
ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ವಿಧಿವಶ
ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ವಿಧಿವಶ
ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಗ್ರಾಮದವರು. ಮಹದೇವಯ್ಯ ಮತ್ತು ಜಯಮ್ಮ ದಂಪತಿಯ ಪುತ್ರರಾದ ಇವರ ಪೂರ್ವಾಶ್ರಮದ ಹೆಸರು ಮೋಹನ್ ಪ್ರದಾನ
ರಾಯಚೂರಿನ ತಿಂಥಣಿ ಬ್ರಿಡ್ಜ್ ಸಮೀಪದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಮನಂದ ಸ್ವಾಮೀಜಿ (49ವ) ಅವರು ಗುರುವಾರ ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ ಗುರುವಾರ ಮುಂಜಾನೆ ಸುಮಾರು 3.40ರ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ಕೂಡಲೇ ಲಿಂಗಸೂಗೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಸಿದ್ದರಾಮಾನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯವರು. ಮಹದೇವಯ್ಯ ಮತ್ತು ಜಯಮ್ಮ ದಂಪತಿಯ 2ನೇ ಪುತ್ರನಾಗಿ ಜನಿಸಿದ್ದ ಇವರ ಮೂಲ ಹೆಸರು ಮೋಹನ್ ಪ್ರದಾನ ಆಗಿತ್ತು. 18ನೇ ವಯಸ್ಸಿಗೆ ಮನೆ ತೊರೆದಿದ್ದ ಇವರು ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೆ ಒಳಗಾಗಿದ್ದರು.
ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ವ್ಯಾಪ್ತಿಯಲ್ಲಿರುವ ಈ ಪೀಠದ ಮೂಲಕ ಸ್ವಾಮೀಜಿಯವರು ಹತ್ತಾರು ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಿಧನರಾಗುವ ಕೆಲವೇ ದಿನಗಳ ಮೊದಲು ಅಂದರೆ ಜನವರಿ 12ರಿಂದ 14ರವರೆಗೆ ನಡೆದ ‘ಹಾಲುಮತ ಉತ್ಸವ’ದ ನೇತೃತ್ವವನ್ನು ಅವರೇ ವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಠದ ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದರು. ಅಲ್ಲದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿ.ವೈ. ವಿಜಯೇಂದ್ರ ಹಾಗೂ ಕೆ.ಎಸ್. ಈಶ್ವರಪ್ಪ ಸೇರಿದಂತೆ ನಾಡಿನ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರೊಂದಿಗೆ ಅವರು ಆಪ್ತ ಸಂಬಂಧ ಹೊಂದಿದ್ದರು. ಸಿದ್ದರಾಮನಂದ ಸ್ವಾಮೀಜಿಯವರ ಈ ಅಕಾಲಿಕ ನಿಧನವು ಅವರ ಭಕ್ತ ಸಮೂಹಕ್ಕೆ ಭರಿಸಲಾಗದ ನಷ್ಟವನ್ನುಂಟು ಮಾಡಿದ್ದು, ರಾಜ್ಯಾದ್ಯಂತ ಶೋಕದ ಛಾಯೆ ಆವರಿಸಿದೆ.

