SSLC ಟಾಪರ್‌ ಅಂಕಿತಾ ಕೊನ್ನೂರ್‌ಗೆ ಸಿಎಂ, ಡಿಸಿಎಂ ಸನ್ಮಾನ, ಬಹುಮಾನ
x

SSLC ಟಾಪರ್‌ ಅಂಕಿತಾ ಕೊನ್ನೂರ್‌ಗೆ ಸಿಎಂ, ಡಿಸಿಎಂ ಸನ್ಮಾನ, ಬಹುಮಾನ


ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ‌ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತಾ ಕೊನ್ನೂರ್ ಹಾಗೂ ತೃತೀಯ ಸ್ಥಾನ ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಸನ್ಮಾನಿಸಿ, ಈ ಇಬ್ಬರು ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಅಮೋಘ ಸಾಧನೆ ಮಾಡಿದ ಈ ವಿದ್ಯಾರ್ಥಿಗಳ ಮುಂದಿನ‌ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್ ಗೆ 3 ಲಕ್ಷ ರೂ.ಗಳ ನೆರವನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಗ್ರಾಮೀಣ ಮಕ್ಕಳು ಇನ್ನಷ್ಟು ಶೈಕ್ಷಣಿಕ ಸಾಧನೆಗಳನ್ನು ಮಾಡುವಂತಾಗಲಿ, ಈ ಮಕ್ಕಳು ಓದಿದ ಶಾಲೆ ಮತ್ತಷ್ಟು ಸರ್ಕಾರಿ ಶಾಲೆಗಳಿಗೆ ಸ್ಪೂರ್ತಿಯಾಗಲಿ ಎಂದು ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳ ಅನುದಾನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ರಿಂದ ಸನ್ಮಾನ

ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಅಂಕಿತಾ ಬಸಪ್ಪ ಕೊಣ್ಣೂರು ಮತ್ತು ಮೂರನೇ ರ‍್ಯಾಂಕ್ ಪಡೆದ ಮಂಡ್ಯದ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಸರ್ಕಾರದ ಪರವಾಗಿ ಸನ್ಮಾನಿಸಿದರಲ್ಲದೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ವೈಯಕ್ತಿಕವಾಗಿ ಕ್ರಮವಾಗಿ ರೂ. 5 ಲಕ್ಷ ಮತ್ತು ರೂ. 2 ಲಕ್ಷ ನೀಡಿ ಪ್ರೋತ್ಸಾಹಿದರು. ‌


ಶಿವಕುಮಾರ್ ಅವರು ಅಂಕಿತಾಳ ಪೋಷಕರನ್ನೂ ಸನ್ಮಾನಿಸಿದರು. ʻʻಅಂಕಿತಾ ತನ್ನ ವಿದ್ಯೆ ಹೇಳಿಕೊಟ್ಟ ಗುರುಗಳ ಬಗ್ಗೆ ಅದೆಷ್ಟು ಗೌರವ ಇಟ್ಟುಕೊಂಡಿದ್ದಾಳೆ ಅನ್ನೋದು ಆಕೆಯ ಜೆಸ್ಚರ್ ನಿಂದ ಗೊತ್ತಾಗುತ್ತದೆʼʼ ಎಂದರು. ಶಿವಕುಮಾರ್ ಆಕೆಯ ಪೋಷಕರನ್ನು ಸನ್ಮಾನಿಸುವಾಗ ಅಂಕಿತಾ ನನ್ನ ಪ್ರಿನ್ಸಿಪಾಲ್ ಸಹ ಬಂದಿದ್ದಾರೆ ಎಂದು ಹೇಳಿದಳು. ಆಕೆಯಲ್ಲಿದ್ದ ಭಾವನೆಯನ್ನು ಅರ್ಥಮಾಡಿಕೊಂಡ ಶಿವಕುಮಾರ್ ಪ್ರಿನ್ಸಿಪಾಲರನ್ನು ಕರೆದು ಅವರಿಗೂ ಶಾಲು ಹೊದಿಸಿ ಹೂ ಹಾರ ಹಾಕಿ ಬೆನ್ನು ತಟ್ಟಿ ಅಭಿನಂದಿಸಿದರು.

Read More
Next Story