
ಮುಖ್ಯಮಂತ್ರಿ ಸಿದ್ದರಾಮಯ್ಯ
ಸಮಾಜಘಾತಕ ಶಕ್ತಿ ಮಟ್ಟಹಾಕಲು ವಿಶೇಷ ಕಾರ್ಯ ಪಡೆ : ಸಿಎಂ ಸಿದ್ದರಾಮಯ್ಯ
ಮಂಗಳೂರಿನಲ್ಲಿ ಕೋಮುಹಿಂಸೆಗಳು ಹೆಚ್ಚುತ್ತಿರುವ ಕಾರಣ ಕೋಮು ಸಂಘರ್ಷ ನಿಗ್ರಹ ಕಾರ್ಯಪಡೆ ರಚಿಸುವುದು ಅಗತ್ಯವಾಗಿದೆ. ಗೃಹ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಹಾಗೂ ಪತ್ತೆ ಹಚ್ಚಲು ವಿಶೇಷ ಪಡೆಯ ಅಗತ್ಯವಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ಎನ್ ಡಿ ಪಿಯು ಕಾಲೇಜು ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ʼಕೋಮುಹಿಂಸೆ ನಿಗ್ರಹ ಕಾರ್ಯಪಡೆʼ ರಚಿಸುವ ಸಂಬಂಧ ಗೃಹ ಸಚಿವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಂಗಳೂರಿನಲ್ಲಿ ಫಾಜಿಲ್ ಹತ್ಯೆಯಾದಾಗ ಸರ್ಕಾರ 25 ಲಕ್ಷ ರೂ.ಪರಿಹಾರ ನೀಡಿತ್ತು.ಅದೇ ಪರಿಹಾರದ ಹಣದಲ್ಲಿ ಅವರ ಸಹೋದರನು ಸುಹಾಸ್ ಶೆಟ್ಟಿ ಹತ್ಯೆಗೆ ಸುಪಾರಿ ನೀಡಿದ್ದ ಎಂಬ ಪೊಲೀಸರು ಮಾಹಿತಿ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ನನಗೆ ತಿಳಿದಿಲ್ಲ. ಸಚಿವ ದಿನೇಶ್ ಗುಂಡೂರಾವ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಇಬ್ಬರೂ ಶನಿವಾರ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಮಾತನಾಡಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.
ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ವಿಜಯನಗರ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಶಂಖದಿಂದ ಬಂದರೆ ಮಾತ್ರ ತೀರ್ಥ
ಜಾತಿಗಣತಿ ಮಾಡಿಸುವ ಮೂಲಕ ಸಿದ್ದರಾಮಯ್ಯ ಜಾತಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದವರು ಕೇಂದ್ರ ಸರ್ಕಾರ ಜಾತಿಗಣತಿ ಮಾಡಿಸುವುದನ್ನು ಸ್ವಾಗತಿಸುತ್ತಿದ್ದಾರೆ. ಬಿಜೆಪಿಯವರಿಗೆ ಶಂಖದಿಂದ ಬಂದರೆ ಮಾತ್ರ ತೀರ್ಥ ಎಂಬಂತಾಗಿದೆ. ಜಾತಿಗಣತಿ ವಿಚಾರವನ್ನು ಮೊದಲು ರಾಜಕೀಯವಾಗಿ ಹೇಳುತ್ತಿದ್ದರು. ವಾಸ್ತವದ ಆಧಾರದ ಮೇಲೆ ಹೇಳುತ್ತಿರಲಿಲ್ಲ ಎಂಬುದು ಈಗ ಅರ್ಥವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರದ್ದು ಇಬ್ಬಗೆಯ ನೀತಿ
ಪಾಕಿಸ್ತಾನದ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂಬ ಮಾಜಿ ಪ್ರಧಾನಿ ದೇವೇಗೌಡ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ದೇವೇಗೌಡರು ಬಿಜೆಪಿ ಸೇರುವ ಮುನ್ನ ನರೇಂದ್ರ ಮೋದಿ ಬಗ್ಗೆ ಏನು ಮಾತನಾಡುತ್ತಿದ್ದರು, ಈಗ ಏನು ಮಾತನಾಡುತ್ತಿದ್ದಾರೆ?. ಇದರಿಂದಲೇ ತಿಳಿಯಲಿದೆ ಯಾರದ್ದು ಇಬ್ಬಗೆಯ ನೀತಿ ಎಂದು ತಿರುಗೇಟು ನೀಡಿದರು.