
ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು
Pahalgam Terror Attack | ಪಹಲ್ಗಾಮ್ ಭಯೋತ್ಪಾದಕ ಕೃತ್ಯದ ವಿರುದ್ದ ರಾಜ್ಯ ಸರ್ಕಾರ ಖಂಡನಾ ನಿರ್ಣಯ
ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ರಾಜ್ಯ ಸರ್ಕಾರವು ತೀವ್ರವಾಗಿ ಖಂಡಿಸುತ್ತದೆ. ಎಲ್ಲ ಮೃತರಿಗೆ ರಾಜ್ಯದ ಜನರ ಪರವಾಗಿ ನೋವಿನ ಸಂತಾಪಗಳನ್ನು ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯದ ವಿರುದ್ದ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ರಾಜ್ಯ ಸರ್ಕಾರವು ತೀವ್ರವಾಗಿ ಖಂಡಿಸುತ್ತದೆ. ಎಲ್ಲ ಮೃತರಿಗೆ ರಾಜ್ಯದ ಜನರ ಪರವಾಗಿ ನೋವಿನ ಸಂತಾಪಗಳನ್ನು ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ. ಉಗ್ರರ ದಾಳಿ ಮನುಷ್ಯ ಕುಲದ ಮೇಲೆ ನಡೆಸುತ್ತಿರುವ ಭೀಬತ್ಸ ಕೃತ್ಯ ಎಂದು ತೀರ್ಮಾನಿಸಬೇಕು. ಎಲ್ಲ ರೀತಿಯ ಉಗ್ರವಾದವನ್ನು ಬುಡಸಮೇತ ಕಿತ್ತು ಹಾಕಲು ಇಡೀ ದೇಶ ಒಂದಾಗಿ ನಿಂತು ಶ್ರಮಿಸಬೇಕು ಎಂದು ನಿರ್ಣಯಿಸಲಾಗಿದೆ.
ಘಟನೆಗೆ ಕಾರಣವಾಗಿರುವ ವೈಫಲ್ಯಗಳ ಕುರಿತು ಸಮರ್ಥ ಮತ್ತು ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಲು ಸಂಪುಟ ಸಭೆ ತೀರ್ಮಾನಿಸಿದೆ. ಮುಂದೆ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸರ್ಕಾರವು ರಾಜ್ಯದ ಜನರ ಪರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಮಂಗಳವಾರ (ಏಪ್ರಿಲ್ 22) ರಂದು ಜಮ್ಮಕಾಶ್ಮೀರದ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ರಾಜ್ಯದ ಇಬ್ಬರು ಪ್ರವಾಸಿಗರು ಸೇರಿ 26 ಮಂದಿ ಮೃತಪಟ್ಟಿದ್ದು ಹಲವು ಮಂದಿಗೆ ಗಾಯಗಳಾಗಿತ್ತು. ಸಿಎಂ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಹಿರಿಯ ಅಧಿಕಾರಿಗಳ ತಂಡ ಪಹಲ್ಗಾಮ್‌ಗೆ ತೆರಳಿ 180 ಪ್ರವಾಸಿಗರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.
ಮೃತರ ಪಾರ್ಥೀವ ಶರೀರಗಳಿಗೆ ಸೂಕ್ತ ಪೊಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು.