
ಏರೋಸ್ಪೇಸ್ ಕಂಪೆನಿಗಳ ವಲಸೆ ತಡೆಗೆ ತಂತ್ರ ; ಇದೆ ಭೂ -ದಾಸ್ತಾನು! ದೇವನಹಳ್ಳಿಯಲ್ಲೇ ಭೂ ಮಂಜೂರಿಗೆ ಸರ್ಕಾರ ಪ್ಲಾನ್
ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸಿದರೂ ವಿಚಲಿತವಾಗದ ರಾಜ್ಯ ಸರ್ಕಾರ, ಏರೋಸ್ಪೇಸ್ ಕಂಪೆನಿಗಳನ್ನು ರಾಜ್ಯದಲ್ಲೇ ಉಳಿಸಿಕೊಳ್ಳಲು ಯೋಜಿಸುತ್ತಿದೆ. ವಿಮಾನ ನಿಲ್ದಾಣದ ಸಮೀಪವೇ ಭೂಮಿ ಹಾಗೂ ಮೂಲ ಸೌಕರ್ಯ ಒದಗಿಸಲು ನಿರ್ಧರಿಸಿದೆ ಎಂದು ಸರ್ಕಾರ ಮೂಲಗಳು ತಿಳಿಸಿವೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪವಿರುವ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣದಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ಕೊಡಲು ರೈತರು ಸುತಾರಾಂ ಒಪ್ಪದ ಹಿನ್ನೆಲೆ ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನೇ ಕೈಬಿಟ್ಟಿದೆ.
ಭೂಸ್ವಾಧೀನ ಪ್ರಕ್ರಿಯೆ ರದ್ದತಿ ಬೆನ್ನಲ್ಲೇ ಅದರ ಲಾಭ ಪಡೆಯಲು ಆಂಧ್ರಪ್ರದೇಶ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕಾಗಿ ಅಗತ್ಯ ಭೂಮಿ ಹಾಗೂ ಮೂಲ ಸೌಕರ್ಯ ಒದಗಿಸುವ ಆಮಿಷ ತೋರಿ ಕಂಪೆನಿಗಳನ್ನು ಆಹ್ವಾನಿಸಿದೆ. ಆದರೆ, ವಿಮಾನ ನಿಲ್ದಾಣಕ್ಕೆ ಸಮೀಪದ ಆಯಕಟ್ಟಿನ ಜಾಗವನ್ನೇ ಏರೋಸ್ಪೇಸ್ ಕಂಪನಿಗಳು ಬಯಸಿರುವುದು ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ಭೂಮಿ ಒದಗಿಸಲಿದೆ ಎಂಬ ಪ್ರಶ್ನೆ ಎದುರಾಗಿದೆ.
ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸಿದರೂ ವಿಚಲಿತವಾಗದ ರಾಜ್ಯ ಸರ್ಕಾರ, ಏರೋಸ್ಪೇಸ್ ಕಂಪೆನಿಗಳನ್ನು ರಾಜ್ಯದಲ್ಲೇ ಉಳಿಸಿಕೊಳ್ಳಲು ಯೋಜಿಸುತ್ತಿದೆ. ವಿಮಾನ ನಿಲ್ದಾಣದ ಸಮೀಪವೇ ಭೂಮಿ ಹಾಗೂ ಮೂಲ ಸೌಕರ್ಯ ಒದಗಿಸಲು ನಿರ್ಧರಿಸಿದೆ ಎಂದು ಸರ್ಕಾರ ಮೂಲಗಳು ತಿಳಿಸಿವೆ. ಈ ಮಧ್ಯೆ, ಸರ್ಕಾರ ರೈತರಿಂದ ಭೂಸ್ವಾಧೀನ ಮಾಡಿಕೊಂಡು ದಾಸ್ತಾನಿಡುವ ಯೋಜನೆಯೂ ಹೊಂದಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಡಿಫೆನ್ಸ್ ಪಾರ್ಕ್ ನಿರ್ಮಾಣಕ್ಕೆ ಸಿಗಲಿದೆ ಭೂಮಿ
ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗಾಗಿ ಗುರುತಿಸಿದ್ದ 1771 ಎಕರೆ ಪೈಕಿ 449 ಎಕರೆ ಭೂಮಿ ನೀಡಲು ರೈತರ ನಿಯೋಗವೊಂದು ಒಪ್ಪಿಗೆ ಸೂಚಿಸಿತ್ತು. ಜತೆಗೆ ಸ್ವಯಂ ಪ್ರೇರಣೆಯಿಂದ ಭೂಮಿ ನೀಡುವವರಿಗೆ ಅತ್ಯಧಿಕ ಪರಿಹಾರ ಹಾಗೂ ಅಭಿವೃದ್ಧಿಪಡಿಸಿದ ನಿವೇಶನ ನೀಡುವ ಭರವಸೆ ನೀಡಿರುವುದರಿಂದ ಚನ್ನರಾಯಪಟ್ಟಣ ಹೋಬಳಿಯಲ್ಲೇ ಅಗತ್ಯ ಭೂಮಿ ಸಿಗುವ ವಿಶ್ವಾಸವಿದೆ ಎಂದು ಬೃಹತ್ ಕೈಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ.
