
ಮಹಿಳೆಯರ ಕಗ್ಗೊಲೆಗಳ ವಿರುದ್ಧ ಹಕ್ಕೊತ್ತಾಯ; ಗೃಹ ಸಚಿವರ ವಿರುದ್ಧ ಆಕ್ರೋಶ
ʻಕರ್ನಾಟಕದ ಗೃಹ ಸಚಿವರು, "ಆಯ್ತು ನಾವು ಮಾಡ್ತೀವಿ, ನೋಡ್ತೀವಿ" ಎಂದು ನಿಧಾನವಾಗಿ ಹೇಳುವುದರಲ್ಲೇ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆʼ ಎಂದು ಸಾಮಾಜಿಕ ಕಾರ್ಯಕರ್ತೆ ಬಿ.ಟಿ ಲಲಿತಾ ನಾಯಕ್ ವ್ಯಂಗ್ಯ ವಾಡಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಆಯೋಜಿಸಿದ್ದ ಮಹಿಳೆಯರ ಕಗ್ಗೊಲೆಗಳ ವಿರುದ್ಧ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.
ʻಕರ್ನಾಟಕದ ಗೃಹ ಸಚಿವರು, "ಆಯ್ತು ನಾವು ಮಾಡ್ತೀವಿ, ನೋಡ್ತೀವಿ" ಎಂದು ನಿಧಾನವಾಗಿ ಹೇಳುವುದರಲ್ಲೇ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆʼ ಎಂದು ಸಾಮಾಜಿಕ ಕಾರ್ಯಕರ್ತೆ ಬಿ.ಟಿ ಲಲಿತಾ ನಾಯಕ್ ವ್ಯಂಗ್ಯ ವಾಡಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಆಯೋಜಿಸಿದ್ದ ಮಹಿಳೆಯರ ಕಗ್ಗೊಲೆಗಳ ವಿರುದ್ಧ ಹಕ್ಕೊತ್ತಾ ಸಭೆಯಲ್ಲಿ ಅವರು ಮಾತನಾಡಿದರು.
ʼಕಾನೂನು ಬಿಗಿಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಪ್ರಜ್ವಲ್‌ನಂತವರು ಸಾವಿರಾರು ಹೆಣ್ಣು ಮಕ್ಕಳ ಮಾನಭಂಗ ಮಾಡುವುದು, ಹೆಣ್ಣು ಮಕ್ಕಳ ಕುತ್ತಿಗೆಯನ್ನು ಕೊಯ್ದು ಧಾರಾಳವಾಗಿ ತೋರಿಸುವುದು ಹಾಗೂ ಅದರಲ್ಲೂ ಬಚಾವಾಗುವುದಕ್ಕೆ ಪುರುಷ ಪ್ರಧಾನ ಸಮಾಜವೇ ಕಾರಣ. ಪೊಲೀಸರು, ನ್ಯಾಯಾಂಗ, ಸರ್ಕಾರ ಹಾಗೂ ಜನಪ್ರತಿನಿಧಿಗಳು ಪುರುಷ ಪ್ರಧಾನ ಚಿಂತನೆಯಲ್ಲೇ ವಿಚಾರ ಮಾಡುತ್ತಿರುವುದರಿಂದ ಅಪರಾಧಿಗಳು ಪಾರಾಗುತ್ತಿದ್ದಾರೆʼ ಎಂದು ದೂರಿದರು.
