Ramulu vs Reddy | ಅಧಿಕಾರದ ಬಾಗಿಲು ತೆರೆದ ʼರಾಮ-ಲಕ್ಷ್ಮಣʼರೇ ಈಗ ಬಿಜೆಪಿಗೆ ಕಗ್ಗಂಟು
x

Ramulu vs Reddy | ಅಧಿಕಾರದ ಬಾಗಿಲು ತೆರೆದ ʼರಾಮ-ಲಕ್ಷ್ಮಣʼರೇ ಈಗ ಬಿಜೆಪಿಗೆ ಕಗ್ಗಂಟು

ರಾಜ್ಯಾಧ್ಯಕ್ಷರು ಮತ್ತು ಅವರ ವಿರೋಧಿ ಬಣದ ನಡುವಿನ ನಿರಂತರ ಸಂಘರ್ಷದಿಂದ ಕಾರ್ಯಕರ್ತರ ಮಟ್ಟದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುವ ರಾಜ್ಯ ಬಿಜೆಪಿಯ ಬಿಕ್ಕಟ್ಟಿಗೆ ಇದೀಗ ಮತ್ತೊಂದು ಆಯಾಮ ಸೇರಿದ್ದು, ಪಕ್ಷದ ಒಂದು ಕಾಲದ ʼರಾಮ-ಲಕ್ಷ್ಮಣʼರ ನಡುವಿನ ತೆರೆಮರೆಯ ಸಂಘರ್ಷ ಬಹಿರಂಗವಾಗೇ ಸ್ಫೋಟಗೊಂಡಿದೆ.


ರಾಜ್ಯಾಧ್ಯಕ್ಷರು ಮತ್ತು ಅವರ ವಿರೋಧಿ ಬಣದ ನಡುವಿನ ನಿರಂತರ ಸಂಘರ್ಷದಿಂದ ಕಾರ್ಯಕರ್ತರ ಮಟ್ಟದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುವ ರಾಜ್ಯ ಬಿಜೆಪಿಯ ಬಿಕ್ಕಟ್ಟಿಗೆ ಇದೀಗ ಮತ್ತೊಂದು ಆಯಾಮ ಸೇರಿದ್ದು, ಪಕ್ಷದ ಒಂದು ಕಾಲದ ʼರಾಮ-ಲಕ್ಷ್ಮಣʼರ ನಡುವಿನ ತೆರೆಮರೆಯ ಸಂಘರ್ಷ ಬಹಿರಂಗವಾಗೇ ಸ್ಫೋಟಗೊಂಡಿದೆ.

ಬಳ್ಳಾರಿ ರಿಪಬ್ಲಿಕ್ ಇಡೀ ರಾಜ್ಯದ ರಾಜಕಾರಣವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಕಾಲದಲ್ಲಿ ಬಿಜೆಪಿಯ ರಾಮ-ಲಕ್ಷ್ಮಣರು ಎಂದೇ ಜನಪ್ರಿಯರಾಗಿದ್ದವರು ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ ಶ್ರೀರಾಮುಲು. 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಅಂದಿನ ಜನಪ್ರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕಣಕ್ಕಿಳಿದಿದ್ದರು. ಆ ವೇಳೆ ಸುಷ್ಮಾ ಸ್ವರಾಜ್ ಅವರೊಂದಿಗೆ ಸದಾ ರಾಮ- ಲಕ್ಷ್ಮಣರಂತೆ ಜೊತೆಯಾಗಿ ಹೆಗಲಿಗೆ ಹೆಗಲು ಕೊಟ್ಟು ಚುನಾವಣಾ ಸಮರ ನಡೆಸಿದವರು ಇದೇ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜೋಡಿ. ಬಳ್ಳಾರಿಯ ಮಟ್ಟಿಗಷ್ಟೇ ಅಲ್ಲದೆ, ಇಡೀ ರಾಜ್ಯಾದ್ಯಂತ ಈ ಜೋಡಿಯ ಸ್ನೇಹ ಮತ್ತು ಜಂಟಿಯಾಗಿ ರಾಜಕೀಯ ಮತ್ತು ಉದ್ಯಮದಲ್ಲಿ ಮೇಲೇರಿದ ಕುರಿತ ದಂತಕಥೆಗಳು ಪ್ರಚಲಿತದಲ್ಲಿವೆ.

