Moral Policing | ಮಂಗಳೂರು ಮಸಾಜ್ ಪಾರ್ಲರ್ ಮೇಲೆ ರಾಮಸೇನೆ ದಾಳಿ
Moral Policing: ಬಿಜೈ ಕೆಎಸ್ಆರ್ ಟಿಸಿ ಬಳಿ ಕಲರ್ಸ್ ಹೆಸರಿನ ಮಸಾಜ್ ಸೆಂಟರ್‌ಗೆ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ದಾಳಿ ನಡೆಸಿ ಪೀಠೋಪಕರಣ ಧ್ವಂಸ ಮಾಡಲಾಗಿದೆ
ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಮಸಾಜ್ ಸೆಂಟರ್ ಮೇಲೆ ರಾಮಸೇನೆ ಸಂಘಟನೆಯಿಂದ ದಾಳಿ ಮಾಡಿರುವ ಘಟನೆ ಮಂಗಳೂರಿನ ಬಿಜೈ ಕೆಎಸ್ಆರ್ ಟಿಸಿ ಬಳಿ ನಡೆದಿದೆ.
ಬಿಜೈ ಕೆಎಸ್ಆರ್ ಟಿಸಿ ಬಳಿ ಕಲರ್ಸ್ ಹೆಸರಿನ ಮಸಾಜ್ ಸೆಂಟರ್‌ಗೆ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ದಾಳಿ ನಡೆಸಿ ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಮಸಾಜ್ ಸೆಂಟರ್ನ ಗಾಜುಗಳನ್ನು ಪುಡಿಗೈದು ರಾಮ ಸೇನೆ ಸಂಘಟೆನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್ಗಳನ್ನು ಮುಚ್ಚುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
‘ಮಸಾಜ್ ಸೆಂಟರ್ನಲ್ಲಿ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. 16, 17 ವರ್ಷದ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಮ್ಮ ಕಾರ್ಯಕರ್ತನ ಸಂಬಂಧಿ ಯುವತಿ ಇದರಲ್ಲಿ ಸಿಲುಕಿದ್ದಾಳೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆʼ ಎಂದು ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಶ್ರೀರಾಮನಿಗೆ ಕಳಂಕ ತರುವ ಕೆಲಸ ಮಾಡಬೇಡಿ: ದಿನೇಶ್ ಗುಂಡೂರಾವ್
ಈ ದಾಳಿಗೆ ಸಂಬಂಧಸಿದಂತೆ ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಸಚಿವ ದಿನೇಶ್ ಗುಂಡೂರಾವ್, ಶ್ರೀರಾಮ ಸೇನೆ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಕೆಲಸ ಆಗುತ್ತಿದೆ. ದೇವರ ಹೆಸರು ಹೇಳಿಕೊಂಡು ಶ್ರೀರಾಮನಿಗೆ ಕಳಂಕ ತರುವ ಕೆಲಸ ಮಾಡಬೇಡಿ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ಶ್ರೀರಾಮ ಸೇನೆ ಹೆಸರಲ್ಲಿ ಇಂತಹ ದಾಂಧಲೆ ಮಾಡುವುದು ಸರಿಯಲ್ಲ. ಏನಾದರೂ ಅಕ್ರಮ ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತಂದು ದೂರು ನೀಡಬೇಕು. ಇವರೇ ನುಗ್ಗಿ ದಾಂಧಲೆ ಮಾಡಿ ಗೂಂಡಾಗಿರಿ ಮಾಡುವುದಲ್ಲ. ಕಾನೂನು ಸುವ್ಯವಸ್ಥೆಯನ್ನು ಎಲ್ಲರು ಪಾಲಿಸಬೇಕು ಎಂದು ಹೇಳಿದ್ದಾರೆ.
ಇಂತವರ ಮೇಲೆ ಕಟ್ಟುನಿಟ್ಟಾದ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ದೇವರ ಹೆಸರು ಇಟ್ಟುಕೊಂಡು ಇಂತಹ ಕೃತ್ಯ ಮಾಡುವುದು ರಾಮನಿಗೆ ಅಗೌರವ. ಹಿಂದೂ ಸಂಘಟನೆಗಳು ಕೂಡಾ ಇದನ್ನು ಖಂಡಿಸಬೇಕು. ನೈತಿಕ ಪೊಲೀಸ್ ಗಿರಿ ಮಾಡಿ ಕಾನೂನು ಕೈಗೆತ್ತಿಕೊಂಡರೆ ಅಂತಹವರ ವಿರುದ್ಧ ಕ್ರಮವಹಿಸುತ್ತೇವೆ. ಈ ರೀತಿ ಮಾಡಿಕೊಂಡು ಹೋದರೆ ಮುಂದೆ ಮಂಗಳೂರಿನ ಅಭಿವೃದ್ಧಿಗೆ ಹಿನ್ನೆಡೆಯಾಗಲಿದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಆಗುತ್ತಿದೆ. ಕೆಲವು ಸಂಘಟನೆಗಳು ಗಲಾಟೆ ಮಾಡಿ ಗೊಂದಲ ಸೃಷ್ಟಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಸೂಚನೆ
ಘಟನೆಯ ಬಗ್ಗೆ ಉಡುಪಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ದಾಳಿ ಮಾಡಿದ್ದವರನ್ನು ತಕ್ಷಣ ಬಂಧಿಸಲು ನಾನು ಸೂಚಿಸಿದ್ದೇನೆ. ಯಾವ ಉದ್ದೇಶಕ್ಕೆ ದಾಳಿಯಾಗಿದೆ ಗೊತ್ತಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ. ಇಂತಹ ಕೃತ್ಯಗಳು ನಡೆಯಬಾರದು. ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಅಡ್ಡಿಪಡಿಸಬಾರದು. ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಅವರು ತಿಳಿಸಿದ್ದಾರೆ.
ಅನೈತಿಕ ಚಟುವಟಿಕೆ ನಡೆಸುವ ಪಾರ್ಲರ್ಗಳಿದ್ದರೆ ದೂರು ಕೊಡಿ. ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕಾರ್ಪೊರೇಷನ್ನವರು ಟ್ರೇಡ್ ಲೈಸೆನ್ಸ್ ಕೊಟ್ಟಿರುತ್ತಾರೆ. ಯಾವ ಕಂಡೀಷನ್ ಹಾಕಿ ಕೊಟ್ಟಿರುತ್ತಾರೆ ಅದನ್ನು ಪಾಲಿಸದಿದ್ದರೆ, ನಿಯಮಾವಳಿಗಳನ್ನು ಮೀರಿ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದಿದ್ದಾರೆ.
ಪ್ರಸಾದ್ ಅತ್ತಾವರ ಬಂಧನ
ಈ ನಡುವೆ ಮಂಗಳೂರು ಸಿಸಿಬಿ ಪೊಲೀಸರು ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ್ ನನ್ನು ಬಂಧಿಸಿದ್ದಾರೆ. ಕ್ಯಾಮರಾಮನ್ ಶರಣ್ ಎಂಬವನನ್ನೂ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.