ʻಆಟವಾಡುವ ಮಕ್ಕಳು ಕೊಲೆ ಮಾಡುವ ಹಂತಕ್ಕೆ ಹೋಗುತ್ತಿದ್ದು, ಸಮಾಜ ಎಲ್ಲಿಗೆ ತಲುಪಿದೆ ಎನ್ನುವುದು ಅರ್ಥವಾಗುತ್ತದೆ. ಈ ಕ್ರೌರ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಇದನ್ನು ಬೇರಿನಿಂದಲೇ ಸರಿಪಡಿಸಬೇಕು. ಸೂಕ್ಷ್ಮವಾಗಿ ಮನಸ್ಸು ಬದಲಾಯಿಸಬೇಕು ಎಂದು ಇಲ್ಲಿಯವರೆಗೂ ಚಿಂತಿಸುತ್ತಿದ್ದೆವು. ಆದರೆ, ನಾವು ಯಾವ ರೀತಿಯಿಂದಲೂ ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದೆನಿಸುತ್ತಿದೆ. ನಾವು ಈಗ ನ್ಯಾಯ ಸಿಗವ ವರೆಗೂ ಹೋರಾಟ ಮಾಡಬೇಕಿದೆʼ ಎಂದು ಹೇಳಿದರು.
ʻನನ್ನ ಮಗಳು ಬುದ್ಧಿ ವಂತೆಯಾಗಿದ್ದಳು, ದೊಡ್ಡ ಕನಸುಗಳನ್ನು ಕಂಡಿದ್ದಳು. ಆದರೆ, ಅವಳನ್ನು ಅಮಾನುಷ ರೀತಿಯಲ್ಲಿ ಕೊಲೆ ಮಾಡಲಾಯಿತು. ನನ್ನ ಮಗಳ ಸಾವಿಗೆ ನ್ಯಾಯ ಸಿಗಲಿಲ್ಲʼ ಎಂದು ಈಚೆಗೆ ಕೊಲೆಯಾದ ಪ್ರಭುಧ್ಯಾ ಅವರ ತಾಯಿ ಹಾಗೂ ಹೋರಾಟಗಾರ್ತಿ ಕೆ.ಆರ್ ಸೌಮ್ಯ ಅವರು ನೋವು ತೋಡಿಕೊಂಡರು.
ʻನನ್ನ ಮಗಳನ್ನು ಕೊಲೆ ಮಾಡಿದವನು 10 ದಿನದಲ್ಲಿ ಜಾಮೀನಿನ ಮೇಲೆ ಬಂದಿದ್ದಾರೆ. ಅವರ ಹೆಸರನ್ನು ಹೇಳುವಂತೆಯೂ ಇಲ್ಲ. ಕೊಲೆ ಮಾಡಿದವನನ್ನು ಬಾಲಕ, ಅಪ್ರಾಪ್ತ ಎನ್ನಬಾರದು ಕೊಲೆಗಾರ ಎಂದೇ ಹೇಳಬೇಕುʼ ಎಂದು ಒತ್ತಾಯಿಸಿದರು.
ʻನನ್ನ ಮಗಳನ್ನು ಕೊಲೆ ಮಾಡಿದವು ಕಳ್ಳನಾಗಿದ್ದ ಎನ್ನುವ ವಿಷಯ ಈಗ ಬೆಳಕಿಗೆ ಬರುತ್ತಿದೆ. ಪೊಲೀಸರು ಮೊದಲು ಇದು ಆತ್ಮಹತ್ಯೆ ಎಂದರೆ, ನಾವು ನಂಬಲು ಸಿದ್ಧರಿರಲಿಲ್ಲ. ಇದು ಕೊಲೆ ಎನ್ನುವ ಅನುಮಾನ ಮೊದಲಿನಿಂದಲೂ ಇತ್ತು. ನನ್ನ ಮಗಳು ಮಹಿಳಾ ಪರವಾಗಿ ಧ್ವನಿ ಎತ್ತಿದ್ದಳು. ತಿಳುವಳಿಕೆಯುಳ್ಳವಳಾಗಿದ್ದಳು. ಬಡವರಿಗೆ ಸಹಾಯ ಮಾಡುತ್ತಿದ್ದಳು. ಒಬ್ಬ ಹೋರಾಟಗಾರಳಾಗಿ ನಾನೇ ನನ್ನ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ, ಅದಕ್ಕೆ ನೀವೆಲ್ಲ ಬೆಂಬಲವಾಗಿ ನಿಲ್ಲಬೇಕುʼ ಎಂದು ಕಣ್ಣೀರಾದರು.
