
ಇಂದಿನಿಂದ ಜಾತಿಗಣತಿ ಆರಂಭ
ರಾಜ್ಯಾದ್ಯಂತ ಜಾತಿ ಗಣತಿಗೆ ಚಾಲನೆ: ವಿದ್ಯುತ್ ಮೀಟರ್ ಮೂಲಕ ಪ್ರತಿ ಮನೆಗೂ ಜಿಯೋ ಟ್ಯಾಗಿಂಗ್
ಆಯೋಗದ ಅಧ್ಯಕ್ಷ ಮಧುಸೂಧನ್ ಆರ್. ನಾಯ್ಕ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲು ಯೋಜಿಸಲಾಗಿದೆ.
ಕರ್ನಾಟಕದಲ್ಲಿ ಬಹು ನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಇಂದಿನಿಂದ (ಆಗಸ್ಟ್ 23) ಅಧಿಕೃತವಾಗಿ ಆರಂಭವಾಗಿದೆ.
90 ದಿನಗಳಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ, ಮೊದಲ ಹಂತದಲ್ಲಿ ವಿದ್ಯುತ್ ಮೀಟರ್ ರೀಡರ್ಗಳು ರಾಜ್ಯದ ಪ್ರತಿ ಮನೆಗೂ ಜಿಯೋ ಟ್ಯಾಗಿಂಗ್ ಮಾಡಲಿದ್ದು, ಈ ಬೃಹತ್ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮನವಿ ಮಾಡಿದೆ.
ಆಯೋಗದ ಅಧ್ಯಕ್ಷ ಮಧುಸೂಧನ್ ಆರ್. ನಾಯ್ಕ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ, ಇಂಧನ ಇಲಾಖೆಯ (ESCOM) ಮೀಟರ್ ರೀಡರ್ಗಳು ತಮ್ಮ ಎಂದಿನ ಬಿಲ್ಲಿಂಗ್ ಕಾರ್ಯದ ಜೊತೆಗೆ, ವಿಶೇಷ ಮೊಬೈಲ್ ಆ್ಯಪ್ ಬಳಸಿ ಮನೆಯನ್ನು 'ಜಿಯೋ ಟ್ಯಾಗ್' ಮಾಡಲಿದ್ದಾರೆ. ಗಣತಿದಾರರಿಗೆ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಪ್ರತಿ ಮನೆಗೆ ವಿಶಿಷ್ಟ ಸಂಖ್ಯೆಯುಳ್ಳ ಸ್ಟಿಕ್ಕರ್ ಅಂಟಿಸಲಾಗುತ್ತದೆ. ರಾಜ್ಯದ ಎಲ್ಲಾ ಮನೆಗಳು ವಿದ್ಯುದ್ದೀಕರಣಗೊಂಡಿರುವುದರಿಂದ ಈ ವಿಧಾನವು ಯಾವುದೇ ಮನೆ ಸಮೀಕ್ಷೆಯಿಂದ ಕೈತಪ್ಪಿ ಹೋಗದಂತೆ ನೋಡಿಕೊಳ್ಳಬಹುದು.
ಈ ಪೂರ್ವ ಸಿದ್ಧತೆ ಪೂರ್ಣಗೊಂಡ ಬಳಿಕ, ಎರಡನೇ ಹಂತದ ಮುಖ್ಯ ಸಮೀಕ್ಷಾ ಕಾರ್ಯವು ದಸರಾ ರಜೆಯ ಅವಧಿಯಲ್ಲಿ, ಅಂದರೆ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7, 2025 ರವರೆಗೆ ನಡೆಯಲಿದೆ. ಶಾಲಾ ರಜೆ ಇರುವುದರಿಂದ ಗಣತಿ ಕಾರ್ಯಕ್ಕೆ ಸಿಬ್ಬಂದಿ ಲಭ್ಯತೆ ಸುಲಭವಾಗಲಿದೆ ಎಂದು ಆಯೋಗ ತಿಳಿಸಿದೆ.
ಸುಧಾರಿತ ಆ್ಯಪ್ ವಿನ್ಯಾಸ
ಈ ಸಮೀಕ್ಷೆಗಾಗಿ ಇ-ಆಡಳಿತ ಮತ್ತು ಇಂಧನ ಇಲಾಖೆಗಳು ಜಂಟಿಯಾಗಿ ಸುಧಾರಿತ ಆ್ಯಪ್ ಅನ್ನು ವಿನ್ಯಾಸಗೊಳಿಸಿವೆ. ಇದು ಕೇವಲ ಹಿಂದುಳಿದ ವರ್ಗಗಳ ಮಾಹಿತಿ ಸಂಗ್ರಹಕ್ಕೆ ಸೀಮಿತವಾಗಿಲ್ಲ, ಬದಲಾಗಿ ರಾಜ್ಯದ ಸುಮಾರು 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಸಮಗ್ರ ದತ್ತಾಂಶವನ್ನು ಸಂಗ್ರಹಿಸುವ ಗುರಿ ಹೊಂದಿದೆ. ಭವಿಷ್ಯದಲ್ಲಿ ಸರ್ಕಾರದ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಈ ದತ್ತಾಂಶವನ್ನು ಬಳಸಿಕೊಳ್ಳಲಾಗುವುದು.
ಮೊದಲ ಹಂತದ ಮನೆ ಪಟ್ಟಿ ಮತ್ತು ಜಿಯೋ ಟ್ಯಾಗಿಂಗ್ ಪ್ರಕ್ರಿಯೆಯು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ವಿಶೇಷವಾಗಿ ಅಪಾರ್ಟ್ಮೆಂಟ್ಗಳು ಮತ್ತು ಕ್ಲಸ್ಟರ್ ಮನೆಗಳಲ್ಲಿ ವಾಸಿಸುವ ನಾಗರಿಕರು ಮೀಟರ್ ರೀಡರ್ಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಆಯೋಗ ಕೋರಿದೆ.