ಸಿಎಂ ಸ್ಥಾನಕ್ಕಾಗಿ ತಂತ್ರ-ಪ್ರತಿತಂತ್ರ: ಖರ್ಗೆ, ಜಮೀರ್‌ಗೆ ಡಿಸಿಎಂ ಪಟ್ಟದ ಮಂತ್ರ!
x

ಸಿಎಂ ಸ್ಥಾನಕ್ಕಾಗಿ ತಂತ್ರ-ಪ್ರತಿತಂತ್ರ: ಖರ್ಗೆ, ಜಮೀರ್‌ಗೆ ಡಿಸಿಎಂ ಪಟ್ಟದ ಮಂತ್ರ!

ರಾಜಕೀಯ ಕ್ರಾಂತಿಯ ಚಟುವಟಿಕೆಗಳು ತರೆಮರೆಯಲ್ಲಿ ನಡೆಯುತ್ತಿದ್ದು, ಉಪಮುಖ್ಯಮಂತ್ರಿ ಹುದ್ದೆಯ ಜತೆಗೆ ಮತ್ತೆರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಚರ್ಚೆಗಳು ಪಕ್ಷದಲ್ಲಿ ಬಲವಾಗಿ ಕೇಳಿಬಂದಿವೆ.


Click the Play button to hear this message in audio format

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಆಡಳಿತರೂಢ ಕೈ ಪಾಳೆಯದಲ್ಲಿ ರಾಜಕೀಯ ಕ್ರಾಂತಿಯ ಚಟುವಟಿಕೆಗಳು ತರೆಮರೆಯಲ್ಲಿ ನಡೆಯುತ್ತಿದ್ದು, ಈಗಿರುವ ಉಪಮುಖ್ಯಮಂತ್ರಿ ಹುದ್ದೆಯ ಜತೆಗೆ ಮತ್ತೆರಡು ಉಪಮುಖ್ಯಮಂತ್ರಿ ಹುದ್ದೆಯ ಸೃಷ್ಟಿಸುವ ಚರ್ಚೆಗಳು ಪಕ್ಷದಲ್ಲಿ ಬಲವಾಗಿ ಕೇಳಿಬಂದಿವೆ. ಅ ಮೂಲಕ ಉಪಮುಖ್ಯಮಂತ್ರಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಪ್ರಾಬಲ್ಯವನ್ನು ಮುರಿಯುವ ತಂತ್ರವೂ ಅಡಗಿದೆ!

ನವೆಂಬರ್ ಕ್ರಾಂತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಚಟುವಟಿಕೆಗಳು ರಾಜಕೀಯ ಚರ್ಚೆಗಳ ಕೇಂದ್ರಬಿಂದುವಾಗಿದೆ. ಮುಖ್ಯಮಂತ್ರಿ ಬದಲಾವಣೆಯಾಗುತ್ತದೆಯೋ ಅಥವಾ ಸಚಿವ ಸಂಪುಟ ಪುನರಾಚನೆಯಾಗಲಿದೆಯೋ? ಎಂಬ ಸ್ಪಷ್ಟಚಿತ್ರಣ ಲಭಿಸಿದೆ ಗೊಂದಲ ಕಾಂಗ್ರೆಸ್‌ ನಾಯಕರಲ್ಲಿ ಮೂಡಿದೆ. ಏನೇ ಆದರೂ ಬಿಹಾರ ವಿಧಾನಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗುವುದಂತೂ ಸತ್ಯ ಎಂಬುದು ಬಲವಾಗಿ ಕೇಳಿ ಬರುತ್ತಿರುವ ಮಾತುಗಳಾಗಿವೆ.