ʻರಾಜ್ಯದಲ್ಲಿ ಪೊಲೀಸ್ ಇಲಾಖೆ ಸಮರ್ಥವಾಗಿ ಕಾರ್ಯುನಿರ್ವಹಿಸಿದರೆ, ಜನ ಮಹಿಳಾ ಆಯೋಗಕ್ಕೆ ಬರುವುದಿಲ್ಲ. ಮಹಿಳಾ ಆಯೋಗಕ್ಕೆ ಬರುವ ಶೇ 90ರಷ್ಟು ಜನ ಮೊದಲು ಪೊಲೀಸರನ್ನು ಸಂಪರ್ಕಿಸಿರುತ್ತಾರೆ. ಕೊನೆಗೆ ಮಹಿಳಾ ಆಯೋಗಕ್ಕೆ ಬರುತ್ತಾರೆ. ಆಗ ನಾವು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು. ನಾವ್ಯಾಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಬೇಕು. ಪೊಲೀಸರೇ ಅವರ ಕೆಲಸವನ್ನು ಮಾಡಬೇಕಲ್ಲವೇʼ ಎಂದು ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ಡಾ. ನಾಗಲಕ್ಷ್ಮೀ ಚೌಧರಿ ಪ್ರಶ್ನಿಸಿದರು.
ʻಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂದಾಗಲೂ, 40 ವರ್ಷದಿಂದ ಆ ಕ್ಷೇತ್ರದ ಜನರೇ ಬಾಯಿ ಬಿಟ್ಟಿಲಿಲ್ಲ, ನಿನಗ್ಯಾಕೆ ಎಂದು ಕೆಲವರು ನನ್ನನ್ನು ಪ್ರಶ್ನಿಸಿದರು. ಆದರೆ, ನಾನು ಬಿಡಲಿಲ್ಲ, ನಾನು ಅದಕ್ಕೆಲ್ಲ ಹೆದರಲಿಲ್ಲ. ಮುರು ದಿನವೇ ಪತ್ರಿಕಾಗೋಷ್ಠಿ ನಡೆಸಿದೆ, ಎಸ್ಐಟಿ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆʼ ಎಂದರು.
ರಾಜ್ಯದಲ್ಲಿ ಈಚೆಗೆ ಯುವತಿಯರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಕೊಲೆಗಳನ್ನು ವಿರೋಧಿಸಿ ಈ ಹಕ್ಕೋತ್ತಾಯ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ನಾವೆದ್ದು ನಿಲ್ಲದಿದ್ದರೆ ಸಂಘಟನೆ, ಮಹಿಳಾ ಮುನ್ನಡೆ,ಜನವಾದಿ ಮಹಿಳಾ ಸಂಘಟನೆ, ಎದ್ದೇಳು ಕರ್ನಾಟಕ ಹಾಗೂ ತಮಟೆ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಮೌನ ಮುರಿಯದಿದ್ದರೆ ಈ ದಮನ ನಿಲ್ಲದು ಎನ್ನುವ ಘೋಷಾವಾಕ್ಯದೊಂದಿಗೆ ಸಭೆ ನಡೆಯಿತು.
ಸಭೆಯಲ್ಲಿ ಮಂಡಿಸಲಾದ ಹಕ್ಕೊತ್ತಾಯಗಳು
* ಕಳೆದ ಕೆಲವು ತಿಂಗಳುಗಳಲ್ಲಿ ನಡೆದಿರುವ ಮಹಿಳೆಯರು, ವಿದ್ಯಾರ್ಥಿನಿಯರ ಕಗ್ಗೊಲೆಗಳ, ಹೆಣ್ಣು ಮಕ್ಕಳ ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳ ಹಾಗೂ ಆ್ಯಸಿಡ್ ದಾಳಿಗಳ ಎಲ್ಲ ಪ್ರಕರಣಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ನಿರ್ದಿಷ್ಟ ಕ್ರಮಗಳನ್ನು ಶಿಫಾರಸ್ಸು ಮಾಡಲು ತಜ್ಞರು, ಕಾನೂನು ಪರಿಣಿತರು, ಸರ್ಕಾರದ ಪ್ರತಿನಿಧಿಗಳು ಮತ್ತು ಸಾಮಾಜಿಕ ಹೋರಾಟಗಾರರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು.
