
ಜ್ಯೋತಿ ಬೆಳಗುವುದರ ಮೂಲಕ ದಸರಾ ಕ್ರೀಡಾಕೂಟಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೆ ಚಾಲನೆ: ಒಲಿಂಪಿಕ್ಸ್ ವಿಜೇತರಿಗೆ 6 ಕೋಟಿ ರೂ. ಪ್ರಕಟ
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಈ ಕ್ರೀಡಾಕೂಟವು, ರಾಜ್ಯದ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ ಕರ್ನಾಟಕ ಸರ್ಕಾರವು 6 ಕೋಟಿ ರೂಪಾಯಿ ನಗದು ಬಹುಮಾನ ನೀಡಲಿದೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಸೋಮವಾರ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ "ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ"ವನ್ನು ಉದ್ಘಾಟಿಸಿ ಮಾತನಾಡಿದರು. ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಈ ಕ್ರೀಡಾಕೂಟವು, ರಾಜ್ಯದ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, "ಈ ಕ್ರೀಡಾಕೂಟದಲ್ಲಿ ಐದು ವಿಭಾಗಗಳಿಂದ ಒಟ್ಟು 3,600 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಎಲ್ಲಾ ಕ್ರೀಡಾಪಟುಗಳಿಗೆ ನನ್ನ ಶುಭಾಶಯಗಳು. ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮತ್ತು ಕ್ರೀಡಾ ಸ್ಫೂರ್ತಿ ಮುಖ್ಯ," ಎಂದು ಹುರಿದುಂಬಿಸಿದರು.
ಕ್ರೀಡಾಂಗಣದ ಅಭಿವೃದ್ಧಿಗೆ 20.78 ಕೋಟಿ ರೂಪಾಯಿ
ಚಾಮುಂಡಿ ವಿಹಾರ ಕ್ರೀಡಾಂಗಣದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಸಿದ್ದರಾಮಯ್ಯ, "ಕ್ರೀಡಾಂಗಣದ ಗ್ಯಾಲರಿ ಮತ್ತು ಈಜುಕೊಳಗಳಿಗೆ ಅತ್ಯಾಧುನಿಕ ಟೆನ್ಸೈಲ್ ಮೆಂಬ್ರೇನ್ ಛಾವಣಿ ಅಳವಡಿಕೆ ಹಾಗೂ ಹೊಸ ಫುಟ್‌ಬಾಲ್ ಅಂಕಣ ನಿರ್ಮಾಣ ಕಾಮಗಾರಿಯನ್ನು 20.78 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ," ಎಂದು ಪ್ರಕಟಿಸಿದರು.
ವಿನೇಶ್ ಫೋಗಟ್ ಉಪಸ್ಥಿತಿ
ಸಮಾರಂಭದಲ್ಲಿ, ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತೆ, ಅಂತರರಾಷ್ಟ್ರೀಯ ಮಹಿಳಾ ಕುಸ್ತಿಪಟು ಮತ್ತು ಹರಿಯಾಣದ ಶಾಸಕಿ ವಿನೇಶ್ ಫೋಗಟ್ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು. ಅವರ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, "ಕುಸ್ತಿಯು ಕೇವಲ ಪುರುಷರ ಕ್ರೀಡೆ ಎಂದು ಪರಿಗಣಿಸಲಾಗಿದ್ದ ಕಾಲದಲ್ಲಿ, ಸಾಮಾಜಿಕ ಅಡೆತಡೆಗಳನ್ನು ಮೆಟ್ಟಿನಿಂತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರು ವಿನೇಶ್ ಫೋಗಟ್. ಅವರು ಒಲಿಂಪಿಕ್ಸ್‌ನಲ್ಲಿ ಭಾರತದ ಕೀರ್ತಿಯನ್ನು ಬೆಳಗಿದ್ದಾರೆ," ಎಂದು ಶ್ಲಾಘಿಸಿದರು.
ಕ್ರೀಡಾಪಟುಗಳಿಗೆ ಸರ್ಕಾರದ ಬೆಂಬಲ
ಕ್ರೀಡಾಪಟುಗಳಿಗೆ ಸರ್ಕಾರವು ನಿರಂತರವಾಗಿ ಬೆಂಬಲ ನೀಡುತ್ತಿದೆ ಎಂದು ಒತ್ತಿ ಹೇಳಿದ ಸಿದ್ದರಾಮಯ್ಯ, ಹಲವು ಪ್ರಮುಖ ಯೋಜನೆಗಳನ್ನು ಪ್ರಕಟಿಸಿದರು ಮುಂದಿನ ಒಲಿಂಪಿಕ್ಸ್‌ಗೆ ತರಬೇತಿ ಪಡೆಯಲು ರಾಜ್ಯದ 60 ಅತ್ಯಂತ ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ, ಅವರಿಗೆ ವಾರ್ಷಿಕ ತಲಾ 10 ಲಕ್ಷ ರೂಪಾಯಿ ಸಹಾಯಧನ ನೀಡಿ ತರಬೇತಿ ನೀಡಲಾಗುವುದು. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರೆ 6 ಕೋಟಿ ರೂಪಾಯಿ, ಬೆಳ್ಳಿ ಪದಕಕ್ಕೆ 4 ಕೋಟಿ ಮತ್ತು ಕಂಚಿನ ಪದಕಕ್ಕೆ 2.5 ಕೋಟಿ ನಗದು ಬಹುಮಾನ ನೀಡಲಾಗುವುದು. ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಅನುಕೂಲ ಕಲ್ಪಿಸಲು, ಎಲ್ಲಾ ಇಲಾಖೆಗಳಲ್ಲಿ ಶೇ.2 ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಈ ಮೀಸಲಾತಿಯನ್ನು ಶೇ.2 ರಿಂದ ಶೇ.3ಕ್ಕೆ ಹೆಚ್ಚಿಸಲಾಗಿದೆ ಎಂದು ಸಿಎಂ ಹೇಳಿದರು.