ಕೆಲವರು ಸಚಿವ ಸ್ಥಾನ ಕೈ ತಪ್ಪಲಿದೆ ಎಂಬ ಆತಂಕಕ್ಕೊಳಗಾಗಿದ್ದರೆ, ಇನ್ನೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಆಸೆಗಳು ಚಿಗುರೊಡೆದಿವೆ. ಈ ನಡುವೆ, ಮುಖ್ಯಮಂತ್ರಿಯ ಬದಲಾವಣೆ ಕುರಿತು ಸಹ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಪುಷ್ಠಿ ನೀಡುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಳಯದಲ್ಲಿ ಇದನ್ನು ನಿಯಂತ್ರಿಸುವ ಕಸರತ್ತು ತೆರೆಮರೆಯಲ್ಲಿಯೇ ಸಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಿದ್ದರಾಮಯ್ಯ ಪಾಳಯದಲ್ಲಿ ಹೊಸ ಅಸ್ತ್ರವನ್ನು ಪ್ರಯೋಗಿಸಲಾಗಿದೆ. ಒಟ್ಟಾರೆಯಾಗಿ ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ರಾಜಕೀಯ ಬದಲಾವಣೆಗಳು ಜೋರಾಗಿಯೇ ನಡೆಯಲಿದೆ ಎಂದು ಹೇಳಲಾಗಿದೆ.

ಪ್ರಿಯಾಂಕ್‌ ಖರ್ಗೆ-ಜಮೀರ್‌ ಅಹ್ಮದ್‌ಗೆ ಡಿಸಿಎಂ ಪಟ್ಟ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ತಿಂಗಳು ದೆಹಲಿಗೆ ತೆರಳಿ ಕಾಂಗ್ರೆಸ್‌ ವರಿಷ್ಠರ ಮುಂದೆ ಹೊಸ ಪ್ರಸ್ತಾವನೆ ಸಲ್ಲಿಕೆಗೆ ಸಜ್ಜಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ವರಿಷ್ಠರು ಸಹಮತ ವ್ಯಕ್ತಪಡಿಸಿದರೆ ಕಾಂಗ್ರೆಸ್‌ನಲ್ಲಿ ಇನ್ನೆರಡು ಉಪಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾಗಲಿವೆ. ಸಿದ್ದರಾಮಯ್ಯ ಆಪ್ತ ವಲಯಗಳ ಪ್ರಕಾರ, ಒಂದು ದಲಿತ ನಾಯಕ ಮತ್ತು ಮತ್ತೊಂದು ಮುಸ್ಲಿಂ ನಾಯಕರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಚಿಂತನೆ ನಡೆದಿದೆ. ದಲಿತ ನಾಯಕರ ಪೈಕಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆಗೆ ಮತ್ತು ಮುಸ್ಲಿಂ ನಾಯಕರ ಪೈಕಿ ಜಮೀರ್‌ ಅಹ್ಮದ್‌ಗೆ ಉಪಮುಖ್ಯಮಂತ್ರಿ ಸ್ಥಾನ ಒದಗಿಸಬೇಕು ಎಂಬುದು ಸಿದ್ದರಾಮಯ್ಯ ಆಲೋಚನೆಯಲ್ಲಿದೆ ಎಂದು ಹೇಳಲಾಗಿದೆ.