* ರಾಜ್ಯದಲ್ಲಿ ನಡೆಯುತ್ತಿರುವ ಭೀಕರ ಕೊಲೆಗಳು ಅಲ್ಲಲ್ಲಿ ನಡೆಯುವ ಬಿಡಿ ಘಟನೆಗಳೆಂಬ ಮನೋಭಾವವನ್ನು ಬಿಟ್ಟು ಸರ್ಕಾರ ಈ ಕೂಡಲೇ ಇವುಗಳನ್ನು ನಿಯಂತ್ರಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳನ್ನು ಕಾರ್ಯಪ್ರವೃತ್ತಗೊಳಿಸಬೇಕು.
* ವಿದ್ಯಾರ್ಥಿನಿಯರು, ಮಹಿಳೆಯರು ಮತ್ತು ಸಾರ್ವಜನಿಕರು ಇಂತಹ ತೊಂದರೆಗಳಲ್ಲಿ ಸಿಲುಕಿದ್ದರೆ, ಅವುಗಳ ಬಗ್ಗೆ ಧೈರ್ಯವಾಗಿ ಬಂದು ಪೊಲೀಸ್ ಇಲಾಖೆಯನ್ನು ಮತ್ತು ಸಂಬಂಧಪಟ್ಟ ಇತರೆ ಸರ್ಕಾರದ ಘಟಕಗಳನ್ನು ಸಂಪರ್ಕಿಸಲು ಉತ್ತೇಜಿಸುತ್ತಾ ವಿಸ್ತೃತವಾಗಿ ಜನರಿಗೆ ಮಾಹಿತಿ ನೀಡಬೇಕು.
* ನೊಂದವರಿಂದ ಮುನ್ಸೂಚನೆ ದೊರೆತ ಕೂಡಲೇ ನಿರ್ಲಕ್ಷ್ಯಿಸದೆ ಗಂಭೀರವಾದ ರೀತಿಯಲ್ಲಿ ತನಿಖೆ ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.
* ಹದಿಹರೆಯದ ಹುಡುಗರು, ವಿದ್ಯಾರ್ಥಿಗಳು ಮತ್ತು ಪುರುಷರಿಂದ ಮಹಿಳೆಯರ ಮೇಲೆ ನಡೆಯುವ ದಾಳಿಗಳನ್ನು ನಿಲ್ಲಿಸಲು ಬೇಕು. ಈ ನಿಟ್ಟಿನಲ್ಲಿ ಅರಿವಿನ ಕಾರ್ಯಕ್ರಮಗಳನ್ನು ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಸಾಮಾಜಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಆಯೋಜಿಸಬೇಕು.
* ಭೀಕರ ದಾಳಿಗಳು ಮತ್ತು ದೌರ್ಜನ್ಯದ ಪ್ರಕರಣಗಳ ಸಂದರ್ಭದಲ್ಲಿ ಜವಾಬ್ದಾರಿ ಸ್ಥಾನಗಳಲ್ಲಿ ಇರುವವರು ಹಗುರವಾದ ಹೇಳಿಕೆಗಳನ್ನು ನೀಡದೆ, ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು.
* ಸಮಾಜವು ಮೌನವಾಗಿ ನಿರ್ಲಿಪ್ತವಾಗಿರುವುದನ್ನು ನಿಲ್ಲಿಸಬೇಕು, ಮೌನ ಮುರಿದು ದನಿಯೆತ್ತಬೇಕು. ನಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳಲು ಹೋರಾಟಕ್ಕೆ ಮುಂದಾಗಬೇಕು.