‌ಕೇಂದ್ರದಿಂದ ಅಕ್ಕಿ ಕೊಟ್ಟರೂ ಖರೀದಿಸಲು ರಾಜ್ಯದ ಬಳಿ ದುಡ್ಡಿಲ್ಲ: ಪ್ರಲ್ಹಾದ್ ಜೋಶಿ
x

‌ಕೇಂದ್ರದಿಂದ ಅಕ್ಕಿ ಕೊಟ್ಟರೂ ಖರೀದಿಸಲು ರಾಜ್ಯದ ಬಳಿ ದುಡ್ಡಿಲ್ಲ: ಪ್ರಲ್ಹಾದ್ ಜೋಶಿ


ʻಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ಕೊಡಲು ಸಿದ್ಧವಾಗಿದೆ. ಆದರೆ ಆ ಅಕ್ಕಿ ಖರೀದಿಸಲು ರಾಜ್ಯ ಸರ್ಕಾರದ ಬಳಿಯೇ ಹಣವೇ ಇಲ್ಲʼ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ʻʻನಾವು ಕೇಳಿದಾಗ ಕೇಂದ್ರ ಅಕ್ಕಿ ಕೊಡಲಿಲ್ಲ. ಈಗ ಭಾರತ್ ಅಕ್ಕಿ ಕೂಡ ನಿಲ್ಲಿಸಿದ್ದಾರೆ. ಶೀಘ್ರವೇ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಅಕ್ಕಿ ಮಾರಾಟ ಮಾಡುವಂತೆ ಕ್ರಮ ಕೈಗೊಳ್ಳಬೇಕುʼʼ ಎಂದು ಒತ್ತಾಯಿಸಿದ್ದರು. ಈ ಹೇಳಿಕೆ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಜೋಶಿ, ʻʻಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ಕೊಡಲು ಸಿದ್ಧವಾಗಿದೆ. ಆದರೆ ಆ ಅಕ್ಕಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲʼʼ ಎಂದು ತಿರುಗೇಟು ನೀಡಿದ್ದಾರೆ.

ʻʻಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ದರಿದ್ರ ಸರ್ಕಾರವಾಗಿ ಪರಿವರ್ತನೆ ಆಗಿದೆ. ಒಂದು ರಸ್ತೆ ಮಾಡಿಸೋದಕ್ಕೂ ದುಡ್ಡಿಲ್ಲ. ಕಳೆದ ಬಾರಿ ನಮ್ಮ ಬಳಿ ಅಕ್ಕಿ ಬಫರ್ ಸ್ಟಾಕ್‌ಗೆ ಹತ್ತಿರ ಇತ್ತು. ದೇಶಾದ್ಯಂತ ಅಕ್ಕಿ ಸಂಗ್ರಹ ಕಡಿಮೆ ಆಗುತ್ತೆ ಎನ್ನುವ ಆತಂಕ ಇತ್ತು, ಆದ್ದರಿಂದ ಅಕ್ಕಿ ನಿಲ್ಲಿಸಿದ್ದೆವು. ಈಗ ನಮ್ಮ ಬಳಿ ಅಕ್ಕಿ ಸ್ಟಾಕ್ ಇದೆ. ಮುಕ್ತ ಮಾರುಕಟ್ಟೆ ಸಪೋರ್ಟ್ ಸಿಸ್ಟಮ್‌ನಲ್ಲಿ (Open Market Support System) ನಾವು ಅಕ್ಕಿ ಕೊಡುತ್ತಿದ್ದೇವೆ. 34 ರೂ. ಇದ್ದ ಅಕ್ಕಿ ಬೆಲೆ 28 ರೂ.ಗೆ ಇಳಿಕೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಡಬೇಕುʼʼ ಎಂದು ಕುಟುಕಿದ್ದಾರೆ.

ʻʻನೀವು ಜನರಿಗೆ ಅಕ್ಕಿಯ ಹಣ 170 ರೂ. ಕೊಟ್ಟಿದ್ದೀರಿ? ಕಳೆದ 2 ತಿಂಗಳಿಂದ ಗೃಹಲಕ್ಷ್ಮಿ ಹಣವೇ ಬಂದಿಲ್ಲ. ವೃದ್ಯಾಪ್ಯ ವೇತನವೂ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಯಾಕೆ ಹೆಚ್ಚಿಸಿದ್ದೀರಿ? ನಾಚಿಕೆ ಆಗಲ್ವಾ ನಿಮಗೆ? ಜನರಿಗೆ ದ್ರೋಹ ಮಾಡುವ ಸರ್ಕಾರ ಸಿದ್ಧರಾಮಯ್ಯ ಸರ್ಕಾರ. ಎಲ್ಲ ಬೆಲೆಯನ್ನು ಹೆಚ್ಚು ಮಾಡಿದ್ದಾರೆ. ಜನರಿಗೆ ಹೊರೆ ಹಾಕುವ ಕೆಲಸ ಮಾಡಿದ್ದಾರೆ. ಯಾವುದೇ ಸಣ್ಣ ಕೆಲಸಕ್ಕೂ ದುಡ್ಡಿಲ್ಲ ಎನ್ನುತ್ತಿದ್ದಾರೆ. ಇವಾಗ ಅಕ್ಕಿ ತಗೊಳ್ಳಿ ಅಂದರೆ ಅದಕ್ಕೂ ರಾಜ್ಯ ಸರ್ಕಾರದ ಬಳಿ ದುಡ್ಡು ಇಲ್ಲ. ಏನಾಗುತ್ತಿದೆ ಎಂದು ಅಧಿಕಾರಿಗಳಿಂದ ತಿಳಿದುಕೊಂಡು ಸಿದ್ದರಾಮಯ್ಯ ಅವರು ಮಾತಾಡಬೇಕುʼʼ ಎಂದು ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

Read More
Next Story