ಬಿಜೆಪಿಯನ್ನು ಅಧಿಕಾರಕ್ಕೆ ತಂದ ಜೋಡಿ

2007ರಲ್ಲಿ ಜೆಡಿಎಸ್-ಬಿಜೆಪಿಯ 20-20 ಮೈತ್ರಿ ಸರ್ಕಾರದ ಅಧಿಕಾರದ ಸಂಘರ್ಷಕ್ಕೆ ಬಲಿಯಾದ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಸಮೀಪ ಬಂದು ನಿಂತಾಗ, ಕೊರತೆ ಬಿದ್ದ ಸ್ಥಾನಗಳನ್ನು ತುಂಬಿ ಇಡೀ ದಕ್ಷಿಣ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರದ ಹೆಬ್ಬಾಗಿಲು ತೆರೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಇದೇ ರಾಮ-ಲಕ್ಷ್ಮಣರ ಜೋಡಿ ಎಂಬುದು ಕೂಡ ಗುಟ್ಟೇನಲ್ಲ.



ಚುನಾವಣೆಯಲ್ಲಿ 110 ಶಾಸಕರನ್ನು ಗೆಲ್ಲಿಸಿಕೊಂಡಿದ್ದ ಬಿಜೆಪಿಗೆ ಬಹುಮತಕ್ಕೆ ಕೇವಲ ಮೂರು ಸ್ಥಾನ ಕೊರತೆಯಿದ್ದರೂ, ಆರು ಮಂದಿ ಪಕ್ಷೇತರರ ಬೆಂಬಲವಿತ್ತು. ಆದರೆ, ಪಕ್ಷೇತರರ ಬೇಡಿಕೆಗಳ ಹಿನ್ನೆಲೆಯಲ್ಲಿ ಅವರನ್ನು ನೆಚ್ಚಿಕೊಂಡು ಬಹಳ ದಿನ ಸರ್ಕಾರ ನಡೆಸಲಾಗದು ಎಂಬ ಚಿಂತೆ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಕಾಡುತ್ತಿತ್ತು. ಆಗ ಅವರ ನೆರವಿಗೆ ಬಂದವರೇ ಈ ರಾಮ- ಲಕ್ಷ್ಮಣರು. ಕಾಂಗ್ರೆಸ್ ಮತ್ತು ಜೆಡಿಎಸ್ನ ಏಳು ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ, ಉಪ ಚುನಾವಣೆ ಎದುರಿಸಿದ್ದರು. ಶಾಸಕರ ಅಂತಹ ನಿರ್ಧಾರದ ಹಿಂದೆ ಕೆಲಸ ಮಾಡಿದ್ದು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ತಂತ್ರಗಾರಿಕೆ ಮತ್ತು ಗಣಿ ಹಣಬಲ ಎಂಬುದು ಕೂಡ ರಾಜ್ಯದ ರಾಜಕೀಯ ಚರಿತ್ರೆಯಲ್ಲಿ ದಾಖಲಾಗಿರುವ ಸಂಗತಿ.

ಅಧಿಕಾರಕ್ಕೆ ತಂದ ಗಣಿಯೇ, ಮುಳುಗಿಸಿತು!

ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಯ ಪಾಲಿಗೆ ಈ ಇಬ್ಬರು ಸ್ನೇಹಿತರು ಆಗ ರಾಜಕೀಯ ಧ್ರುವನಕ್ಷತ್ರಗಳಂತೆಯೇ ಕಂಡಿದ್ದರು. ವಿಪರ್ಯಾಸವೆಂದರೆ, ಈ ಗೆಳೆಯರ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ದ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿಯಾಗಿ ಕೇವಲ ಮೂರೇ ವರ್ಷದಲ್ಲಿ ಗಣಿ ಅಕ್ರಮ ಹಗರಣದಲ್ಲಿ ಸಿಲುಕಿ ಜೈಲು ಪಾಲಾಗಲು ಕೂಡ ಬಳ್ಳಾರಿಯ ಅದೇ ಗಣಿ ಉದ್ಯಮವೇ ಕಾರಣವಾಯಿತು. ಬಳಿಕ ಸದಾನಂದ ಗೌಡರು ಮತ್ತು ಆ ಬಳಿಕ ಜಗದೀಶ್ ಶೆಟ್ಟರ್ ಬಿಜೆಪಿಯ ಮುಖ್ಯಮಂತ್ರಿಗಳಾಗಿ ಅಧಿಕಾರಕ್ಕೇರುವಲ್ಲಿಯೂ ಈ ಗೆಳೆಯರ ʼಮಿತ್ರವೃಂದʼದ ಕೊಡುಗೆ ಇತ್ತು.

