ಕೊಲೆ ಆರೋಪಿ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ: 7 ಮಂದಿ ಅಮಾನತು- ಗೃಹ ಸಚಿವ ಪರಮೇಶ್ವರ್
x

ಕೊಲೆ ಆರೋಪಿ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ: 7 ಮಂದಿ ಅಮಾನತು- ಗೃಹ ಸಚಿವ ಪರಮೇಶ್ವರ್


ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ- ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಸರ್ಕಾರ 7 ಮಂದಿಯನ್ನು ಅಮಾನತು ಮಾಡಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ಫೊಟೋ ಹಾಗೂ ವಿಡಿಯೋ ಕಾಲ್‌ನಲ್ಲಿ ದರ್ಶನ್‌ ಮಾತನಾಡಿರುವ ದೃಶ್ಯ ಭಾನುವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್‌, ʻʻಇದು ಹೇಗೆ ಆಯಿತು ಎಂದು ಈ ಪ್ರಕರಣದ ಬಗ್ಗೆ ವರದಿ ಕೇಳಿದ್ದೇನೆ. ಜೈಲಿನಲ್ಲಿ ಈ ರೀತಿ ನಡೆಯಬಾರದು. 7 ಜನ ಭಾಗಿಯಾಗಿದ್ದಾರೆ ಎಂದು ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲಾ ಜೈಲುಗಳಲ್ಲಿ ಜಾಮರ್, ಕ್ಯಾಮೆರಾ ಹಾಕಿದರೂ ಹೀಗೆ ಆಗುವುದು ಸರಿಯಲ್ಲʼʼ ಎಂದಿದ್ದಾರೆ.

"ಜೈಲರುಗಳಾದ ಶರಣ ಬಸವ ಅಮೀನ್‌ಗಡ್, ಪ್ರಭು ಎಸ್. ಖಂಡೇಲ್‌ವಾಲ್, ಅಸಿಸ್ಟೆಂಟ್‌ ಜೈಲರ್ಸ್‌ ಎಲ್.ಎಸ್. ತಿಪ್ಪೇಸ್ವಾಮಿ, ಶ್ರೀಕಾಂತ್ ತಲವಾರ್, ಹೆಡ್‌ ವಾರ್ಡರ್ಸ್‌ ವೆಂಕಪ್ಪ ಕೊರ್ಟಿ, ಸಂಪತ್ ಕುಮಾರ್ ಕಡಪಟ್ಟಿ, ವಾರ್ಡರ್ ಬಸಪ್ಪ ತೇಲಿ ಅವರನ್ನು ಅಮಾನತು ಮಾಡಿದ್ದೇವೆ" ಎಂದು ಗೃಹ ಸಚಿವ ಪರಮೇಶ್ವರ್‌ ತಿಳಿಸಿದ್ದಾರೆ.

"ಎಲ್ಲರೂ ಒಳಗಡೆ ಹೋಗಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು ತಪ್ಪು ಮಾಡಿದರೂ ಅವರ ವಿರುದ್ಧ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ತನಿಖೆ ಬಳಿಕ ಫೋನ್ ಎಲ್ಲಿಂದ ಬಂತು, ಸಿಗರೇಟ್ ಬಂದಿದ್ದು ಹೇಗೆ ಎನ್ನುವುದರ ಬಗ್ಗೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಗೃಹ ಸಚಿವರು ಹೇಳಿದ್ದಾರೆ.

Read More
Next Story