Stop Imitating ‘Kantara’ Daiva: Hombale Films Urges Respect for Sacred Beliefs
x

ಹೊಂಬಾಳೆ ಸಿನಿಮಾದಿಂದ ಪ್ರಕಟಣೆ ಹೊರಡಿಸಲಾಗಿದೆ. 

‘ಕಾಂತಾರ’ ದೈವದ ಅನುಕರಣೆ ನಿಲ್ಲಿಸಿ: ಹೊಂಬಾಳೆ ಫಿಲ್ಮ್ಸ್ ಮನವಿ

ದೈವಾರಾಧನೆಯ ಮೇಲಿನ ಗೌರವದಿಂದ ಮತ್ತು ಅದರ ಮಹಿಮೆಯನ್ನು ಜಗತ್ತಿಗೆ ಸಾರುವ ಸದುದ್ದೇಶದಿಂದ ಸಿನಿಮಾ ನಿರ್ಮಿಸಿದ್ದೇವೆ. ಇದಕ್ಕೆ ಪ್ರೇಕ್ಷಕರಿಂದ ಸಿಕ್ಕಿರುವ ಪ್ರೀತಿ, ಪ್ರೋತ್ಸಾಹಕ್ಕೆ ನಾವು ಆಭಾರಿಯಾಗಿದ್ದೇವೆ" ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.


Click the Play button to hear this message in audio format

ಜಗತ್ತಿನಾದ್ಯಂತ ಯಶಸ್ಸು ಕಂಡ 'ಕಾಂತಾರ' ಚಲನಚಿತ್ರದಲ್ಲಿನ ದೈವದ ಪಾತ್ರವನ್ನು ಸಾರ್ವಜನಿಕವಾಗಿ ಅಣಕಿಸುವ ಮತ್ತು ಅಸಭ್ಯವಾಗಿ ಅನುಕರಿಸುವವರ ವಿರುದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತೀವ್ರ ಬೇಸರ ವ್ಯಕ್ತಪಡಿಸಿದೆ. ಇದು ತುಳುನಾಡಿನ ಜನರ ಪವಿತ್ರ ನಂಬಿಕೆಗೆ ಮಾಡುವ ಅವಮಾನವಾಗಿದ್ದು, ಇಂತಹ ಕೃತ್ಯಗಳನ್ನು ತಕ್ಷಣವೇ ನಿಲ್ಲಿಸುವಂತೆ ಸಿನಿಪ್ರಿಯರು ಹಾಗೂ ಸಾರ್ವಜನಿಕರಲ್ಲಿ ಸಂಸ್ಥೆಯು ಅಧಿಕೃತವಾಗಿ ಮನವಿ ಮಾಡಿಕೊಂಡಿದೆ.

'ಕಾಂತಾರ' ಹಾಗೂ 'ಕಾಂತಾರ: ಅಧ್ಯಾಯ 1' ಚಿತ್ರಗಳ ಯಶಸ್ಸಿನ ಹಿನ್ನೆಲೆಯಲ್ಲಿ ಈ ಪ್ರಕಟಣೆ ಹೊರಡಿಸಲಾಗಿದೆ. "ತುಳುನಾಡಿನ ಸಂಸ್ಕೃತಿಯ ಹೆಮ್ಮೆಯ ಸಂಕೇತವಾದ ದೈವಾರಾಧನೆಯು ನಮ್ಮ ನಂಬಿಕೆ ಮತ್ತು ಭಕ್ತಿಯ ಪ್ರತಿರೂಪ. ನಾವು ಈ ಚಿತ್ರಗಳನ್ನು ದೈವಾರಾಧನೆಯ ಮೇಲಿನ ಗೌರವದಿಂದ ಮತ್ತು ಅದರ ಮಹಿಮೆಯನ್ನು ಜಗತ್ತಿಗೆ ಸಾರುವ ಸದುದ್ದೇಶದಿಂದ ನಿರ್ಮಿಸಿದ್ದೇವೆ. ಇದಕ್ಕೆ ಪ್ರೇಕ್ಷಕರಿಂದ ಸಿಕ್ಕಿರುವ ಪ್ರೀತಿ, ಪ್ರೋತ್ಸಾಹಕ್ಕೆ ನಾವು ಆಭಾರಿಯಾಗಿದ್ದೇವೆ" ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.

ಆದರೆ, "ಇತ್ತೀಚೆಗೆ ಕೆಲವರು ಚಿತ್ರದಲ್ಲಿನ ದೈವಪಾತ್ರಗಳನ್ನು ಸಾರ್ವಜನಿಕ ಸ್ಥಳಗಳು ಹಾಗೂ ಕಾರ್ಯಕ್ರಮಗಳಲ್ಲಿ ಅಸಭ್ಯ ರೀತಿಯಲ್ಲಿ ಅನುಕರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಚಿತ್ರದಲ್ಲಿ ತೋರಿಸಿರುವ ದೈವಪೂಜೆಯು ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಸಂಪ್ರದಾಯವಾಗಿದ್ದು, ಅದನ್ನು ಹಾಸ್ಯಾಸ್ಪದವಾಗಿ ಅಣಕಿಸುವುದು ಸರಿಯಲ್ಲ. ಇಂತಹ ಕೃತ್ಯಗಳು ನಮ್ಮ ನಂಬಿಕೆ ಹಾಗೂ ತುಳುನಾಡಿನ ಜನರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವನ್ನುಂಟುಮಾಡುತ್ತವೆ" ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಹೊಂಬಾಳೆ ಮನವಿಯೇನು?

ದೈವಪಾತ್ರಗಳನ್ನು ಅನುಕರಿಸುವುದು, ಧ್ವನಿಯನ್ನು ಹೋಲುವುದು ಅಥವಾ ಅವರ ವೇಷಭೂಷಣ ಧರಿಸುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗಬಾರದು. ಚಿತ್ರಮಂದಿರಗಳಲ್ಲಾಗಲಿ ಅಥವಾ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಾಗಲಿ ಈ ರೀತಿ ವರ್ತಿಸಬಾರದು. ದೈವಾರಾಧನೆಯ ಪವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೊಂಬಾಳೆ ತನ್ನ ಮನವಿಯಲ್ಲಿ ಹೇಳಿದೆ.

Read More
Next Story