
ಆನ್‌ಲೈನ್ ಮೂಲಕ ಉದ್ಯೋಗ ಮೇಳ ನಡೆಸಿ ನಿರುದ್ಯೋಗ ನಿವಾರಣೆಗೆ ಕ್ರಮ: ಶರಣಪ್ರಕಾಶ್ ಪಾಟೀಲ್
ಉದ್ಯೋಗ ಮೇಳಗಳನ್ನು ಆನ್‌ಲೈನ್‌ನಲ್ಲಿ ನಡೆಸಲಿದ್ದು, ಜನವರಿ ತಿಂಗಳಲ್ಲಿ ವಿಶ್ವ ಉದ್ಯೋಗ ಮೇಳ ನಡೆಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆದಿದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಮುಂದಿನ ದಿನದಲ್ಲಿ ಉದ್ಯೋಗ ಮೇಳಗಳನ್ನು ಆನ್‌ಲೈನ್‌ನಲ್ಲಿ ನಡೆಸಲಿದ್ದು, ಜನವರಿ ತಿಂಗಳಲ್ಲಿ ವಿಶ್ವ ಉದ್ಯೋಗ ಮೇಳ ನಡೆಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ನಡೆದ ಬೆಂಗಳೂರು ಕೌಶಲ್ಯ ಶೃಂಗಸಭೆಯಲ್ಲಿ ನಡೆದ 2023ರ ವೇಳೆಗೆ ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತೆ ಹೆಜ್ಜೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ. ಈ ಮೇಳದಲ್ಲಿ ಭಾಗವಹಿಸುವವರಲ್ಲಿ ಶೇ.15 ರಷ್ಟು ನೇರ ಉದ್ಯೋಗ ಲಭಿಸುತ್ತಿದೆ. ಇದರ ಬಗ್ಗೆ ಲಭ್ಯವಾಗುತ್ತಿರುವ ಮಾಹಿತಿಯು ಅತ್ಯಂತ ಮಹತ್ವದ್ದಾಗಿದೆ. ಮೇಳಗಳ ಮೂಲಕ ನಿರುದ್ಯೋಗಿಗಳ ಮಾಹಿತಿ ಸಂಗ್ರಹಿಸಿದ್ದೇವೆ. ಅವರು ಯಾವ ಕೋರ್ಸ್ ಮಾಡಿದ್ದಾರೆ, ಯಾವ ರೀತಿಯ ಕೌಶಲ್ಯ ತರಬೇತಿ ಅಗತ್ಯ ಇದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ಉದ್ಯೋಗ ಮೇಳಗಳು ನೇರವಾಗಿ ನಡೆಯುತ್ತಿವೆ. ಇದರಿಂದ ಆ ಪ್ರದೇಶ ವ್ಯಾಪ್ತಿಯ ಜನರು ಭಾಗಿಯಾಗುತ್ತಾರೆ. ದೂರದ ಪ್ರದೇಶದ ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನದಲ್ಲಿ ಆನ್‌ಲೈನ್ ಮೂಲಕ ಉದ್ಯೋಗ ಮೇಳಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಯಾವುದೇ ಪ್ರದೇಶದಿಂದಲೂ ನಿರುದ್ಯೋಗಿಗಳು ಭಾಗವಹಿಸಬಹುದು. ಈ ನಡುವೆ, ವಿಶ್ವ ಉದ್ಯೋಗ ಮೇಳ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಮುಂದಿನ ಜನವರಿಯಲ್ಲಿ ವಿಶ್ವ ಉದ್ಯೋಗ ಮೇಳ ನಡೆಸುವ ಬಗ್ಗೆ ಇಲಾಖೆ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉದ್ಯಮ ಕ್ಷೇತ್ರದ ಸಹಕಾರದೊಂದಿಗೆ ಕೌಶಲ್ಯ ಶಿಕ್ಷಣದ ಪಠ್ಯಕ್ರಮವನ್ನು ಸಂಪೂರ್ಣವಾಗಿ ಪುನರ್ ರಚಿಸುವ ಅಗತ್ಯ ಇದೆ. ರಾಜ್ಯದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ ಮತ್ತು ಇಂಜಿನಿಯರಿಂಗ್ ಕಾಲೇಜುಗಳೂ ಇವೆ. ಆದರೆ ಪದವೀಧರರು ಉದ್ಯಮೋಚಿತ ಕೌಶಲ್ಯ ಪರಿಣತಿ ಹೊಂದುವ ಪಠ್ಯಕ್ರಮವನ್ನು ರೂಪಿಸಬೇಕಾಗಿದೆ. ಇದಕ್ಕೆ ಉದ್ಯಮ ಕ್ಷೇತ್ರದ ಸಹಕಾರ ಅಗತ್ಯ ಇದೆ. ಉದ್ಯಮಗಳು ತಮ್ಮ ಅಗತ್ಯದ ಪ್ರಕಾರ ಎಷ್ಟು ಅಭ್ಯರ್ಥಿಗಳು ಬೇಕು ಹಾಗೂ ಯಾವ ಕೌಶಲ್ಯಗಳಲ್ಲಿ ತರಬೇತಿ ಬೇಕು ಎಂಬುದನ್ನು ಸರ್ಕಾರಕ್ಕೆ ತಿಳಿಸಬಹುದಾಗಿದೆ. ಸರ್ಕಾರದ ಬಳಿಕ ಸದ್ಯಕ್ಕೆ 3 ಲಕ್ಷ ಪದವೀಧರರ ದತ್ತಾಂಶ ಇದೆ. ನಾವು ಅವರಿಗೆ ತರಬೇತಿ ನೀಡಿ, ಅದರ ವೆಚ್ಚವನ್ನು ಸರ್ಕಾರವೇ ಭರಿಸುವ ಸಿದ್ಧತೆಯಲ್ಲಿದೆ. ಆದರೆ, ತರಬೇತಿ ಪಡೆದವರಿಗೆ ಉದ್ಯೋಗ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ವಿದ್ಯಾರ್ಥಿಗಳು ಪದವಿ ಪಡೆದು ನಿರುದ್ಯೋಗಿಗಳಾಗಬಾರದು ಎಂದು ತಿಳಿಸಿದರು.
ಕೌಶಲ್ಯಕ್ಕಾಗಿ ಅಂತರ್ಗತ ಇನ್ಕ್ಯುಬೇಟರ್
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯದಲ್ಲಿ ವಿಕಲಚೇತನರ ಕೌಶಲ್ಯ ಮತ್ತು ಮರುಕೌಶಲ್ಯಕ್ಕಾಗಿ ಅಂತರ್ಗತ ಇನ್ಕ್ಯುಬೇಟರ್ ಅನ್ನು ಪ್ರಾರಂಭಿಸಲಾಗುವುದು. ಈ ಸಂಬಂಧ ಶೀಘ್ರದಲ್ಲಿಯೇ ಪ್ರಸ್ತಾವನೆಯನ್ನು ಸಿದ್ದಪಡಿಸಬೇಕಾಗಿದೆ. ರಾಜ್ಯ ಸರ್ಕಾರವು ರಾಜ್ಯದಲ್ಲಿ ಹೂಡಿಕೆ ತಾಣವಾಗಿ ಪ್ರಚಾರ ಮಾಡುವುದಿಲ್ಲ. ಆದರೆ, ರಾಜ್ಯವನ್ನು ಕೌಶಲ್ಯ ರಾಜಧಾನಿ ಮತ್ತು ಜ್ಞಾನ ತಾಣವಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಇದು ರಾಜ್ಯವನ್ನು ದೇಶದ ಇತರೆ ರಾಜ್ಯಗಳಿಂದ ಪ್ರತ್ಯೇಕಗೊಳಿಸಿ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಲಿದೆ ಎಂದು ತಿಳಿಸಿದರು.
ವಿಶ್ವದಲ್ಲಿ ಕೌಶಲ್ಯ ಆಧಾರಿತ ಪ್ರತಿಭಾನ್ವಿತ ಕೊರತೆ ಇದೆ. ರಾಜ್ಯದಲ್ಲಿಯೂ ಸಹ ಶೇ.40ರಷ್ಟು ಈ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಉತ್ಪಾದಕತೆಯನ್ನು ಹೆಚ್ಚಿಸಲು ಅಥವಾ ಕೇವಲ ಶೇ.1 ರಷ್ಟು ಉದ್ಯೋಗಿಗಳಿಗೆ ಸರಿಯಾದ ಕೌಶಲ್ಯಗಳನ್ನು ನೀಡಿದರೆ, ರಾಜ್ಯ ಆರ್ಥಿಕತೆಗೆ 2.7 ಬಿಲಿಯನ್ ಡಾಲರ್‌ಗಳಷ್ಟು ಪ್ರಯೋಜನವಾಗಲಿದೆ ಎಂಬುದಾಗಿ ಆರ್ಥಿಕ ಸಮೀಕ್ಷೆಯ ವರದಿ ಹೇಳುತ್ತದೆ ಎಂದರು.

