ಸು ಫ್ರಂ ಸೋ ಸಿನಿಮಾದ ದಾಮುವಿನ ಚಿತ್ರ ಕಥೆ: ಸೌಹಾರ್ದದ ಮಣ್ಣಲ್ಲಿ ಅರಳಿ ಬೆಳ್ಳಿತೆರೆಯಲ್ಲಿ ಮಿಂಚಿದ ಪ್ರತಿಭೆ!
x

ಸು ಫ್ರಂ ಸೋ ಸಿನಿಮಾದ 'ದಾಮು'ವಿನ ಚಿತ್ರ ಕಥೆ: ಸೌಹಾರ್ದದ ಮಣ್ಣಲ್ಲಿ ಅರಳಿ ಬೆಳ್ಳಿತೆರೆಯಲ್ಲಿ ಮಿಂಚಿದ ಪ್ರತಿಭೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬೈರಿಕಟ್ಟೆ ಒಂದು ವಿಭಿನ್ನ ಮತ್ತು ಮಾದರಿ ಊರು. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರೆಂಬ ಧರ್ಮದ ಗೆರೆಗಳಿಲ್ಲ. ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ, ಸೋದರರಂತೆ ಬದುಕುತ್ತಾರೆ.


Click the Play button to hear this message in audio format

ಬದುಕು ಕೆಲವೊಮ್ಮೆ ಕ್ರೂರ ಪರೀಕ್ಷೆಗಳನ್ನು ಒಡ್ಡುತ್ತದೆ. ಹತಾಶೆಯ ಕತ್ತಲು ಆವರಿಸಿ, ಎಲ್ಲವೂ ಮುಗಿದೇ ಹೋಯಿತು ಎನಿಸುವಂತೆ ಮಾಡುತ್ತದೆ. ಆದರೆ, ಅಂತಹ ಕತ್ತಲೆಯಿಂದಲೇ ಬೆಳಕಿನ ಕಿರಣವೊಂದು ಮೂಡಿ, ಹೊಸ ಅಧ್ಯಾಯವನ್ನು ಬರೆಯಬಲ್ಲದು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಬೈರಿಕಟ್ಟೆ ಎಂಬ ಪುಟ್ಟ ಹಳ್ಳಿಯ ಯುವಕ ಶಿವರಾಂ ಅವರ ಜೀವನವೇ ಅದ್ಭುತ ಉದಾಹರಣೆ. ಕಡು ಬಡತನ, ಮಾರಣಾಂತಿಕ ಅನಾರೋಗ್ಯದಂತಹ ಅಗ್ನಿದಿವ್ಯಗಳನ್ನು ದಾಟಿ ಬಂದ ಈ ಯುವಕ, ಇಂದು 'ಸು ಫ್ರಮ್ ಸೊ' ಎಂಬ ಯಶಸ್ವಿ ಸಿನಿಮಾದ 'ದಾಮು' ಪಾತ್ರದ ಮೂಲಕ ಕರುನಾಡಿನ ಮನೆಮಾತಾಗಿದ್ದಾರೆ. ಅವರ ಈ ಸ್ಪೂರ್ತಿದಾಯಕ ಪಯಣದ ಹಿಂದೆ ಇರುವುದು ಬೈರಿಕಟ್ಟೆಯೆಂಬ ಸೌಹಾರ್ದದ ತವರೂರಿನ ಪ್ರೀತಿ ಮತ್ತು ಸ್ನೇಹದ ಬಲ.

ಸೌಹಾರ್ದತೆಯ ಪ್ರತೀಕ ಬೈರಿಕಟ್ಟೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬೈರಿಕಟ್ಟೆ ಒಂದು ವಿಭಿನ್ನ ಮತ್ತು ಮಾದರಿ ಊರು. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರೆಂಬ ಧರ್ಮದ ಗೆರೆಗಳಿಲ್ಲ. ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ, ಸೋದರರಂತೆ ಬದುಕುತ್ತಾರೆ. ಊರಿನ ಹಬ್ಬ-ಹರಿದಿನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸರ್ವಧರ್ಮೀಯರ ಸಂಗಮಕ್ಕೆ ವೇದಿಕೆಯಾಗುತ್ತವೆ. ಇಂತಹ ಸಾಮರಸ್ಯದ ಮಣ್ಣಿನಲ್ಲೇ ಅರಳಿದ ಪ್ರತಿಭೆ ಶಿವರಾಂ. ಸಾಧು ಸ್ವಭಾವ, ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವ ಗುಣದಿಂದಾಗಿ ಇವರು ಊರಿನ ಸರ್ವರಿಗೂ ಅಚ್ಚುಮೆಚ್ಚಿನ ಹುಡುಗ. ಅವರ ಈ ಯಶಸ್ಸಿನ ಹಿಂದೆ, ಅವರ ಹಿಂದೂ, ಮುಸ್ಲಿಂ, ಕ್ರೈಸ್ತ ಸ್ನೇಹಿತರ ಅಪೂರ್ವ ಬಳಗವೇ ದೊಡ್ಡ ಶಕ್ತಿಯಾಗಿ ನಿಂತಿದೆ.

