Karnataka Budget 2025 | ಇಲಾಖಾವಾರು ಅನುದಾನ ಹಂಚಿಕೆಯಲ್ಲಿ ಹಿಂದೆ ಬಿದ್ದ ಸಿಎಂ ಸಿದ್ದರಾಮಯ್ಯ?
x
ಮುಖ್ಯಮಂತ್ರಿ ಸಿದ್ದರಾಮಯ್ಯ

Karnataka Budget 2025 | ಇಲಾಖಾವಾರು ಅನುದಾನ ಹಂಚಿಕೆಯಲ್ಲಿ ಹಿಂದೆ ಬಿದ್ದ ಸಿಎಂ ಸಿದ್ದರಾಮಯ್ಯ?

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಒತ್ತಡದಲ್ಲಿರುವ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ, ಇಲಾಖಾವಾರು ಅನುದಾನ ಬಿಡಗಡೆಯಲ್ಲಿ ಹಿಂದೆ ಬಿದ್ದಿದ್ದಾರೆ.


ತಮ್ಮ 16ನೇ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರು ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರಾ? ಸಮೀಪಿಸುತ್ತಿರುವ ರಾಜ್ಯ ಬಜೆಟ್‌ ಹಿನ್ನೆಲೆಯಲ್ಲಿ ಇಂಥದ್ದೊಂದು ಚರ್ಚೆ ಕಾವೇರಿದೆ.

ಕಳೆದ ವರ್ಷ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್ ಅನುದಾನ ಕುರಿತು ಚರ್ಚೆಗಳು ಆರಂಭವಾಗಿವೆ. ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿದ್ದು, ಈ ಕುರಿತು ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ. ಜೊತೆಗೆ 2024-25ರ ಬಜೆಟ್​ನಲ್ಲಿ ಘೋಷಣೆ ಆಗಿದ್ದ ಎಲ್ಲ ಕಾರ್ಯಕ್ರಮಗಳಿಗೆ ಇಲಾಖಾವಾರು ಅನುದಾನ ಸಂಪೂರ್ಣವಾಗಿ ಹಂಚಿಕೆ ಆಗಿಲ್ಲ ಎಂಬ ಮಾಹಿತಿ ಇದೆ.

ಕಳೆದ ವರ್ಷ ಅಂದರೆ 2024-25ನೇ ಸಾಲಿನಲ್ಲಿ ಸಿಎಂ ಸಿದ್ದರಾಮಯ್ಯ ಒಟ್ಟು 3,71,383 ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಅದರಲ್ಲಿ ವಲಯವಾರು ಹಂಚಿಕೆಗೆ ಆದ್ಯತೆ ಕೊಟ್ಟಿರುವುದಾಗಿ ತಮ್ಮ ಬಜೆಟ್‌ ಭಾಷಣದಲ್ಲಿ ಅವರು ಉಲ್ಲೇಖಿಸಿದ್ದರು. ಆದರೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಹೆಣಗಾಡುತ್ತಿರುವ ಹಿನ್ನೆಲೆಯಲ್ಲಿ ಇಲಾಖಾವಾರು ಅನುದಾನ ಹಂಚಿಕೆಯಲ್ಲಿ ಹಿಂದೆ ಬಿದ್ದಿರುವುದು ಕಂಡುಬಂದಿದೆ.

2024-25 ನೇ ಸಾಲಿನ ಬಜೆಟ್​ನಲ್ಲಿ ಒಟ್ಟು 3,30,880 ಕೋಟಿ ರೂಪಾಯಿಗಳ ಅನುದಾನವನ್ನು ಇಲಾಖಾವಾರು ಹಂಚಿಕೆ ಮಾಡಲಾಗಿತ್ತು. ಆದರೆ ಕಳೆದ ಡಿಸೆಂಬರ್ ಅಂತ್ಯಕ್ಕೆ 2,02,977 ಕೋಟಿ ರೂಪಾಯಿಗಳನ್ನು ಮಾತ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಘೋಷಿತ ಬಜೆಟ್‌ ಅನುದಾನದಲ್ಲಿ ಅರ್ಧಕ್ಕಿಂತ ಹೆಚ್ಚು; ಅಂದರೆ ಸುಮಾರು ಶೇ.35 ರಷ್ಟನ್ನು ಬಾಕಿ ಉಳಿಸಿಕೊಂಡಿದೆ. ಒಟ್ಟು 1,27,903 ಕೋಟಿ ರೂ. ಅನುದಾನವನ್ನು ಇಲಾಖೆಗಳಿಗೆ ಹಣಕಾಸು ಇಲಾಖೆ ಇನ್ನೂ ಬಿಡುಗಡೆ ಮಾಡಬೇಕಿದೆ.

