ಧಾರವಾಡ, ಚಾಮರಾಜನಗರದಲ್ಲಿ ಸ್ಪಿನ್‌  ಮಾಂತ್ರಿಕ  ಮುರಳೀಧರನ್‌ ಸಿಹಿತಿಂಡಿ ಉದ್ಯಮ!
x

ಧಾರವಾಡ, ಚಾಮರಾಜನಗರದಲ್ಲಿ ಸ್ಪಿನ್‌ ಮಾಂತ್ರಿಕ ಮುರಳೀಧರನ್‌ ಸಿಹಿತಿಂಡಿ ಉದ್ಯಮ!


ಬದನಕುಪ್ಪೆಯಲ್ಲಿ ಮುತ್ತಯ್ಯ ಮುರಳೀಧರನ್ 1,400 ಕೋಟಿ ರೂ. ಹೂಡಿಕೆ: ಎಂ ಬಿ ಪಾಟೀಲ

ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ತಂಪು ಪಾನೀಯ ಮತ್ತು ಸಿಹಿತಿಂಡಿಗಳ ಉದ್ಯಮ ಆರಂಭಿಸುತ್ತಿದ್ದಾರೆ. ಚಾಮರಾಜನಗರ ಮತ್ತು ಧಾರವಾಡಗಳಲ್ಲಿ ಈ ಉದ್ದಿಮೆಗಳನ್ನು ಸ್ಥಾಪಿಸುತ್ತಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿರೀಕ್ಷೆ ಇದೆ.

ಚಾಮರಾಜನಗರ ಜಿಲ್ಲೆಯ ಬದನಕುಪ್ಪೆಯಲ್ಲಿ, ಹಂತಹಂತವಾಗಿ ಒಟ್ಟು 1,400 ಕೋಟಿ ರೂ. ಹೂಡಿಕೆ ಮಾಡಲಿದ್ದು ಮುಂದಿನ ವರ್ಷ ಜನವರಿ ವೇಳೆಗೆ ಘಟಕ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ, ಮುತ್ತಯ್ಯ ಮುರಳೀಧರನ್‌ ಅವರು ಮಂಗಳವಾರ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರನ್ನು ಭೇಟಿಯಾಗಿ ಈ ಸಂಬಂಧ ಚರ್ಚೆ ನಡೆಸಿದರು.

ಬದನಕುಪ್ಪೆಯಲ್ಲಿ ಮುರಳೀಧರನ್ ಅವರು 'ಮುತ್ತಯ್ಯ ಬ್ರಿವರೇಜಸ್ ಮತ್ತು ಕನ್ಫೆಕ್ಷನರೀಸ್' ಎನ್ನುವ ಬ್ರ್ಯಾಂಡ್ ನಲ್ಲಿ ತಮ್ಮ ಉದ್ದಿಮೆ ಆರಂಭಿಸುತ್ತಿದ್ದು, ಶುರುವಿನಲ್ಲಿ 230 ಕೋಟಿ ರೂಪಾಯಿ ಹೂಡಿಕೆಗೆ ಯೋಜನೆ ರೂಪಿಸಲಾಗಿತ್ತು. ನಂತರ ಅದು ಈಗ ಸಾವಿರ ಕೋಟಿ ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ 1,400 ಕೋಟಿ ಆಗಲಿದೆ ಎಂದು ಮುತ್ತಯ್ಯ ತಮಗೆ ತಿಳಿಸಿದ್ದಾರೆ ಎಂದು ಸಚಿವ ಪಾಟೀಲ್‌ ಹೇಳಿದ್ದಾರೆ.

ಇದಕ್ಕಾಗಿ ಅವರಿಗೆ ಈಗಾಗಲೇ 46 ಎಕರೆ ಭೂಮಿ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಸಣ್ಣಪುಟ್ಟ ತೊಡಕುಗಳಿದ್ದವು. ಅವುಗಳನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬದನಕುಪ್ಪೆಯಲ್ಲಿ ಮುಂಬರುವ ಜನವರಿಯಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ ಎಂದು ಅವರು ನುಡಿದರು. ಮುಂಬರುವ ದಿನಗಳಲ್ಲಿ ಮುತ್ತಯ್ಯ ಧಾರವಾಡದಲ್ಲಿ ಕೂಡ ತಮ್ಮ ಉದ್ಯಮದ ಒಂದು ಘಟಕ ಸ್ಥಾಪಿಸಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿ ಸಿಇಒ ಡಾ.ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಈ ಸಂದರ್ಭದಲ್ಲಿ ಇದ್ದರು.

Read More
Next Story