BJP Infighting | ಡಿಕೆಶಿ ಡಿನ್ನರ್‌ ಪಾರ್ಟಿಗೆ ಹಾಜರಿ: ಬಿಜೆಪಿ ಶಾಸಕರಿಬ್ಬರ ಅಮಾನತು?
x

BJP Infighting | ಡಿಕೆಶಿ ಡಿನ್ನರ್‌ ಪಾರ್ಟಿಗೆ ಹಾಜರಿ: ಬಿಜೆಪಿ ಶಾಸಕರಿಬ್ಬರ ಅಮಾನತು?

ಬಿಜೆಪಿ ಪಕ್ಷದಲ್ಲಿರುವ ಎಲ್ಲಾ ಗೊಂದಲಕ್ಕೆ ಈ ತಿಂಗಳಾಂತ್ಯಕ್ಕೆ ತೆರೆ ಬೀಳುತ್ತದೆ. ಯತ್ನಾಳ್‌ ಹಾಗೂ ವಿಜಯೇಂದ್ರ ಬಣ ಬಡಿದಾಟವೂ ಅಂತ್ಯವಾಗಲಿದೆ ಎನ್ನಲಾಗಿದೆ.


ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಾದ ಎಸ್‌‍.ಟಿ.ಸೋಮಶೇಖರ್‌ ಮತ್ತು ಶಿವರಾಮ್‌ ಹೆಬ್ಬಾರ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ಉಚ್ಚಾಟನೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಈ ಇಬ್ಬರ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಜರುಗಿಸಬೇಕೆಂದು ರಾಜ್ಯ ಬಿಜೆಪಿ ಘಟಕ ಹೈಕಮಾಂಡ್‌ಗೆ ಶಿಫಾರಸು ಮಾಡಿರುವ ಹಿನ್ನಲೆಯಲ್ಲಿ ಮಾಜಿ ಸಚಿವರಾದ ಸೋಮಶೇಖರ್‌ ಮತ್ತು ಶಿವರಾಮ್‌ ಹೆಬ್ಬಾರ್‌ ಇಷ್ಟರಲ್ಲೇ ಉಚ್ಚಾಟನೆಯಾಗಲಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿ ಚಿಹ್ನೆಯಿಂದ ಯಶವಂತಪುರ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿರುವ ಇಬ್ಬರೂ ಪಕ್ಷದ ನಿಯಮಗಳನ್ನು ಉಲ್ಲಂಘಿಸಿ ತಮದೇ ಹಾದಿಯಲ್ಲಿ ಹೊರಟಿದ್ದಾರೆ. ಅದರಲ್ಲೂ ಕಾಂಗ್ರೆಸ್‌‍ ಜೊತೆ ಗುರುತಿಸಿಕೊಂಡು ಬಿಜೆಪಿಗೆ ಇರಿಸುಮುರಿಸು ಉಂಟು ಮಾಡುತ್ತಿರುವ ಇಬ್ಬರನ್ನು ತಿಂಗಳಾಂತ್ಯಕ್ಕೆ ಪಕ್ಷದಿಂದಲೇ ಉಚ್ಛಾಟನೆ ಮಾಡಲು ಪಕ್ಷದ ವರಿಷ್ಠರು ಸಮತಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್‌ ಅವರು ಎಸ್‌‍.ಟಿ. ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಅವರ ಉಚ್ಚಾಟನೆ ಕುರಿತು ಮಾಹಿತಿ ನೀಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊತ್ತ ಇಬ್ಬರು ಶಾಸಕರನ್ನು ಈ ತಿಂಗಳಾಂತ್ಯಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಶಾಸಕರಾದ ಎಸ್‌‍.ಟಿ.ಸೋಮಶೇಖರ್‌ ಹಾಗೂ ಶಿವರಾಮ ಹೆಬ್ಬಾರ್‌ ನಿರಂತರ ಪಕ್ಷ ದ್ರೋಹ ಮಾಡಿದ್ದಾರೆ. ಕಳೆದ ಲೋಕಸಭಾ ಮತ್ತು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರ ಬಗ್ಗೆ ಈಗಾಗಲೇ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಟೀಲ್‌ ಅವರಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಎಸ್‌‍.ಟಿ. ಸೋಮಶೇಖರ್‌ ಮತ್ತು ಶಿವರಾಮ ಹೆಬ್ಬಾರ್‌ ಕ್ಷೇತ್ರಕ್ಕೆ ತೆರಳಿ ವರದಿ ಸಿದ್ಧಪಡಿಸಿದ್ದೇನೆ. ಪಕ್ಷದ ಕಾರ್ಯಕರ್ತರ ಮತ್ತು ಅಲ್ಲಿನ ಮಂಡಳ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರಿಂದ ವರದಿ ಸಿದ್ದಪಡಿಸಿ ನೀಡಿದ್ದೇನೆ. ಅಲ್ಲದೇ ಇಬ್ಬರು ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ವಿಡಿಯೋ ಮತ್ತು ಮಾಧ್ಯಮ ವರದಿಗಳನ್ನು ಸಲ್ಲಿಸಲಾಗಿದೆ. ಇಲ್ಲಿಯವರೆಗೂ ಎರಡುಮೂರು ಬಾರಿ ಕೇಂದ್ರಕ್ಕೆ ವರದಿ ನೀಡಲಾಗಿದೆ. ಈ ತಿಂಗಳಾಂತ್ಯಕ್ಕೆ ಇಬ್ಬರು ಶಾಸಕರ ಉಚ್ಚಾಟನೆಯಾಗುತ್ತದೆ ಎಂದರು.

