ಮಲ್ಟಿಫ್ಲೆಕ್ಸ್​​ಗಳಲ್ಲಿ 200 ರೂ. ನಿಗದಿಗೊಳಿಸಿದ ಆದೇಶಕ್ಕೆ ತಡೆಯಾಜ್ಞೆ ಮುಂದುವರಿಕೆ
x

ಕರ್ನಾಟಕ ಹೈಕೋರ್ಟ್‌ 

ಮಲ್ಟಿಫ್ಲೆಕ್ಸ್​​ಗಳಲ್ಲಿ 200 ರೂ. ನಿಗದಿಗೊಳಿಸಿದ ಆದೇಶಕ್ಕೆ ತಡೆಯಾಜ್ಞೆ ಮುಂದುವರಿಕೆ

ಮಲ್ಟಿಪ್ಲೆಕ್ಸ್‌ಗಳಲ್ಲಿ ಚಲನಚಿತ್ರಗಳ ಪ್ರದರ್ಶನಕ್ಕೆ ಗರಿಷ್ಠ 200 ರೂ. ಏಕ ರೂಪದ ದರ ನಿಗದಿಪಡಿಸಿ, ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ವಿಧಿಸಿರುವ ತಡೆಯಾಜ್ಞೆಯನ್ನು ಹೈಕೋರ್ಟ್‌ ಮುಂದುವರಿಸಿದೆ.


ಮಲ್ಟಿಪ್ಲೆಕ್ಸ್‌ಗಳಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂಪಾಯಿ ಏಕ ರೂಪದ ದರ ನಿಗದಿಪಡಿಸಿ, ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ವಿಧಿಸಿರುವ ತಡೆಯಾಜ್ಞೆಯನ್ನು ಹೈಕೋರ್ಟ್‌ ಮುಂದುವರಿಸಿದೆ.

ನ್ಯಾಯಾಲಯವು ಸಿನಿಮಾ ಟಿಕೆಟ್‍ಗಳ ಮೇಲೆ ವಿಧಿಸಿದ್ದ 200ರೂ. ಮಿತಿಯನ್ನು ಮುಂದುವರಿಸುವುದರ ಜತೆಗೆ ಎಲ್ಲಾ ಮಲ್ಟಿಪ್ಲೆಕ್ಸ್‌ಗಳು, ಮಾರಾಟವಾದ ಪ್ರತಿಯೊಂದು ಟಿಕೆಟ್‍ಗೆ ಸಮಗ್ರ ಮತ್ತು ಲೆಕ್ಕಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸಲು ನಿರ್ದೇಶಿಸಿದೆ. ಟಿಕೆಟ್‌ ಮಾರಾಟದ ದಿನಾಂಕ ಮತ್ತು ಸಮಯ, ಆನ್‍ಲೈನ್ ಅಥವಾ ಕೌಂಟರ್‌ಗಳಲ್ಲಿ ಬುಕಿಂಗ್ ಮಾಡಿರುವ ವಿವರ, ಕ್ರೆಡಿಟ್, ಡೆಬಿಟ್ ಕಾರ್ಡ್, ಯುಪಿಐ ನೆಟ್ ಬ್ಯಾಂಕಿಂಗ್ ಅಥವಾ ನಗದು ಪಾವತಿ ಮಾಡಿರುವ ವಿವರಗಳನ್ನು ನಿರ್ವಹಣೆ ಮಾಡಬೇಕು. ಎಲ್ಲಾ ನಗದು ವಹಿವಾಟುಗಳಿಗೆ ಡಿಜಿಟಲ್ ಆಗಿ ಪತ್ತೆ ಹಚ್ಚಬಹುದಾದ ರಸೀದಿಗಳನ್ನು ನೀಡಬೇಕು ಮತ್ತು ಪ್ರತಿದಿನ ನಗದು ನೋಂದಣಿಗಳನ್ನು ಮಲ್ಟಿಪ್ಲೆಕ್ಸ್‌ ವ್ಯವಸ್ಥಾಪಕರು ಸಹಿ ಮಾಡಬೇಕು ಎಂದು ತಿಳಿಸಿದೆ.