ಬಡತನದ ಬೇಗೆಯಿಂದ ಸಾವಿನಂಚಿಗೆ

ಕೂಲಿ ಕಾರ್ಮಿಕರ ಮಗನಾಗಿ ಜನಿಸಿದ ಶಿವರಾಂ ಅವರ ಬಾಲ್ಯವು ಹೂವಿನ ಹಾಸಿಗೆಯಾಗಿರಲಿಲ್ಲ. ಮನೆಯಲ್ಲಿನ ಕಡು ಬಡತನದಿಂದಾಗಿ, ಒಂದು ಹಂತದಲ್ಲಿ ಶಾಲೆಯನ್ನು ಬಿಟ್ಟು ಕೂಲಿ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದರು. ಆದರೆ, ಅವರ ಶಾಲಾ ಶಿಕ್ಷಕ ಯಶೋಧರ ಬಂಗೇರ ಅವರು ಶಿಕ್ಷಣದ ಮಹತ್ವವನ್ನು ಮನದಟ್ಟು ಮಾಡಿಸಿ, ಮರಳಿ ಶಾಲೆಯತ್ತ ಮುಖ ಮಾಡುವಂತೆ ಪ್ರೇರೇಪಿಸಿದರು. ಅಲ್ಲಿಂದ ಶಿವರಾಂ ಕ್ರೀಡೆಯಲ್ಲಿ, ವಿಶೇಷವಾಗಿ ವಾಲಿಬಾಲ್‌ನಲ್ಲಿ ಉತ್ತಮ ಸಾಧನೆ ಮಾಡಿ, ಮುಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ವೃತ್ತಿಜೀವನವನ್ನು ರೂಪಿಸಿಕೊಂಡರು.

ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆ, ಶಿವರಾಂ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ವೈದ್ಯರೇ ಅವರ ಬದುಕುವ ಆಸೆಯನ್ನು ಕೈಬಿಟ್ಟಿದ್ದರು. ಆ ಸಂಕಷ್ಟದ ಸಮಯದಲ್ಲಿ, "ಎಷ್ಟು ಖರ್ಚಾದರೂ ಸರಿ, ನಮ್ಮ ಗೆಳೆಯನನ್ನು ಉಳಿಸಿಕೊಡಿ ಡಾಕ್ಟ್ರೇ," ಎಂದು ಆಸ್ಪತ್ರೆಯ ಮುಂದೆ ನಿಂತಿದ್ದು ಬೈರಿಕಟ್ಟೆಯ ಅವರ ಸ್ನೇಹಿತರ ಬಳಗ. ಜಾತಿ, ಧರ್ಮದ ಎಲ್ಲೆಗಳನ್ನು ಮೀರಿ, ಅವರೆಲ್ಲರೂ ಒಂದಾಗಿ ಹಣವನ್ನು ಒಗ್ಗೂಡಿಸಿ, ಮಾಡಿದ ಪ್ರಾರ್ಥನೆ ಫಲಿಸಿತು. ಶಿವರಾಂ ಸಾವನ್ನು ಗೆದ್ದು, ಮರುಜನ್ಮ ಪಡೆದರು.

