ಸರ್ಕಾರ ಕೊಟ್ಟಿಲ್ಲ ಹೈನುಗಾರರ ಪ್ರೋತ್ಸಾಹಧನ; ನಾಲ್ಕು ತಿಂಗಳಿಂದ 400 ಕೋಟಿ  ಬಾಕಿ
x

ಸರ್ಕಾರ ಕೊಟ್ಟಿಲ್ಲ ಹೈನುಗಾರರ ಪ್ರೋತ್ಸಾಹಧನ; ನಾಲ್ಕು ತಿಂಗಳಿಂದ 400 ಕೋಟಿ ಬಾಕಿ

ಹಾಲಿನ ಬಟವಾಡೆ ಜೊತೆಗೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹಧನದಿಂದಲೇ ಬಹಳಷ್ಟು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ಕಳೆದ ನಾಲ್ಕು ತಿಂಗಳಿಂದ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದಿರುವುದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.


ಹೈನೋದ್ಯಮವನ್ನೇ ನಂಬಿ ಬದುಕುತ್ತಿರುವ ಗ್ರಾಮಾಂತರ ಪ್ರದೇಶದ ರೈತರಿಗೆ ಕಳೆದ ನಾಲ್ಕು ತಿಂಗಳಿಂದ ರಾಜ್ಯ ಸರ್ಕಾರ ಸುಮಾರು 400 ಕೋಟಿಗೂ ಹೆಚ್ಚು ಹಾಲಿನ ಪ್ರೋತ್ಸಾಹಧನ ಪಾವತಿಸಿಲ್ಲ. 2024 ಏಪ್ರಿಲ್ ತಿಂಗಳಿಂದ ಆಗಸ್ಟ್ ವರೆಗೂ ಪ್ರೋತ್ಸಾಹಧನ ಸಿಗದೇ ಹೈನುಗಾರರರು ನಾನಾ ಸಂಕಷ್ಟ ಎದುರಿಸುತ್ತಿದ್ದಾರೆ.

ಹಾಲಿನಲ್ಲಿರುವ ಫ್ಯಾಟ್ ಅಂಶ ಆಧರಿಸಿ ಸದಸ್ಯರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ರಾಜ್ಯಾದ್ಯಂತ ಒಟ್ಟು 15 ಜಿಲ್ಲಾ ಹಾಲು ಒಕ್ಕೂಟಗಳಡಿ 15700 ಹಾಲು ಉತ್ಪಾದಕ ಸಹಕಾರ ಸಂಘಗಳ ಮೂಲಕ ರೈತರಿಗೆ ಹಾಲು ಖರೀದಿಸಲಾಗುತ್ತಿದೆ. 7,98,631ಮಂದಿ ಫಲಾನುಭವಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಹಾಲಿನ ಬಟವಾಡೆ ಜೊತೆಗೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹಧನದಿಂದಲೇ ಬಹಳಷ್ಟು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ಕಳೆದ ನಾಲ್ಕು ತಿಂಗಳಿಂದ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದಿರುವುದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 2024 ಮೇ ತಿಂಗಳಿಂದ ಆಗಸ್ಟ್ ವರೆಗೆ ಒಟ್ಟು 432 ಕೋಟಿ. ರೂ. ಪ್ರೋತ್ಸಾಹಧನವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಕೆಎಂಎಫ್ ಸಂಸ್ಥೆಯ ಉನ್ನತ ಮೂಲಗಳು ತಿಳಿಸಿವೆ.

2008 ಸೆಪ್ಟೆಂಬರ್ 8 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗೆ 2 ರೂ. ಹಾಲಿನ ಪ್ರೋತ್ಸಾಹಧನವನ್ನು ಮೊದಲ ಬಾರಿಗೆ ಘೋಷಣೆ ಮಾಡಿದರು. 2013 ಮೇ 14 ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರೋತ್ಸಾಹಧನವನ್ನು 4 ರೂ.ಗಳಿಗೆ ಹೆಚ್ಚಿಸಿದ್ದರು. ನಂತರ 2016 ನವೆಂಬರ್ 19 ರಂದು ಸಿದ್ದರಾಮಯ್ಯ ಅವರೇ ಪ್ರೋತ್ಸಾಹಧನವನ್ನು 5 ರೂ.ಗಳಿಗೆ ಹೆಚ್ಚಿಸಿದ್ದರು. 2023-24 ರಲ್ಲಿ ಒಟ್ಟು 1168.76 ಕೋಟಿ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆ ಮೂಲಕ ಪಾವತಿಸಿದೆ. ಗ್ರಾಹಕರಿಗೆ ಮಾರಾಟ ಮಾಡುವ ದರದ ಶೇ 79 ರಷ್ಟು ಭಾಗವನ್ನು ಹಾಲು ಉತ್ಪಾದಕರಿಗೆ ರವಾನಿಸುತ್ತಿದೆ.

ಮುಂದಿನ ತಿಂಗಳಲ್ಲಿ ಹಣ ಬಿಡುಗಡೆ

ರಾಜ್ಯ ಸರ್ಕಾರ ನೀಡುವ 5 ರೂ. ಹಾಲಿನ ಪ್ರೋತ್ಸಾಹಧನವನ್ನು ಪಶು ಸಂಗೋಪನೆ ಇಲಾಖೆಯ ಖಾತೆಗೆ ಬಂದಿದೆ. ಮುಂದಿನ ತಿಂಗಳು ಡೇರಿ ಸದಸ್ಯರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಪಶು ಸಂಗೋಪನೆ ಇಲಾಖೆಯ ಮುಖ್ಯ ಪಶು ಅಧಿಕಾರಿ ಡಾ. ರಶ್ಮಿ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು. ಆದರೆ, ಇಂತಿಷ್ಟೇ ಹಣ ಬಾಕಿ ಇದೆ ಎಂಬುದನ್ನು ವಿವರಿಸಿಲ್ಲ.

