
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ದುರಂತದ ತನಿಖೆ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸದನಕ್ಕೆ ಮಾಹಿತಿ ನೀಡಿದರು.
Bangalore Stampede| ಫೈನಲ್ ಪಂದ್ಯದ ವೇಳೆಯೇ ವಿಜಯೋತ್ಸವದ ಬಗ್ಗೆ ಚರ್ಚೆ, ತನಿಖೆಯಲ್ಲಿ ಬಹಿರಂಗ
ನಾನು ಬೆಂಗಳೂರಿನ ಮಂತ್ರಿಯಾಗಿ, ಕ್ರಿಕೆಟ್ ಅಭಿಮಾನಿಯಾಗಿ ಬಾವುಟ ಹಿಡಿದು ಕಪ್‌ಗೆ ಮುತ್ತು ಕೊಟ್ಟಿದ್ದೇನೆ. ಏನೋ ತಪ್ಪು ಆಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಆರ್‌ಸಿಬಿ ಮತ್ತು ಪಂಜಾಬ್ ನಡುವೆ ಫೈನಲ್ ಪಂದ್ಯ ನಡೆಯುತ್ತಿದ್ದಾಗಲೇ, ಒಂದು ವೇಳೆ ಆರ್‌ಸಿಬಿ ಗೆದ್ದರೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆದಿತ್ತು ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸದನಕ್ಕೆ ಮಾಹಿತಿ ನೀಡಿದರು.
ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪಂದ್ಯದ ನಂತರ, ಆರ್‌ಸಿಬಿ ಆಟಗಾರರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಜತೆ ಚರ್ಚಿಸಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮ್ಯಾಜಿಸ್ಟ್ರಿಯಲ್ ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರಕ್ಕೂ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತಕ್ಕೆ ಕಾರಣವಾದ ಕಾರ್ಯಕ್ರಮವನ್ನು ಸರ್ಕಾರದ ನಿರ್ಧಾರದ ಮೇರೆಗೆ ಆಯೋಜಿಸಿರಲಿಲ್ಲ. ಇದು ಕೆಎಸ್‌ಸಿಎ ಆಯೋಜಿಸಿದ ಕಾರ್ಯಕ್ರಮವಾಗಿದ್ದು, ಸರ್ಕಾರಕ್ಕೂ ಈ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಲ್ತುಳಿತ ಒಂದು ಆಕಸ್ಮಿಕ ದುರಂತ
ಕಾಲ್ತುಳಿತ ಘಟನೆ ಆಕಸ್ಮಿಕವಾಗಿದ್ದು, ಯಾರೂ ಕೂಡ ಅದನ್ನು ಊಹಿಸಿರಲಿಲ್ಲ. ಇಂತಹ ಘಟನೆಗಳು ದೇಶದ ಅನೇಕ ಭಾಗಗಳಲ್ಲಿ ನಡೆದಿವೆ. ವೈದ್ಯನಾಥ ಜ್ಯೋತಿರ್ಲಿಂಗದಲ್ಲಿ 10 ಜನ, ತಿರುವಣ್ಣಾಮಲೈನಲ್ಲಿ 4 ಜನ, ಮಹಾಕುಂಭಮೇಳದಲ್ಲಿ 6 ಜನ, ವೈಷ್ಣೋದೇವಿ ಉತ್ಸವದಲ್ಲಿ 12 ಜನ, ಪುರಿ ಉತ್ಸವದಲ್ಲಿ 9 ಜನ, ಕೇರಳ ಸಂಗೀತೋತ್ಸವದಲ್ಲಿ 4 ಜನ, ಇಂದೋರ್ ರಾಮನವಮಿ ವೇಳೆ 36 ಜನ, ಯುಪಿಯ ಹತ್ರಾಸ್‌ನಲ್ಲಿ 121 ಜನ ಮತ್ತು ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಮಹಾಕುಂಭಮೇಳದಲ್ಲಿ 39 ಜನ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದರು ಎಂದು ಹೇಳಿದರು.