ಡಿಕೆಶಿ ಔತಣಕೂಟದಲ್ಲಿ ಹಾಜರಿ

ಇಷ್ಟು ದಿನ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದ ಕಾಂಗ್ರೆಸ್‌‍ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಬಿಜೆಪಿ ವಿರುದ್ಧವೇ ಟೀಕೆಟಿಪ್ಪಣೆ ಮಾಡುತ್ತಿದ್ದಾರೆ. ಸಾಲದಕ್ಕೆ ಮಾರ್ಚ್‌13ರಂದು ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲೂ ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ಭಾಗವಹಿಸಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಈ ತಿಂಗಳ ಅಂತ್ಯಕ್ಕೆ ಇವರಿಬ್ಬರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ದೃಢ ನಿರ್ಧಾರ ಮಾಡಿದೆ.

ಯತ್ನಾಳ್ , ವಿಜಯೇಂದ್ರ ಬಣ ಬಡಿದಾಟಕ್ಕೆ ತೆರೆ

ಇಬ್ಬರು ಶಾಸಕರ ವಿರುದ್ಧ ಶಿಸ್ತುಕ್ರಮ ಆಗುತ್ತದೆ. ಪಕ್ಷ ದ್ರೋಹ ಕೆಲಸ ಮಾಡಿದ ಈ ಇಬ್ಬರು ಶಾಸಕರ ವಿರುದ್ಧ ಈ ತಿಂಗಳಾಂತ್ಯದಲ್ಲಿ ಶಿಸ್ತುಕ್ರಮ ಆಗುತ್ತದೆ. ಅಲ್ಲದೇ ಪಕ್ಷದಲ್ಲಿರುವ ಎಲ್ಲಾ ಗೊಂದಲಕ್ಕೆ ಈ ತಿಂಗಳಾಂತ್ಯಕ್ಕೆ ತೆರೆ ಬೀಳುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಈ ಮೂಲಕ ರೆಬೆಲ್‌ ಶಾಸಕರು ಹಾಗೂ ಯತ್ನಾಳ್‌ ಹಾಗೂ ವಿಜಯೇಂದ್ರ ಬಣ ಬಡಿದಾಟಕ್ಕೆ ಅಂತ್ಯವಾಡುವ ಸುಳಿವು ನೀಡಿದ್ದಾರೆ.

ವಿಧಾನಸಭೆ ಚುನಾವಣೆ ನಂತರ ಶಾಸಕರಾದ ಎಸ್‌‍.ಟಿ.ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ನಿರಂತರವಾಗಿ ಪಕ್ಷ ದ್ರೋಹ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್‌‍ನ ಡಿನ್ನರ್‌ ಪಾರ್ಟಿಗೆ ಹೋಗಿರುವ ವಿಚಾರ ದೊಡ್ಡದಲ್ಲ. ಅದಕ್ಕಿಂತ ಹೆಚ್ಚಿನ ಪಕ್ಷ ವಿರೋಧಿ ಚಟುವಟಿಕೆ ಅವರಿಬ್ಬರೂ ಮಾಡಿದ್ದಾರೆ. ಎಸ್‌‍.ಟಿ.ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಕ್ಷೇತ್ರಕ್ಕೆ ತೆರಳಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಮಂಡಳ ಅಧ್ಯಕ್ಷರು, ಜಿಲ್ಲಾಧ್ಯಕ್ಷರಿಂದ ವರದಿ ಸಿದ್ಧಪಡಿಸಿ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷರಿಗೆ ವರದಿ ನೀಡಿದ್ದೇನೆ ಎಂದು ಹೇಳಿದ್ದರು.

ಲಿಂಗರಾಜ್‌ ಪಾಟೀಲ್‌ ಹೇಳಿರುವಂತೆ ಈ ತಿಂಗಳ ಅಂತ್ಯಕ್ಕೆ ರಾಜ್ಯ ಬಿಜೆಪಿಯಲ್ಲಿನ ಗೊಂದಲ ನಿವಾರಣೆಯಾಗಲಿದೆ. ಹಾಗಾದರೆ ಯತ್ನಾಳ್‌ ಹಾಗೂ ವಿಜಯೇಂದ್ರ ಬಣ ರಾಜಕೀಯಕ್ಕೆ ಬ್ರೇಕ್‌ ಬೀಳಲದೆಯೇ ಎಂಬುದನ್ನು ಕಾದುನೋಡಬೇಕಿದೆ.

ಒಂದು ವೇಳೆ ಎಲ್ಲವೂ ಸರಿಯಾದರೆ ಯಾವ ಬಣ ಮೇಲುಗೈ ಸಾಧಿಸಲಿದೆ ಎನ್ನುವುದು ಸಹ ಕುತೂಹಲಕ್ಕೆ ಕಾರಣವಾಗಿದ್ದರೆ, ಇನ್ನು ಬಿಜೆಪಿ ಚಿಹ್ನೆಯಿಂದಲೇ ಗೆದ್ದು ಪಕ್ಷದ ಕಾರ್ಯಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ವಿರುದ್ಧ ಶಿಸ್ತು ಸಮಿತಿ ಯಾವ ಕ್ರಮಕೈಗೊಳ್ಳುತ್ತೆ ಎನ್ನುವುದು ಕುತೂಹಲ ಮೂಡಿಸಿದೆ

Read More
Next Story