ಅಪಸ್ವರದ ಮಧ್ಯೆಯೂ ಗ್ಯಾರಂಟಿ ಮುಂದುವರಿಸಿದ ರಾಜ್ಯ ಸರ್ಕಾರ: KSRTCಗೆ ದಾಖಲೆ ಲಾಭ
x

ಅಪಸ್ವರದ ಮಧ್ಯೆಯೂ ಗ್ಯಾರಂಟಿ ಮುಂದುವರಿಸಿದ ರಾಜ್ಯ ಸರ್ಕಾರ: KSRTCಗೆ ದಾಖಲೆ ಲಾಭ


ರಾಜ್ಯ ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಆರಂಭಿಸಿ ಸರಿಸುಮಾರು ಒಂದು ವರ್ಷ ಕಳೆಯುತ್ತ ಬಂದಿದೆ. ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಮಾತ್ರವಲ್ಲದೇ ಸ್ವಪಕ್ಷದವರಿಂದಲೇ ಟೀಕೆಗಳು ಅಸಮಾಧಾನ ವ್ಯಕ್ತವಾಗಿತ್ತು. ಆದರೆ ಮಹಿಳೆಯರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ದಾಖಲೆಯ ಲಾಭವಾಗಿದೆ.

ಸ್ವಪಕ್ಷದವರಿಂದಲೇ ಗ್ಯಾರಂಟಿಗೆ ಅಪಸ್ವರ

ಕಳೆದ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿತ್ತು. ಈ ಸಂದರ್ಭದಲ್ಲಿ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಚೆಲುವರಾಯಸ್ವಾಮಿ‌ ಗ್ಯಾರಂಟಿ ಯೋಜನೆಗಳು‌ ಚುನಾವಣೆ ಗೆಲ್ಲುವ ಗಿಮಿಗ್‌ ಅಷ್ಟೇ ಎಂದು ಹೇಳಿದ ವಿಡಿಯೋ ವೈರಲ್‌ ಆಗಿತ್ತು.

ಚೆಲುವರಾಯ ಸ್ವಾಮಿ ಹೇಳಿದ್ದೇನು?

‘ಮೊದಲಿಗೆ ಉಚಿತ ಯೋಜನೆಗಳನ್ನು ಘೋಷಿಸುವ ಬಗ್ಗೆ ದೇಶದಲ್ಲೆಲ್ಲ ಚರ್ಚೆಯಾಯಿತು. ನಾವು ಕೂಡ ಚರ್ಚೆ ಮಾಡಿದೆವು. ಇದು ಒಳ್ಳೆಯದಲ್ಲ ಎಂಬುದಾಗಿ. ಮುಂದೆ ಫ್ರೀ ಫ್ರೀ ಅಂತ ಹೋದರೆ ಇದು ಎಲ್ಲಿಗೆ ಹೋಗಿ ಮುಟ್ಟಬಹುದು ಅಂತ. ಈಗ ನಾವುಗಳೂ ಅದೇ ದಾರಿಯಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್, ಸರ್ಕಾರ ಬಂದ್ರೆ ತಾನೇ ನಾವೇನಾದ್ರೂ ಮಾಡಲು ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ನಾವು ಕೆಲಸ ಮಾಡಲು ಸಾಧ್ಯವಾಗುವುದು ಅನ್ನುವ ದೃಷ್ಟಿ ಬಂದಾಗ ಆವತ್ತಿಗೆ ರಿಸಲ್ಟ್ ಅನಿವಾರ್ಯ ಆಗುತ್ತದೆ. ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ ಚೀಪ್ ಪಾಪ್ಯಲಾರಿಟಿ, ಇಲ್ಲದ್ದು ಬಲ್ಲದ್ದು ಎಲ್ಲ ಮಾಡ್ತೀವಿ. ಬಟ್ ನಮ್ಮ ಮನಸಿಗೆ ಇಷ್ಟ ಆಗ್ತದೋ ಇಲ್ಲವೋ, ಸಿದ್ದರಾಮಯ್ಯನವರ ಮನಸಿಗೆ ಇಷ್ಟ ಆಗ್ತದೋ ಇಲ್ಲವೋ ಕೆಲವೊಂದನ್ನು ಮಾಡಿಕೊಂಡು ಹೋಗಬೇಕಾಗುತ್ತದೆ. ಕೆಲವನ್ನು ಆ್ಯಕ್ಸೆಪ್ಟ್ ಮಾಡಬೇಕಾಗುತ್ತದೆ’ ಎಂದು ಚೆಲುವರಾಯಸ್ವಾಮಿ ಹೇಳಿರುವುದು ವಿಡಿಯೋದಲ್ಲಿದೆ.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸೋಲು ಕಂಡರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ʻʻಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಅದನ್ನು ಅವರು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಬಿಜೆಪಿ ನಮ್ಮ ಗ್ಯಾರಂಟಿ ವಿರುದ್ಧ ಮಾತಾನಾಡುತ್ತಿತ್ತು. ಜನ ಅವರನ್ನು ಬೆಂಬಲಿಸಿದ್ದಾರೆ. ಹಾಗಾಗಿ ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ. ಗ್ಯಾರಂಟಿ ನಿಲ್ಲಿಸೋದೇ ಒಳ್ಳೆಯದು ಎನ್ನುವುದು ನನ್ನ ಸಲಹೆʼʼ ಎಂದು ಹೇಳುವ ಮೂಲಕ ಗ್ಯಾರಂಟಿಗಳಿಂದ ಲಾಭವಿಲ್ಲ ಎಂದಿದ್ದರು.