2011ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸಿಬಿಐ ಬಂಧನಕ್ಕೆ ಒಳಗಾಗುವವರೆಗೆ ಬಳ್ಳಾರಿ ಗಣಿ ಧಣಿ ಎಂದೇ ಹೆಸರಾಗಿದ್ದು ಅವರು ಕರ್ನಾಟಕ ರಾಜಕಾರಣದ ಪ್ರತ್ಯಕ್ಷ ಮತ್ತು ಪರೋಕ್ಷ ರಿಮೋಟ್ನಂತೆಯೇ ಇದ್ದರು. ಗಣಿಗಾರಿಕೆ ಹಗರಣದಲ್ಲಿ ರೆಡ್ಡಿ ಬಂಧನವಾದ ಬಳಿಕ, ಅವರೊಂದಿಗೆ ದಶಕಗಳ ಕಾಲ ಜೊತೆಗಿದ್ದ ಶ್ರೀರಾಮುಲು ರಾಜಕೀಯ ಹಾದಿ ಬೇರೆಯಾಯಿತು. ರಾಜಕೀಯ ಆಯ್ಕೆಯ ಜೊತೆಗೆ ಅವರ ದಶಕಗಳ ಅವಧಿಯ ವ್ಯವಹಾರ, ಸ್ನೇಹ ಕೂಡ ಕವಲಾಯಿತು.


ಬಿಜೆಪಿಗೆ ಗುಡ್‌ಬೈ ಹೇಳಿದ ಕಟ್ಟಾಳು

ಆವರೆಗೆ ಗಣಿ ಧಣಿ ಜನಾರ್ದನ ರೆಡ್ಡಿ ಅವರ ನೆರಳಂತೆ ಇದ್ದ ಶ್ರೀರಾಮುಲು, ಆ ಬಳಿಕ ಬಳ್ಳಾರಿ ಸೇರಿದಂತೆ ಆ ಭಾಗದ ಪ್ರಭಾವಿ ನಾಯಕರಾಗಿ ತಮ್ಮ ವರ್ಚಸ್ಸು ಬೆಳೆಸಿಕೊಂಡರು. 2013ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ರಾಜೀನಾಮೆ ನೀಡಿ ಹೊರಹೋದ ಅವರು, ತಮ್ಮದೇ ಬಿಎಸ್ಆರ್ ಕಾಂಗ್ರೆಸ್(ಬಡವರು, ಶ್ರಮಿಕರು ಮತ್ತು ರೈತರ ಕಾಂಗ್ರೆಸ್) ಪಕ್ಷ ಕಟ್ಟಿ ರಾಜ್ಯದ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆ ಪೈಕಿ ನಾಲ್ಕು ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಬಿಜೆಪಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೆಟ್ಟು ಕೊಡುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಮಾಡುವಿಲ್ಲ ಶ್ರೀರಾಮುಲು ಯಶಸ್ವಿಯಾಗಿದ್ದರು. ಆದರೆ,

ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಯಾದಗಿರಿ ಸೇರಿದಂತೆ ಪ್ರಾದೇಶಿಕವಾಗಿ ಜನಪ್ರಿಯರಾಗಿರುವ ಶ್ರೀರಾಮುಲು, ತಮ್ಮದೇ ವಾಲ್ಮೀಕಿ ಸಮುದಾಯದಲ್ಲಿ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿ ಆ ಅವಧಿಯಲ್ಲಿ ಹೊರಹೊಮ್ಮಿದರು.

ಈ ನಡುವೆ, 2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ಶ್ರೀರಾಮುಲು ತಮ್ಮ ಹೊಸ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿ, ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದರು.