1777 ಎಕರೆ ಜಾಗದಲ್ಲಿ ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಟಿ.ತೆಲ್ಲೋಹಳ್ಳಿ ಗ್ರಾಮಗಳ ಒಟ್ಟು 495 ಎಕರೆ ನೀರಾವರಿ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಸರ್ಕಾರವೇ ನಿರ್ಧರಿಸಿತ್ತು. ಚನ್ನರಾಯಪಟ್ಟಣದಲ್ಲಿ 231.23 ಎಕರೆ, ಮಟ್ಟಿಬಾರ್ಲು ಗ್ರಾಮದಲ್ಲಿ 185.18 ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿಯಲ್ಲಿ 78.21 ಎಕರೆ ಕೃಷಿ ಹಾಗೂ ಜನವಸತಿ ಪ್ರದೇಶ ಎಂದು ಪರಿಗಣಿಸಿ ಸ್ವಾಧೀನ ಪ್ರಕ್ರಿಯೆಯಿಂದ ವಿನಾಯಿತಿ ನೀಡಲು ನಿರ್ಧರಿಸಿತ್ತು.
ಇಲ್ಲಿ 1777 ಎಕರೆಯ ಪೈಕಿ 449 ಎಕರೆ ಹೊರತುಪಡಿಸಿದರೆ ಉಳಿದ ಜಾಗದಲ್ಲಿ ಸಾಕಷ್ಟು ರೈತರು ಭೂಮಿ ಮಾರಾಟ ಮಾಡಲು ಮನಸ್ಸು ಹೊಂದಿದ್ದಾರೆ. ಅಂತಹವರಿಗೆ ಅತ್ಯುತ್ತಮವಾದ ಪರಿಹಾರ ಅಥವಾ ಒಂದು ಎಕರೆ ಜಾಗಕ್ಕೆ 10,771 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನ ನೀಡಲು ಸರ್ಕಾರ ಬದ್ಧವಿದೆ. ಅಭಿವೃದ್ಧಿಪಡಿಸಿದ ಜಮೀನು ಮಾರಾಟ ಮಾಡಿದರೆ ಅತಿ ಹೆಚ್ಚು ಮೊತ್ತ ಪಡೆಯಬಹುದು. ಇಲ್ಲವೇ ವಾಣಿಜ್ಯೋದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳಬಹುದು ಎಂದು ಮೂಲಗಳು ಹೇಳಿವೆ.
60-70ಸಾವಿರ ಕೋಟಿ ಬಂಡವಾಳ ಹೂಡಿಕೆ
ದೇವನಹಳ್ಳಿ ತಾಲೂಕಿನಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಕಂಪೆನಿಗಳು ಮುಂದೆ ಬಂದಿವೆ. ಅಂದಾಜು 60-70ಸಾವಿರ ಕೋಟಿ. ರೂ. ಬಂಡವಾಳ ಹೂಡಿಕೆ ಮಾಡಲು ಕಂಪೆನಿಗಳು ತುದಿಗಾಲಲ್ಲಿ ನಿಂತಿವೆ. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ಜತೆಗೆ ಇನ್ನಷ್ಟು ಭೂಮಿ ಅಗತ್ಯವಾಗಿದೆ. ಹಾಗಾಗಿ ಹೆಚ್ಚುವರಿ ಭೂಮಿ ಖರೀದಿಸಿ ಭೂ ಬ್ಯಾಂಕ್‌ನಲ್ಲಿ ಸಂಗ್ರಹಿಸುವ ಉದ್ದೇಶವಿಲ್ಲ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಚನ್ನರಾಯಪಟ್ಟಣ ಹೋಬಳಿಯ ಹರಳೂರು ಕೈಗಾರಿಕಾ ಪ್ರದೇಶದಲ್ಲಿ ಶೇ 50 ರಷ್ಟು ಭೂಮಿ ಹಂಚಿಕೆಯಾಗದೇ ಉಳಿದಿದೆ. ಭಟ್ಟರ ಮಾರೇನಹಳ್ಳಿ ವಿಶೇಷ ಆರ್ಥಿಕ ವಲಯದಲ್ಲಿ ಶೇ70 ಕ್ಕಿಂತ ಹೆಚ್ಚು ಭೂಮಿ ಹಂಚಿಕೆಯಾಗಿಲ್ಲ. ಹೀಗಿರುವಾಗ ಅಭಿವೃದ್ಧಿಪಡಿಸಿದ ಭೂಮಿಯನ್ನೇ ಕಂಪೆನಿಗಳಿಗೆ ಹಂಚಿಕೆ ಮಾಡಬೇಕು. ಹೊಸದಾಗಿ ಭೂಸ್ವಾಧೀನ ಬೇಕಾಗಿಲ್ಲ ಎಂಬುದು ಇಲ್ಲಿನ ರೈತರ ಆಗ್ರಹವಾಗಿದೆ.