2024 ಏಪ್ರಿಲ್ ತಿಂಗಳವರೆಗೆ ಎಲ್ಲ ರೈತರಿಗೆ ಪ್ರೋತ್ಸಾಹಧನ ನೀಡಿದ್ದೇವೆ. ಪರಿಶಿಷ್ಟ ಜಾತಿ/ ವರ್ಗದವರಿಗೆ 2024 ಮೇ ತಿಂಗಳಿಂದ ಜುಲೈವರೆಗಿನ ಪ್ರೋತ್ಸಾಹಧನ ಬಂದಿದೆ. ಸಾಮಾನ್ಯ ವರ್ಗದವರಿಗೆ ಮೇ ಹಾಗೂ ಜೂನ್ ತಿಂಗಳ ಪ್ರೋತ್ಸಾಹ ಧನ ಬಂದಿದೆ. ಮುಂದಿನ ತಿಂಗಳು ಹಾಲು ಉತ್ಪಾದಕರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.

ಆಗಸ್ಟ್ ತಿಂಗಳ ಪ್ರೋತ್ಸಾಹಧನ ವಿಳಂಬವಾಗಲಿದೆ. ಏಕೆಂದರೆ ಹಾಲು ಉತ್ಪಾದಕ ಸಹಕಾರ ಸಂಘಗಳ ಮೂಲಕ ಫಲಾನುಭವಿಗಳ ಮಾಹಿತಿ ಕ್ರೂಢೀಕರಣ ನಡೆಯುತ್ತಿದೆ. ಮುಂದಿನ ತಿಂಗಳಾಂತ್ಯದಲ್ಲಿ ಮಾಹಿತಿ ಸಂಗ್ರಹಿಸಿ ಆನಂತರ ಆ ಹಣವನ್ನೂ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರ ಪ್ರತಿ ವರ್ಷ 1000 ಕೋಟಿ ರೂ.ಗೂ ಹೆಚ್ಚು ಹಣವನ್ನು ಹಾಲಿನ ಪ್ರೋತ್ಸಾಹಧನವಾಗಿ ನೀಡುತ್ತಿದೆ. ಈಗ ನಾಲ್ಕು ತಿಂಗಳಿಂದ ಒಟ್ಟು 400 ಕೋಟಿಗೂ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದೆ. ರೈತರ ಬದುಕಿಗೆ ಆಧಾರವಾಗಿರುವ ಹೈನೋದ್ಯಮ ಉಳಿಯಬೇಕಾದರೆ ಕಾಲಕಾಲಕ್ಕೆ ಹಾಲಿನ ಪ್ರೋತ್ಸಾಹಧನ ನೀಡಬೇಕು. ಹಾಲು ಖರೀದಿಸುವ ಗ್ರಾಹಕರಿಗಿಂತ ಹಾಲು ಉತ್ಪಾದಿಸುವ ರೈತರ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು ಎಂದು ರೈತಪರ ಹೋರಾಟಗಾರ್ತಿ ಸುನಂದ ಜಯರಾಮ್ ಒತ್ತಾಯಿಸಿದರು.

ಹೊಸ ದರ ಘೋಷಣೆಗಷ್ಟೇ ಸೀಮಿತ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹಾಲಿನ ದರವನ್ನು ಲೀಟರ್ ಮೇಲೆ 5 ರೂ. ಹೆಚ್ಚಿಸುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಪ್ರೋತ್ಸಾಹಧನವನ್ನೇ ಬಾಕಿ ಉಳಿಸಿಕೊಂಡಿರುವ ಸರ್ಕಾರ ಹೊಸ ದರ ಬಿಡುಗಡೆ ಮಾಡುವುದು ಕನಸಿನ ಮಾತಾಗಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್) ಪಶು ಆಹಾರದ ಬೆಲೆ ಹೆಚ್ಚಿಸಿದೆ. ಪ್ರೋತ್ಸಾಹಧನದ ಹಣದಲ್ಲಾದರೂ ಪಶು ಆಹಾರ ಖರೀದಿಸಬಹುದಿತ್ತು. ಈಗ ಅದನ್ನೂ ಬಾಕಿ ಉಳಿಸಿಕೊಂಡಿದೆ. ನಾವೇ ಬದುಕುವುದು ಕಷ್ಟವಾಗಿರುವ ಸಂದರ್ಭದಲ್ಲಿ ಜಾನುವಾರುಗಳನ್ನೂ ಸಾಕಬೇಕಾದ ಪರಿಸ್ಥಿತಿ ಬಂದಿದೆ ಎಂದು ಮಧುಗಿರಿಯ ಯುವ ರೈತ ಗೋವಿಂದರಾಜು ನೋವು ತೋಡಿಕೊಂಡರು.

ಸರ್ಕಾರ ಉಚಿತ ಭಾಗ್ಯಗಳಿಗಾಗಿ ಪರಿಶಿಷ್ಟರ ಹಣವನ್ನೇ ಖರ್ಚು ಮಾಡುತ್ತಿದೆ. ಯಾವುದೇ ಹೊಸ ಯೋಜನೆ, ಕ್ಷೇತ್ರಾಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಹೈನುಗಾರರ ಕಷ್ಟ ನಷ್ಟಗಳ ಕುರಿತು ಹಲವಾರು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಪ್ರಾಂತ ರೈತ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕಾರ್ಯದರ್ಶಿ ಚಂದ್ರ ತೇಜಸ್ವಿ ದೂರಿದರು.

Read More
Next Story