ಅದೇ ರೀತಿಯಲ್ಲಿ ಮಾಗಡಿ ಕಾಂಗ್ರೆಸ್‌ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ಚುನಾವಣೆ ಬಳಿಕ ಮಾತನಾಡಿ, ʻʻಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿಲ್ಲ. ಡಿ.ಕೆ.ಸುರೇಶ್‌ ಅವರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಬಂದಿರುವ ಮತಗಳನ್ನು ಗಮನಿಸಿದರೆ ಗ್ಯಾರಂಟಿ ಯೋಜನೆಗಳು ಕೈ ಹಿಡಿದಿಲ್ಲ ಎಂಬ ಮನವರಿಕೆ ಆಗಿದೆ. ನಿಮ್ಮ ಗ್ಯಾರಂಟಿ ಅವಶ್ಯಕತೆ ಇಲ್ಲ ಅಂತ ಜನ ತೀರ್ಮಾನ ಮಾಡಿದ್ದಾರೆ. ಸಿಎಂ ಮತ್ತು ಡಿಸಿಎಂ, ಹಿರಿಯರು ಮಂತ್ರಿಮಂಡಲದಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು.

ಇನ್ನು ಪ್ರತಿ ಪಕ್ಷಗಳು ಸಾಮಾನ್ಯವಾಗಿ ಆಡಳಿತ ಪಕ್ಷದ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಲೇ ಬಂದಿದ್ದಾರೆ. ಇದೀಗ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಒಂದು ವರ್ಷ ಪೂರೈಸಿ ಮುಂದುವರೆದಿದೆ. ಈ ಸಂದರ್ಭದಲ್ಲಿ ಶಕ್ತಿ ಯೋಜನೆಯಿಂದಾದ ಲಾಭ ನಷ್ಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಶಕ್ತಿ ಯೋಜನೆಯಿಂದ 2023 ಜೂನ್‌ 11 ರಿಂದ 2024 ಜೂನ್‌ 9 ರವರೆಗೆ ಕೆಎಸ್‌ಆರ್‌ಟಿಸಿ ಭರ್ಜರಿ 5481.40 ಕೋಟಿ ರೂ. ಆದಾಯ ಗಳಿಸಿದೆ. ಇದು ದಾಖಲೆಯ ಲಾಭವಾಗಿದೆ. ಈ ಒಂದು ವರ್ಷದಲ್ಲಿ ಒಟ್ಟು 