ಪ್ರಿಯಾಂಕ್‌ ಖರ್ಗೆಗೆ ಡಿಸಿಎಂ ಹುದ್ದೆ ನೀಡಲು ಕಾರಣ

ರಾಷ್ಟ್ರೀಯ ಸ್ವಯಂ ಸಂಘ (ಆರ್‌ಎಸ್‌ಎಸ್‌) ಪರಿವಾರ ವಿರುದ್ಧ ಹೋರಾಟದಲ್ಲಿ ಗ್ರಾಮೀಣಾವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಪಾತ್ರ ಮಹತ್ವದ್ದಾಗಿದೆ. ಸಂಘ ಪರಿವಾರದ ಪ್ರತಿ ಹೇಳಿಕೆಗೂ ಜೋರಾಗಿಯೇ ತಿರುಗೇಟು ನೀಡುತ್ತಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ನೇರವಾಗಿ ಹೇಳಿಕೆ ನೀಡುವಲ್ಲಿ ಪ್ರಿಯಾಂಕ್‌ ಖರ್ಗೆ ಹೊರತುಪಡಿಸಿದರೆ ಮತ್ತ್ಯಾವ ಸಚಿವರು ನೀಡುತ್ತಿಲ್ಲ. ಪ್ರಿಯಾಂಕ್‌ ಖರ್ಗೆಗೆ ಬೆಂಬಲ ಸೂಚಿಸುತ್ತಿದ್ದಾರೆಯೇ ಹೊರತು ದಿಟ್ಟವಾಗಿ ಆರೋಪ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ದಾಖಲೆ ಸಮೇತ ಆರ್‌ಎಸ್‌ಎಸ್‌ ವಿರುದ್ಧ ತಿರುಗಿಬಿದ್ದಿರುವ ಪ್ರಿಯಾಂಕ್‌ ಖರ್ಗೆ ನಡೆಗೆ ಪಕ್ಷದ ದೆಹಲಿ ವರಿಷ್ಠರು ಸಹ ಖುಷಿಯಾಗಿದ್ದಾರೆ. ಅಲ್ಲದೇ, ಕಾಂಗ್ರೆಸ್‌ನಲ್ಲಿ ಪ್ರಿಯಾಂಕ್‌ ಖರ್ಗೆ ವರ್ಚಸ್ಸು ಸಹ ಹೆಚ್ಚಿದೆ. ಪ್ರಿಯಾಂಕ್‌ ಖರ್ಗೆ ರಾಜಕೀಯ ನಡೆಯ ಕಾಂಗ್ರೆಸ್‌ ಹೈಕಮಾಂಡ್‌ಗೆ ಇಷ್ಟವಾಗಿರುವುದು ಸಿದ್ದರಾಮಯ್ಯ ಕಿವಿಗೂ ಬಿದ್ದಿದ್ದೆ. ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧದ ಹೋರಾಟದಿಂದ ಗಮನಸೆಳೆದಿರುವ ಪ್ರಿಯಾಂಕ್‌ ಖರ್ಗೆ ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಬೇಕು ಎಂಬುದು ಸಿದ್ದರಾಮಯ್ಯ ಬಯಕೆಯಾಗಿದೆ.

ಪರ್ಯಾಯ ನಾಯಕತ್ವದ ದನಿ ನಿಯಂತ್ರಣದ ತಂತ್ರ

ಮುಖ್ಯಮಂತ್ರಿ ಬದಲಾವಣೆಯ ಕೂಗು ಬಲವಾಗಿ ಕೇಳಿಬರುತ್ತಿದೆ. ನ.20ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ ಎರಡೂವರೆ ವರ್ಷಗಳಾಗುತ್ತದೆ. ಬಳಿಕ ಮುಖ್ಯಮಂತ್ರಿ ಬದಲಾವಣೆಯ ಕೂಗು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ, ಕಾಂಗ್ರೆಸ್‌ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯುವ ವೇಳೆ ಹೈಕಮಾಂಡ್‌ ಮುಂದೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಅಧಿಕಾರ ಹಂಚಿಕೆಯಾಗಿತ್ತು ಎಂದು ಹೇಳಲಾಗಿದೆ. ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬರಲು ಡಿ.ಕೆ.ಶಿವಕುಮಾರ್‌ ಪಾತ್ರವು ಬಹಳ ಮಹತ್ವದಿಂದ ಕೂಡಿದೆ. ಹೀಗಾಗಿ ಇಬ್ಬರೂ ಎರಡೂವರೆ ವರ್ಷಗಳ ಕಾಲ ಆಡಳಿತ ನಡೆಸಬೇಕು ಎಂಬಂತಹ ಚರ್ಚೆಗಳು ನಡೆದವು ಎನ್ನಲಾಗಿದೆ. ಇದನ್ನೇ ಇಟ್ಟುಕೊಂಡು ಡಿ.ಕೆ.ಶಿವಕುಮಾರ್‌ ಬಣವು ಮುಖ್ಯಮಂತ್ರಿಯ ಬದಲಿಗೆ ಧ್ವನಿ ಎತ್ತುತ್ತಿದೆ. ಆದರೆ, ಐದು ವರ್ಷ ಪೂರ್ಣಗೊಳಿಸುವ ಆಸೆಯನ್ನಿಟ್ಟುಕೊಂಡಿರುವ ಸಿದ್ದರಾಮಯ್ಯ, ಮತ್ತೆರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ದಾಳ ಉರುಳಿಸಿದ್ದಾರೆ.