ಸಂಗ್ರಹಿಸಿದ ಎಲ್ಲಾ ಮೊತ್ತವನ್ನು, ಟಿಕೆಟ್‍ಗಳನ್ನು ಬುಕ್ ಮಾಡಿದ ವೈಯಕ್ತಿಕ ಗ್ರಾಹಕರಿಗೆ ಬುಕಿಂಗ್‍ಗೆ ಬಳಸುವ ಅದೇ ಪಾವತಿ ವಿಧಾನದ ಮೂಲಕ ಮರುಪಾವತಿಸಬೇಕು. 45 ದಿನಗಳಲ್ಲಿ ಪರವಾನಗಿ ಪ್ರಾಧಿಕಾರಕ್ಕೆ ಮರುಪಾವತಿ ಪ್ರಕ್ರಿಯೆಯನ್ನು ಅನುಮೋದನೆಗಾಗಿ ಸಲ್ಲಿಸಬೇಕು. ಪರವಾನಗಿ ಪ್ರಾಧಿಕಾರದಿಂದ ಅನುಮೋದನೆಯ ನಂತರ ಅದನ್ನು ಅಂತಿಮ ಅನುಮೋದನೆಗಾಗಿ ನ್ಯಾಯಾಲಯದ ಮುಂದೆ ಇಡಬೇಕಾಗುತ್ತದೆ ಎಂದು ಹೇಳಿದೆ.

ಏಕ ಸದಸ್ಯ ಪೀಠದ ಮುಂದೆ ವಿಚಾರಣಾ ಹಂತದಲ್ಲಿರುವ ಮೂಲ ಅರ್ಜಿಯ ಅಂತಿಮ ಆದೇಶ ಮಲ್ಟಿಫ್ಲೆಕ್ಸ್ ಅಸೋಷಿಯೇಷನ್​ಗೆ ವಿರುದ್ಧವಾಗಿ ಬಂದಲ್ಲಿ 200 ರೂ.ಗಳಿಗೂ ಹೆಚ್ಚುವರಿಯಾಗಿ ಪಡೆದುಕೊಳ್ಳುವ ಮೊತ್ತವನ್ನು ಗ್ರಾಹಕರಿಗೆ ಹಿಂದಿರುಗಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಪೀಠ ತಿಳಿಸಿದೆ. ಒಂದು ವೇಳೆ, ಈ ಆದೇಶ ಪಾಲಿಸದ ಮಲ್ಟಿಫ್ಲೆಕ್ಸ್​ಗಳಿಗೆ ಏಕ ಸದಸ್ಯ ಪೀಠ ನೀಡಿರುವ ಮಧ್ಯಂತರ ತಡೆ ಆದೇಶ ಅನ್ವಯವಾಗುವುದಿಲ್ಲ ಎಂದು ಇದೇ ವೇಳೆ ಪೀಠ ಸ್ಪಷ್ಟಪಡಿಸಿದೆ.

ಕರ್ನಾಟಕ ಸಿನಿಮಾ ನಿಯಂತ್ರಣ (ತಿದ್ದುಪಡಿ) ನಿಯಮಗಳು - 2025 ಅಡಿ ನಿಯಮ 55(6)ರ ನಿಯಮಕ್ಕೆ ಏಕ ಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆ ತೆರವು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಸಿನಿಮಾ ನಿರ್ಮಾಪಕರ ಸಂಘ ಸೇರಿದಂತೆ ಎಂಟು ಸಿನಿಮಾ/ಕನ್ನಡ ಸಂಘಟನೆಗಳು ಹಾಗೂ 33 ವ್ಯಕ್ತಿಗಳು ಹಾಗೂ ಶ್ರೀವಾರಿ ಟ್ಯಾಕೀಸ್ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು

Read More
Next Story