390.58 ಕೋಟಿ ಜನರು ಬಸ್‌ನಲ್ಲಿ ಪ್ರಯಾಣಿಸಿದ್ದರೆ, ಇದರಲ್ಲಿ 225.15 ಕೋಟಿ ಮಹಿಳೆಯರೇ ಪ್ರಯಾಣಿಸಿರುವುದು ವಿಶೇಷ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಅಲ್ಲಿಯವರೆಗೆ ದಿನಕ್ಕೆ 84.5 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿಯಾದ ಮೇಲೆ ನಿತ್ಯ 1.06 ಕೋಟಿಗೆ ಏರಿಕೆಯಾಗಿದೆ. ದುಡಿಯುವ ವರ್ಗದ ಮಹಿಳೆಯರಿಗೆ ಉಪಯೋಗವಾಗಿದೆ. ಜೊತೆಗೆ ಧಾರ್ಮಿಕ ಕೇಂದ್ರ, ಪ್ರವಾಸಿ ತಾಣಗಳ ಸಹಿತ ವಿವಿಧೆಡೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಲು ಕೂಡ ಕಾರಣವಾಗಿದೆ.

ಬಿಎಂಟಿಸಿಯಲ್ಲಿ ಪ್ರಯಾಣಿಕರು ಅತಿ ಹೆಚ್ಚು ಬಾರಿ (71.49 ಕೋಟಿ) ಪ್ರಯಾಣಿಸಿದ್ದಾರೆ. ಆದರೆ, ಟಿಕೆಟ್ ಮೌಲ್ಯದ ಲೆಕ್ಕದಲ್ಲಿ ಬಿಎಂಟಿಸಿ ಕೊನೆಯ (7937 ಕೋಟಿ) ಸ್ಥಾನದಲ್ಲಿದೆ. ಸಂಚಾರದ ವ್ಯಾಪ್ತಿ ನಗರಕ್ಕೆ

ಸೀಮಿತವಾಗಿರುವುದು ಇದಕ್ಕೆ ಕಾರಣ. ಕೆಎಸ್‌ಆರ್‌ಟಿಸಿಯಲ್ಲಿ 68.22 ಕೋಟಿ, ಎನ್‌ಡಬ್ಲ್ಯುಕೆಆರ್‌ಟಿಸಿಯಲ್ಲಿ 52.14 ಕೋಟಿ ಹಾಗೂ ಕೆಕೆಆರ್‌ಟಿಸಿಯಲ್ಲಿ 33.29 ಕೋಟಿ ಬಾರಿ ಮಹಿಳೆಯರು ಸಂಚರಿಸಿದ್ದಾರೆ. ಟಿಕೆಟ್ ಮೌಲ್ಯದ ಲೆಕ್ಕದಲ್ಲಿ ಕೆಎಸ್‌ಆರ್‌ಟಿಸಿ ಮೊದಲ (72,070 ಕೋಟಿ) ಸ್ಥಾನದಲ್ಲಿದೆ. ಎನ್‌ಡಬ್ಲ್ಯುಕೆಆರ್‌ಟಿಸಿ (‍1,352 ಕೋಟಿ), ಕೆಕೆಆರ್‌ಟಿಸಿ (11,130 ಕೋಟಿ) ಆನಂತರದ ಸ್ಥಾನಗಳಲ್ಲಿವೆ.