ರಾಜ್ಯದಲ್ಲಿ ನಡೆದ ದುರಂತಗಳು
ರಾಜ್ಯದಲ್ಲಿಯೂ ಇಂತಹ ಆಕಸ್ಮಿಕ ದುರಂತಗಳು ನಡೆದಿವೆ. ವರನಟ ಡಾ. ರಾಜ್‌ಕುಮಾರ್ ಅವರ ನಿಧನದ ವೇಳೆ 7 ಜನ, ಕಾರ್ಲ್‌ಟನ್ ಟವರ್ ಕಟ್ಟಡ ದುರಂತದಲ್ಲಿ 9 ಜನ, ಹಾಗೂ ಗಂಗಾರಾಮ್ ಕಟ್ಟಡ ಕುಸಿತದಲ್ಲಿ 127 ಜನ ಮೃತಪಟ್ಟಿದ್ದರು. ಇವೆಲ್ಲವೂ ಆಕಸ್ಮಿಕವಾಗಿ ನಡೆದ ಘಟನೆಗಳಾಗಿದ್ದು, ಇದೀಗ ನಡೆದಿರುವ ಕಾಲ್ತುಳಿತ ಕೂಡ ಇಂತಹದ್ದೇ ಆಕಸ್ಮಿಕ ಘಟನೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ, ಆದರೆ ಅದನ್ನು ಆಕಸ್ಮಿಕ ದುರಂತವೆಂದು ಹೇಳುವುದಕ್ಕಾಗಿ ಈ ಘಟನೆಗಳನ್ನು ಉಲ್ಲೇಖಿಸಿದ್ದೇನೆ ಎಂದು ತಿಳಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಕಡಿಮೆ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಕ್ರೀಡಾಂಗಣ ಹಾಗೂ ದೇವನಹಳ್ಳಿಯಲ್ಲಿ ಕ್ರೀಡಾ ಕ್ಲಬ್ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ತುಮಕೂರಿನಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣ
ಗುಜರಾತ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದ ಮಾದರಿಯಲ್ಲಿಯೇ ದೊಡ್ಡದಾದ ಮತ್ತು ಉತ್ತಮವಾದ ಕ್ರೀಡಾಂಗಣವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ, ತುಮಕೂರಿನ ಬಳಿ 43 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಅಲ್ಲಿ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಸ್ಥಳಕ್ಕೆ ಭೇಟಿ ನೀಡಿ ಭೂಮಿ ಪೂಜೆ ನೆರವೇರಿಸಿದ್ದಾರೆ ಎಂದರು.
ಕ್ರೀಡಾ ಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪ
ಇದುವರೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ, ಕೆಲವು ಹೊಸ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೋರ್ಟ್ ತೀರ್ಪು ನಂತರ ಕ್ರಮ
ಕಾಲ್ತುಳಿತ ಪ್ರಕರಣವು ನ್ಯಾಯಾಲಯದ ವಿಚಾರಣೆಯ ಹಂತದಲ್ಲಿರುವುದರಿಂದ ಈ ಕುರಿತು ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ. ನ್ಯಾಯಾಲಯ ನೀಡುವ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಅದರ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ. ವಿಶೇಷವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಪ್‌ಗೆ ಮುತ್ತು ಕೊಟ್ಟಿದ್ದೇನೆ; ಏನೋ ತಪ್ಪು ಆಗಿದೆ: ಡಿಕೆಶಿ
ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರು ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಈ ಘಟನೆಯಲ್ಲಿ ಪೊಲೀಸರನ್ನು ದೂಷಿಸುವುದು ಸರಿಯಲ್ಲ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
"ನಾನು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ. ಅಲ್ಲಿರುವವರೆಲ್ಲರೂ ನನ್ನ ಸ್ನೇಹಿತರು. ನಾನು ಬೆಂಗಳೂರಿನ ಮಂತ್ರಿಯಾಗಿ, ಕ್ರಿಕೆಟ್ ಅಭಿಮಾನಿಯಾಗಿ ಬಾವುಟ ಹಿಡಿದು ಕಪ್‌ಗೆ ಮುತ್ತು ಕೊಟ್ಟಿದ್ದೇನೆ. ಏನೋ ತಪ್ಪು ಆಗಿದೆ, ಆದರೆ ಅದಕ್ಕೆ ಪೊಲೀಸರನ್ನು ದೂಷಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಘಟನೆ ನಡೆದ ಕೂಡಲೇ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ನಾವು ನಿರ್ಲಕ್ಷ್ಯ ವಹಿಸಿಲ್ಲ. ಈ ವಿಚಾರ ನ್ಯಾಯಾಲಯದ ವ್ಯಾಪ್ತಿಯಲ್ಲಿ ಇರುವುದರಿಂದ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿಯವರು ಮಾಡಿರುವ ಟ್ವೀಟ್‌ಗಳ ಬಗ್ಗೆ ನಾನು ಹೇಳಲಾ? ಕುಂಭಮೇಳದಲ್ಲಿ ಕಾಲ್ತುಳಿತ ಆಗಿಲ್ಲವಾ?" ಎಂದು ಪ್ರಶ್ನಿಸಿದರು.