ರಾಜ್ಯದಲ್ಲಿ ಪರ್ಯಾಯ ನಾಯಕತ್ವದ ಕೂಗು ಮೇಲೇಳಲು ಕಾರಣವಾಗುತ್ತಿರುವುದಕ್ಕೆ ತಡೆಯೊಡ್ಡಲು ಉಪಮುಖ್ಯಮಂತ್ರಿಯ ಹುದ್ದೆ ಸೃಷ್ಟಿ ಕಡಿವಾಣ ಹಾಕುವ ತಂತ್ರಗಾರಿಕೆಯು ಅವರದ್ದಾಗಿದೆ. ಮತ್ತೆರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರಾಜಕೀಯ ವೇಗ ನಿಯಂತ್ರಿಸಬಹುದಾಗಿದೆ. ಪ್ರಿಯಾಂಕ್‌ ಖರ್ಗೆ ಮತ್ತು ಜಮೀರ್‌ ಅಹ್ಮದ್‌ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದರಿಂದ ದಲಿತ ಮತ್ತು ಮುಸ್ಲಿಂ ಸಮುದಾಯದ ಬೆಂಬಲವನ್ನೂ ಸಹ ಪಡೆದುಕೊಳ್ಳಬಹುದಾಗಿದೆ. ಡಿ.ಕೆ.ಶಿವಕುಮಾರ್‌ ಸಹ ಈ ಸಮುದಾಯದ ವಿರೋಧ ಕಟ್ಟಿಕೊಳ್ಳಲು ಮನಸ್ಸು ಮಾಡುವುದಿಲ್ಲ. ಹೀಗಾಗಿ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಈ ದಾಳು ಉದುರಿಸುವುದು ರಕ್ಷಣೆಯ ತಂತ್ರಗಾರಿಕೆಯಾಗಿದೆ ಎಂಬುದು ರಾಜಕೀಕ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.

ಜಮೀರ್‌ ಅಹ್ಮದ್‌ಗೆ ನೀಡಲು ಕಾರಣ

ಇನ್ನು, ವಸತಿ ಸಚಿವ ಜಮೀರ್‌ ಅಹ್ಮದ್‌ ಅವರಿಗೆ ಅಲ್ಪಸಂಖ್ಯಾತರ ಕೋಟಾದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಪಡೆದುಕೊಳ್ಳಬಹುದಾಗಿದೆ. ತಮ್ಮ ಸಂಪುಟದಲ್ಲಿ ಪ್ರಿಯಾಂಕ್‌ ಖರ್ಗೆ ಜತೆಗೆ ಜಮೀರ್‌ ಅಹ್ಮದ್‌ ಸಹ ಉಪಮುಖ್ಯಮಂತ್ರಿಯಾಗಬೇಕು ಎಂದು ಸಿದ್ದರಾಮಯ್ಯ ಬಯಸಿದ್ದಾರೆ. ಜಮೀರ್‌ ಅಹ್ಮದ್‌ ಮಂಗಳೂರು ಗಲಭೆ ಪ್ರಕರಣ ಸೇರಿದಂತೆ ಇನ್ನಿತರ ವಿಚಾರದಲ್ಲಿ ಸಂತ್ರಸ್ತರಿಗೆ ದಾನ ನೀಡುವಲ್ಲಿ ದಾರಾಳತನ ತೋರಿರುವುದು ಸಿದ್ದರಾಮಯ್ಯಗೆ ಮೆಚ್ಚುಗೆಯಾಗಿದೆ. ಇದು ಪಕ್ಷದ ಹೈಕಮಾಂಡ್‌ಗೂ ತಲುಪಿದ್ದು, ವರಿಷ್ಠರು ಸಹ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಉಪಮುಖ್ಯಮಂತ್ರಿ ಹುದ್ದೆ ನೀಡಿ ಜಮೀರ್‌ ಅಹ್ಮದ್‌ಗೆ ಬಡ್ತಿ ನೀಡಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಜಾತಿ ಲೆಕ್ಕಾಚಾರ

ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತ ಮತ್ತು ಮುಸ್ಲಿಂ ಸಮುದಾಯಕ್ಕೆ ಉಪಮುಖ್ಯಮಂತ್ರಿ ಪಟ್ಟ ನೀಡಿದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯಿತ ಅಥವಾ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡುವ ಲೆಕ್ಕಾಚಾರವನ್ನು ಹೊಂದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ರಕ್ಷಣಾ ಚದುರಂಗದಾಟದಲ್ಲಿ ಜಾತಿಯ ದಾಳ ಹಾಕಲು ಯೋಚನೆ ಮಾಡಿದ್ದಾರೆ ಎಂಬುದು ರಾಜಕೀಯವಾಗಿ ಕೇಳಿಬರುತ್ತಿರುವ ಮಾತುಗಳಾಗಿವೆ. ದಲಿತ ಮತ್ತು ಮುಸ್ಲಿಂ ಸಮುದಾಯಕ್ಕೆ ಸ್ಥಾನಮಾನ ನೀಡಿದ ಬಳಿಕ ಸಹಜವಾಗಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದಲ್ಲಿ ಭಿನ್ನರಾಗ ಮೂಡಿಬರಲಿದೆ. ಡಿ.ಕೆ.ಶಿವಕುಮಾರ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಅವರು ಉಪಮುಖ್ಯಮಂತ್ರಿಯಾಗಿ ಮುಂದುವರಿಯುವುದರಿಂದ ಒಕ್ಕಲಿಗ ಸಮುದಾಯವನ್ನು ತಣ್ಣಗಾಗಿಸಬಹುದು. ಹೀಗಾಗಿ ಲಿಂಗಾಯಿತ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಲಿಂಗಾಯತ ಸಮುದಾಯದಿಂದ ಸಚಿವರಾದ ಎಂ.ಬಿ.ಪಾಟೀಲ್‌ ಅಥವಾ ಈಶ್ವರ್‌ ಖಂಡ್ರೆಗೆ ಈ ಸ್ಥಾನ ಸಿಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದಲ್ಲದೇ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ ಕೃಷ್ಣ ಬೈರೇಗೌಡ ಹೆಸರು ಸಹ ಕೇಳಿಬರುತ್ತಿದೆ. ಇತ್ತೀಚೆಗೆ ಕೃಷ್ಣ ಬೈರೇಗೌಡ ಅಗತ್ಯಬಿದ್ದರೆ ಪಕ್ಷಕ್ಕಾಗಿ ತಮ್ಮ ಸಚಿವ ಸ್ಥಾನ ತ್ಯಜಿಸಲು ಸಿದ್ದನಿದ್ದೇನೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಕೃಷ್ಣ ಬೈರೇಗೌಡ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆಯೂ ಇದೆ ಎಂಬ ಸಂದೇಶ ರವಾನಿಸಲಾಗಿದೆ ಎನ್ನಲಾಗಿದೆ.

ಇವೆಲ್ಲವೂ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಸ್ಪಷ್ಟಚಿತ್ರಣ ಹೊರಬೀಳಲಿದೆ. ಒಟ್ಟಾರೆ ಜಾತಿ ಲೆಕ್ಕಾಚಾರದಲ್ಲಿ ಹುದ್ದೆಗಳನ್ನು ನೀಡಿ ಮುಖ್ಯಮಂತ್ರಿ ಸ್ಥಾನದಿಂದ ರಕ್ಷಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ತಂತ್ರಗಾರಿಕೆ ರೂಪಿಸಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬಂದ ಮಾತುಗಳಾಗಿವೆ.

Read More
Next Story