'ಸು ಫ್ರಮ್ ಸೊ' ಮತ್ತು 'ದಾಮು'ವಿನ ಯಶಸ್ಸಿನ ಪಯಣ

ಸಾವಿನ ದವಡೆಯಿಂದ ಪಾರಾದ ನಂತರ ಶಿವರಾಂ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ನಾಟಕ, ಯಕ್ಷಗಾನಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಅವರಿಗೆ, 'ಮಗನೆ ಮಹಿಷಾ' ಎಂಬ ತುಳು ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶ ದೊರಕಿತು. ನಂತರ 'ರಾಪಟ', 'ಅಬತರಾ', 'ಟಾಸ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರೂ, ಅವರಿಗೆ ದೊಡ್ಡ ಮಟ್ಟದ ಯಶಸ್ಸು ಮತ್ತು ಮನ್ನಣೆ ತಂದುಕೊಟ್ಟಿದ್ದು ರಾಜ್ ಬಿ. ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೊ' ಸಿನಿಮಾ.

ಈ ಸಿನಿಮಾದಲ್ಲಿ ಅವರು ನಿರ್ವಹಿಸಿದ 'ದಾಮು' ಎಂಬ ಮುಗ್ಧ, ಹಾಸ್ಯಮಯ ಪಾತ್ರವು ಪ್ರೇಕ್ಷಕರ ಹೃದಯವನ್ನು ಗೆದ್ದಿತು. ಅವರ ತುಳು ಮಿಶ್ರಿತ ಕನ್ನಡದ "ಇಸ್ತ್ರಿ ಪುಡಿ ಆಪುಂಡು" ಎಂಬ ಡೈಲಾಗ್, ಕರಾವಳಿಯಿಂದ ಹಿಡಿದು ಕರುನಾಡಿನ ಮೂಲೆ ಮೂಲೆಗೂ ತಲುಪಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಈ ಒಂದೇ ಪಾತ್ರವು ಶಿವರಾಂ ಅವರ ಬದುಕಿಗೆ ಬಹುದೊಡ್ಡ ತಿರುವು ನೀಡಿದೆ. ಇದೀಗ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶಗಳು ಅರಸಿ ಬರುತ್ತಿವೆ.

ದೇವಸ್ಥಾನದ ನೈವೇದ್ಯವೇ ಊಟವಾಗಿದ್ದ ದಿನಗಳು

ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ದಿನಗಳನ್ನು ನೆನೆಯುವ ಶಿವರಾಂ, "ನನ್ನ ಮನೆಯಲ್ಲಿ ಅಕ್ಕಿ ಇಲ್ಲದಿದ್ದಾಗ, ಬೈರಿಕಟ್ಟೆಯ ಸುಬ್ರಹ್ಮಣ್ಯ ದೇವಸ್ಥಾನದ ನೈವೇದ್ಯವೇ ನನ್ನ ಹೊಟ್ಟೆ ತುಂಬಿಸುತ್ತಿತ್ತು. ಇಂದು ಅದೇ ದೇವರು, ನನ್ನ ಸ್ನೇಹಿತರ ರೂಪದಲ್ಲಿ ಬಂದು ನನ್ನನ್ನು ಬದುಕಿಸಿದ್ದಾನೆ, ಅವಕಾಶಗಳನ್ನೂ ನೀಡಿದ್ದಾನೆ. ಬೈರಿಕಟ್ಟೆಯ ಜನರ ಪ್ರೀತಿ, ಹಾರೈಕೆಯೇ ನನ್ನ ಯಶಸ್ಸಿಗೆ ಕಾರಣ," ಎಂದು ಭಾವನಾತ್ಮಕವಾಗಿ ಹೇಳುತ್ತಾರೆ.

ಒಟ್ಟಿನಲ್ಲಿ, ಬಡತನ, ಅನಾರೋಗ್ಯದಂತಹ ಎಲ್ಲಾ ಅಡೆತಡೆಗಳನ್ನು ಮೀರಿ, ಸೌಹಾರ್ದತೆಯ ಊರಿನ ಪ್ರೀತಿ ಮತ್ತು ಗೆಳೆತನದ ಬಲದಿಂದ ಮೇಲೆದ್ದು ಬಂದಿರುವ ಶಿವರಾಂ ಅವರ ಕಥೆ, 'ಬದುಕು ಇಲ್ಲಿಗೆ ಮುಗಿದಿಲ್ಲ' ಎಂದು ಹೋರಾಡುತ್ತಿರುವ ಅದೆಷ್ಟೋ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ. ಅವರ ಯಶಸ್ಸು, ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ, ಅದು ಬೈರಿಕಟ್ಟೆಯಂತಹ ಸೌಹಾರ್ದದ ಹಳ್ಳಿಯ ಒಗ್ಗಟ್ಟಿನ ವಿಜಯ.

Read More
Next Story