ಶಕ್ತಿಯೇತರ ಪ್ರಯಾಣಿಕರಿಂದ ಶೇ 57.5 ಆದಾಯ ಏರಿಕೆ

ಶಕ್ತಿ ಯೋಜನೆಗೆ ಒಂದು ವರ್ಷ ಪೂರೈಸಿರುವ ಈ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ʻʻಕಳೆದ ವರ್ಷ ಈ ಹೊತ್ತಿಗೆ ನಷ್ಟದ ಸುಳಿಯಲ್ಲಿ ಸಿಲುಕಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಶಕ್ತಿ ಯೋಜನೆ ಜಾರಿಗೊಂಡ ನಂತರದಲ್ಲಿ ಲಾಭದ ಹಾದಿಗೆ ಮರಳಿದೆ. ಪ್ರಯಾಣಿಕರಿಲ್ಲದೆ ಖಾಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ ಗಳು ಇಂದು ಪ್ರಯಾಣಿಕರಿಂದ ತುಂಬಿತುಳುಕುತ್ತಿವೆ. ವಿವಿಧ ಸಾರಿಗೆ ಸಂಸ್ಥೆಗಳಿಗೆ ಶೇ. 57.5 ರಷ್ಟು ಶಕ್ತಿ ಯೋಜನೆ ಹೊರತಾದ ಪ್ರಯಾಣಿಕರಿಂದ ಆದಾಯ ಬರುತ್ತಿದೆ. ಶಕ್ತಿ ಯೋಜನೆ ನಾಡಿನ ಮಹಿಳೆಯರಿಗೆ ಮಾತ್ರವಲ್ಲ ಸಾರಿಗೆ ಸಂಸ್ಥೆಗಳಿಗೂ ವರದಾನವಾಗಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು?ʼʼ ಎಂದಿದ್ದಾರೆ.

ಶಕ್ತಿ ಯೋಜನೆಯಿಂದ ಆದಾಯ ಶೇ 42.5 ಇದ್ದರೆ, 'ಶಕ್ತಿ'ಯೇತರ ಪ್ರಯಾಣಿಕರಿಂದ ಶೇ 57.5 ಆದಾಯ ಅಂದರೆ 32,764 ಕೋಟಿ ಗಳಿಸಿದೆ. ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವುದರ ಜೊತೆಗೆ ಪುರುಷರ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುವುದು ಇದಕ್ಕೆ ಕಾರಣ. ಈ ಹಿಂದೆ ಬಸ್‌ಗಳು ಶೇ 50ರಿಂದ ಶೇ 60ರಷ್ಟು ಮಾತ್ರ ಭರ್ತಿಯಾಗುತ್ತಿದ್ದವು ಆದರೆ ಶಕ್ತಿ ಯೋಜನೆ ಜಾರಿಯಾದ ಮೇಲೆ ಶೇ 85ರಷ್ಟು ಭರ್ತಿಯಾಗುತ್ತಿವೆ. ಕೆಎಸ್‌ಆರ್‌ಟಿಸಿ ವರಮಾನ ಹಿಂದೆ ದಿನಕ್ಕೆ 79.7 ಕೋಟಿ ಇದ್ದಿದ್ದು, ಶಕ್ತಿ ಜಾರಿಯಾದ ಮೇಲೆ 313.9 ಕೋಟಿಗೆ ಏರಿಕೆಯಾಗಿದೆ.

ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಹಾಗೂ ಸ್ವಪಕ್ಷದವರಿಂದ ಎಷ್ಟೇ ಅಪಸ್ವರಗಳು ಕೇಳಿ ಬಂದರೂ ಸರ್ಕಾರ ಈ ಯೋಜನೆಗಳನ್ನು ಮುಂದುವರೆಸುವುದಾಗಿ ಹೇಳಿದೆ. ಈ ಗ್ಯಾರಂಟಿ ಯೋಜನೆಗಳಿಂದ 4.60 ಕೋಟಿ ಜನರಿಗೆ ಲಾಭವಾಗುತ್ತಿದೆ. ಹಾಗಾಗಿ ಈ ಜನಪರ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್‌ ಸರ್ಕಾರ ತನ್ನ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಒಟ್ಟು 52,000 ಕೋಟಿ ರೂ. ಅನುದಾನ ಮೀಸಲಿಟ್ಟಿದೆ.

Read More
Next Story