ಕೆಐಎಡಿಬಿಯದ್ದು ಭೂ ದಾಸ್ತಾನು ಉದ್ದೇಶ
ಚನ್ನರಾಯಪಟ್ಟಣ ಹೋಬಳಿಯ ಹರಳೂರು ಕೈಗಾರಿಕಾ ಪ್ರದೇಶ ಹಂತ ಒಂದರಲ್ಲಿ 1282 ಎಕರೆಯನ್ನು ಹೈಟೆಕ್ ಡಿಫೆನ್ಸ್ ಹಾಗೂ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಉದ್ದೇಶಿತ ಜಾಗದಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ 116 ಎಕರೆ, ಎಕ್ಸೈಡ್ ಬ್ಯಾಟರಿ ತಯಾರಕ ಕಂಪೆನಿಗೆ 82ಎಕರೆ, ನ್ಯಾನೋ ಯೂರಿಯಾ ತಯಾರಿಸುವ ಇಫ್ಕೋ ಕಂಪೆನಿಗೆ 12 ಎಕರೆ, ಕಾರಿನ ಗಾಜು ತಯಾರಿಕಾ ಘಟಕಕ್ಕೆ 32 ಎಕರೆ, ಬ್ರೀಗೇಡ್ ಗ್ರೂಪ್‌ಗೆ 75 ಎಕರೆ, ವಿಸ್ಟ್ರಾನ್ ಕಂಪೆನಿಗೆ 20 ಎಕರೆ ಹಂಚಿಕೆ ಮಾಡಲಾಗಿದೆ. ಏಷ್ಯನ್ ಪೈಂಟ್ಸ್ ಗೂ ಜಾಗ ನೀಡಲಾಗಿದೆ. 1282 ಎಕರೆಯಲ್ಲಿ ಅಂದಾಜು 350 ಎಕರೆಯಷ್ಟೇ ಹಂಚಿಕೆ ಮಾಡಲಾಗಿದೆ. ಉಳಿದ ಸುಮಾರು 850 ಎಕರೆ ಜಾಗ ಖಾಲಿ ಇದೆ. ಅದನ್ನೇ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ನೀಡಬಹುದು. ಆದರೆ, ರಾಜ್ಯ ಸರ್ಕಾರ ರೈತರಿಂದ ಭೂಮಿ ಖರೀದಿಸಿ ಸಂಗ್ರಹಿಸುವ ಜತೆ ತಮಿಗಿಷ್ಟ ಬಂದವರಿಗೆ ಹಂಚಿಕೆ ಮಾಡಲು ಹೊಸ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ ಎಂದು ಪೋಲನಹಳ್ಳಿ ರೈತ ಪ್ರಮೋದ್ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ವೇರ್ ಹೌಸ್ ನಿರ್ಮಿಸಿ ಬಾಡಿಗೆ ನೀಡಿರುವ ಸಂಸ್ಥೆಗಳು
ಹರಳೂರು ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಬಹಳಷ್ಟು ಕಂಪೆನಿಗಳು ವೇರ್ ಹೌಸ್‌ಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿ ಹಣ ಸಂಪಾದಿಸುತ್ತಿದ್ದಾರೆ. ಭೂಮಿ ಪಡೆಯುವಾಗಿ ಮಾಡಿಕೊಂಡ ಒಪ್ಪಂದವನ್ನು ಯಾರೂ ಪಾಲಿಸುತ್ತಿಲ್ಲ. ಕೆಐಎಡಿಬಿ ಹಾಗೂ ರಾಜ್ಯ ಸರ್ಕಾರ ಕೂಡ ಇದನ್ನು ಗಮನಿಸಿಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಶೇ 50 ರಷ್ಟನ್ನು ಇಂದಿಗೂ ಅಭಿವೃದ್ಧಿಪಡಿಸಿಲ್ಲ ಎಂದು ಪ್ರಮೋದ್ ದೂರಿದರು.
ಹರಳೂರು ಕೈಗಾರಿಕಾ ಪ್ರದೇಶಕ್ಕೆ ಹೈಟೆಕ್ ಡಿಫೆನ್ಸ್ ಹಾಗೂ ಏರೋಸ್ಪೇಸ್ ಪಾರ್ಕ್ ಎಂದು ನಾಮಕರಣ ಮಾಡಲಾಗಿದೆ. ಆದರೆ, ಉದ್ದೇಶಿತ ಯೋಜನೆಯ ಭೂಮಿಯಲ್ಲಿ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಒಂದೂ ಕೈಗಾರಿಕೆಗಳು ಇಲ್ಲ. ಹಾಗಾಗಿ ರೈತರಿಂದ ಭೂಮಿ ಲಪಟಾಯಿಸುವ ತಂತ್ರವೇ ಹೊರತು ಬೇರೇನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.