ಸಿಗಲಿಲ್ಲ ಬಯಸಿದ ಸ್ಥಾನಮಾನ; ಅಸಮಾಧಾನ

ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಗೆಲುವು ಪಡೆದು ಮತ್ತೆ ವಿಧಾನಸಭೆ ಪ್ರವೇಶಿಸಿದ ಶ್ರೀರಾಮುಲು 2019ರ ಬಿ ಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವರಾಗಿ ತಮ್ಮ ಪ್ರಭಾವವನ್ನು ಇನ್ನಷ್ಟು ವೃದ್ಧಿಸಿಕೊಂಡರು. ಬಳಿಕ ಉಪಮುಖ್ಯಮಂತ್ರಿ ಹುದ್ದೆಗಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಅವರ ನಿರೀಕ್ಷೆಯ ಹುದ್ದೆ ಸಿಕ್ಕಿರಲಿಲ್ಲ, ಜೊತೆಗೆ ನಿರೀಕ್ಷಿತ ಖಾತೆ ಕೂಡ ಸಿಕ್ಕಿಲ್ಲ ಎಂಬ ಅಸಮಾಧಾನ ಕೂಡ ಅವರಿಗಿತ್ತು. ಬಿಎಸ್ವೈ ಅವರ ಎರಡು ವರ್ಷದ ಅವಧಿಯಲ್ಲಿ ಶ್ರೀರಾಮುಲು ಮೂರು ಖಾತೆಗಳ ಬದಲಾವಣೆ ಕಂಡರು. ಅದೇ ರೀತಿ ನಂತರದ ಬೊಮ್ಮಾಯಿ ಸರ್ಕಾರದಲ್ಲಿ ಕೂಡ ಎರಡು ಬಾರಿ ಖಾತೆ ಬದಲಾವಣೆ ಮಾಡಲಾಯಿತು. ಈ ಬದಲಾವಣೆಗಳು ಮತ್ತು ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಇತ್ತು. ಬಳಿಕ 2023ರ ವಿಧಾನಸಭಾ ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಸತತ ಎರಡು ಸೋಲುಗಳ ಹಿನ್ನೆಲೆಯಲ್ಲಿ ಅವರು ಇತ್ತೀಚೆಗೆ ತೆರೆಮರೆಗೆ ಸರಿದಿದ್ದರು.

ಆದರೆ, ಸಮುದಾಯದ ನಾಯಕರಾಗಿ ಶ್ರೀರಾಮುಲು ತಮ್ಮ ಪ್ರಭಾವನ್ನು ಕಳೆದುಕೊಂಡಿಲ್ಲ. 2011ರಿಂದ 2024ರವರೆಗೆ ಜನಾರ್ದನ ರೆಡ್ಡಿ ಬಳ್ಳಾರಿಯ ತಮ್ಮ ʼರಿಪಬ್ಲಿಕ್ʼನಿಂದ ದೂರ ಇರುವ ಹೊತ್ತಿಗೆ, ಗಣಿ ಉದ್ಯಮದ ಖ್ಯಾತಿ ಮತ್ತು ಕುಖ್ಯಾತಿಗಳ ಧೂಳು ಕೊಡವಿಕೊಂಡ ಶ್ರೀರಾಮುಲು ಸಮುದಾಯ ಮತ್ತು ಪ್ರಾದೇಶಿಕವಾಗಿ ತಮ್ಮ ವರ್ಚಸ್ಸು ವೃದ್ಧಿಸಿಕೊಂಡು ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದರು. ಆ ವರ್ಚಸ್ಸು ಈಗಲೂ ಸಮುದಾಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಉಳಿದುಕೊಂಡಿದೆ ಎಂಬ ಮಾತುಗಳು ಅವರ ಆಪ್ತ ವಲಯದಲ್ಲಿವೆ.


