಸಮಗ್ರ ಮತ್ತು ಪರಿಣಾಮಕಾರಿ ಯೋಜನೆಯ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ.

Read More
Next Story