ಶಿಕ್ಷಣ ಇಲಾಖೆಗೂ ಬಾಕಿ

ಇಲಾಖಾವಾರು ಹಂಚಿಕೆಯನ್ನು ನೋಡುವುದಾದರೆ, ಶಿಕ್ಷಣ ಇಲಾಖೆಗೆ 37,452 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈವರೆಗೆ 24,199 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ 13,253 ಕೋಟಿ ರೂ. ಅನುದಾನವನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸದೃಢಗೊಳಿಸಲು ತಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳುವ ಶಿಕ್ಷಣ ಸಚಿವರು ಮತ್ತು ಸ್ವತಃ ಮುಖ್ಯಮಂತ್ರಿಗಳು ಶಿಕ್ಷಣ ಇಲಾಖೆಗೇ ನಿಗದಿಯಾದ ಅನುದಾನದಲ್ಲಿ ಕೂಡ ಶೇ.40ರಷ್ಟು ಪ್ರಮಾಣವನ್ನು ಶೈಕ್ಷಣಿಕ ವರ್ಷಾಂತ್ಯಕ್ಕೂ ಬಿಡುಗಡೆ ಮಾಡದೇ ಹಿಡಿದಿಟ್ಟುಕೊಂಡಿರುವುದು ಇಲಾಖೆಯ ಅಂಕಿಅಂಶಗಳಿಂದಲೇ ಎದ್ದು ಕಾಣುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಇನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳೆದ ಬಜೆಟ್ನಲ್ಲಿ 35,611 ಕೋಟಿ ರೂ. ಬಜೆಟ್ ಅನುದಾನ ಕೊಡಲಾಗಿತ್ತು. ಅದರಲ್ಲಿ ಈವರೆಗೆ 22,053 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಆ ಇಲಾಖೆಯ ಅನುದಾನದಲ್ಲೂ ಕೂಡ ಬರೋಬ್ಬರಿ 13,558 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

ಆಹಾರ ಇಲಾಖೆಗೆ ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 9,948 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದರು. ಅದರಲ್ಲಿ ಈವರೆಗೆ 4,162 ಕೋಟಿ ರೂ. ಗಳನ್ನು ಬಿಡಗಡೆ ಮಾಡಲಾಗಿದೆ. ಅರ್ಧಕ್ಕಿಂತ ಹೆಚ್ಚು ಅಂದರೆ 5,786 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಅನ್ನಭಾಗ್ಯ ಯೋಜನೆಗೆ ಅನುದಾನದ ಕೊರತೆ ಇರುವುದು ಕಂಡು ಬಂದಿದ್ದು, ಕಳೆದ 5 ತಿಂಗಳುಗಳಿಂದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗಿಲ್ಲ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಕಳೆದ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಅವರು 25,936 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಿದ್ದರು. ಆದರೆ ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದ ಅನುದಾನದ ಪೈಕಿ ಈವರೆಗೆ 10,408 ಕೋಟಿ ರೂ.ಗಳನ್ನು ಮಾತ್ರ ಬಿಡಗಡೆ ಮಾಡಲಾಗಿದೆ. ಉಳಿಸಿಕೊಂಡಿರುವ ಬಾಕಿ 15,228 ರೂ. ಗಳಾಗಿವೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಗೂ ಕೊಟ್ಟಿದ್ದ ಭರವಸೆಯಲ್ಲಿ ಅರ್ಧಕ್ಕಿಂತ ಕಡಿಮೆ ಈಡೇರಿಸಲಾಗಿದೆ.

ಜಲಸಂಪನ್ಮೂಲ ಇಲಾಖೆ

ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸುವ ಜಲಸಂಪನ್ಮೂಲ ಇಲಾಖೆಗೆ ಅನುದಾನ ಬಿಡುಗಡೆಯಲ್ಲಿಯೂ ಸರ್ಕಾರ ಎಡವಿದೆ. ಒಟ್ಟು 17,444 ಕೋಟಿ ರೂ. ಅನುದಾನವನ್ನು ಬಜೆಟ್ನಲ್ಲಿ ಕಾಯ್ದಿರಿಸಲಾಗಿತ್ತು. ಅದರಲ್ಲಿ ಈವರೆಗೆ ಕೇವಲ 9,256 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, 8,188 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಒಟ್ಟಾರೆ ಬಹುತೇಕ ಮಹತ್ವದ ಇಲಾಖೆಗಳಿಗೆ ಅರ್ಧಕ್ಕಿಂತ ಕಡಿಮೆ ಅನುದಾನ ಹಂಚಿಕೆ ಮಾಡಲಾಗಿರುವುದು ಕಂಡುಬಂದಿದೆ. ಶಾಶ್ವತ ಅಭಿವೃದ್ಧಿಯ ಯೋಜನೆಗಳಿಗಿಂತ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿರುವುದರಿಂದ ಹೀಗಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಗ್ಯಾರಂಟಿ ಯೋಜನಗಳಿಗಾಗಿ ಪ್ರತಿ ವರ್ಷ ರಾಜ್ಯ ಸರ್ಕಾರ 56,000 ಕೋಟಿ ರೂಪಾಯಿಗಳನ್ನು ವ್ಯಯಸುತ್ತಿದೆ.

Read More
Next Story