ರಾಮ- ಲಕ್ಷ್ಮಣರ ನಡುವೆ ಹಿಗ್ಗಿದ ಕಂದಕ

ಈ ನಡುವೆ, ಗಣಿ ಹಗರಣದ ಕೇಸು, ಜೈಲು, ಸುದೀರ್ಘ ತನಿಖೆಯ ಜಾಲದಲ್ಲಿ ತಾವು ಸಿಲುಕಿರುವಾಗ ತಮ್ಮ ಜೀವದ ಗೆಳೆಯ ಶ್ರೀರಾಮುಲು ತಮ್ಮಿಂದ ಅಂತರ ಕಾಯ್ದುಕೊಂಡರು. ತಮ್ಮ ಪರ ನಿಲ್ಲಲಿಲ್ಲ ಎಂಬ ಅಸಮಾಧಾನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು. ಜೊತೆಗೆ ಇಬ್ಬರ ಸುದೀರ್ಘ ಕಾಲದ ವ್ಯವಹಾರಿಕ ಸಹಭಾಗಿತ್ವದಲ್ಲಿ ಒಡಕು ಮೂಡಿತ್ತು. ತನಿಖೆಯ ಭಯದಿಂದ ಶ್ರೀರಾಮುಲು ಸಂಪೂರ್ಣ ಸಂಪರ್ಕ ಕಡಿತುಕೊಂಡರು. ಜೊತೆಗೆ ಅವರು ಜೈಲಿನಿಂದ ಹೊರಬಂದ ಬಳಿಕ ಬಿಜೆಪಿಗೆ ಸೇರಿಸಿಕೊಳ್ಳುವ ವಿಷಯದಲ್ಲಿ ತಮ್ಮದೇ ಕಾರಣಗಳಿಗಾಗಿ ಅವರು ಅದನ್ನು ಬೆಂಬಲಿಸಲಿಲ್ಲ. ರೆಡ್ಡಿ ಪರ ವಕಾಲತು ವಹಿಸಲಿಲ್ಲ ಎಂಬ ಅಸಮಾಧಾನ ಕೂಡ ರೆಡ್ಡಿಗೆ ಇತ್ತು ಎನ್ನಲಾಗಿದೆ. ಹೀಗೆ ಹಲವು ಹತ್ತು ಕಾರಣಗಳಿಂದಾಗಿ ಬಿಜೆಪಿಯ ಈ ರಾಮ-ಲಕ್ಷ್ಮಣರ ನಡುವೆ ಕಂದಕ ಹಿಗ್ಗುತ್ತಲೇ ಹೋಯಿತು.

ಈ ನಡುವೆ, ಸಂಡೂರು ಉಪ ಚುನಾವಣೆಯ ಹಿನ್ನೆಲೆಯಲ್ಲಿ ಶ್ರೀರಾಮುಲು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದರು. ಅದರಲ್ಲೂ ಅವರ ಒಂದು ಕಾಲದ ಆಪ್ತಮಿತ್ರ ಜನಾರ್ದನ ರೆಡ್ಡಿ ಅವರಿಗೆ ಚುನಾವಣೆಯ ಉಸ್ತುವಾರಿ ಕೊಟ್ಟು ಬಿಜೆಪಿ, ಚುನಾವಣಾ ಕಾರ್ಯತಂತ್ರದ ಹೊಣೆಗಾರಿಕೆ ಕೊಟ್ಟ ಹಿನ್ನೆಲೆಯಲ್ಲಿ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಚುನಾವಣಾ ಫಲಿತಾಂಶ ಬಿಜೆಪಿಗೆ ವ್ಯತಿರಿಕ್ತವಾಗಿ ಹೊರಬಿದ್ದ ಬಳಿಕ ಶ್ರೀರಾಮುಲು ಮತ್ತು ರೆಡ್ಡಿ ನಡುವಿನ ಮುಸುಕಿನ ಗುದ್ದಾಟ ಇನ್ನಷ್ಟು ತೀವ್ರವಾಗಿತ್ತು.

ಇದೀಗ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಚ್ಚಿಟ್ಟಿದ್ದ ಆಕ್ರೋಶ ಭುಗಿಲೆದ್ದಿದೆ. ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ವಿರುದ್ಧವೇ ಬಹಿರಂಗ ಸಭೆಯಲ್ಲೇ ಕಿಡಿಕಾರಿರುವ ಶ್ರೀರಾಮುಲು, ಪಕ್ಷ ತೊರೆಯುವ ಮಾತನಾಡಿದ್ದಾರೆ. ಜೊತೆಗೆ ಬಿಜೆಪಿಯ ರಾಮ- ಲಕ್ಷ್ಮಣರ ಈ ಸಂಘರ್ಷಕ್ಕೆ ಕರ್ನಾಟಕ ಬಿಜೆಪಿ ಭಾರೀ ಬೆಲೆ ತೆರಲಿದೆಯೇ? ಎಂಬ ಚರ್ಚೆಗೂ ಕಾರಣವಾಗಿದೆ. ʼಬಳ್ಳಾರಿ ರಿಪಬ್ಲಿಕ್‌ʼನ ಆಧಾರಸ್ತಂಭವಾಗಿದ್ದ ಈ ಜೋಡಿಯ ಮೂರು ದಶಕದ ದೋಸ್ತಿ ಮತ್ತು ದೋಖಾದ ಚರಿತ್ರೆ ಕೂಡ ಇಬ್ಬರೂ ನಾಯಕರ ಆರೋಪ- ಪ್ರತ್ಯಾರೋಪಗಳ ಮೂಲಕ ರಾಜಕೀಯ ಮೊಗಸಾಲೆಯ ರಸಗವಳವಾಗಿದೆ.

Read More
Next Story