Cabinet meeting to be held at Nandi Giri Dham on July 2, government decision
x

ಚಿಕ್ಕಬಳ್ಳಾಪುರದಲ್ಲಿನ ನಂದಿ ಗಿರಿಧಾಮ 

Special Cabinet Meeting: ಇಂದು ನಂದಿಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ; ಬೆಂಗಳೂರು ಉತ್ತರ ಜಿಲ್ಲೆ ಘೋಷಣೆ?

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕಾವೇರಿ ನೀರು ಪೂರೈಕೆ, ಮೆಟ್ರೋ ವಿಸ್ತರಣೆ, ಎಸ್‌ಟಿಪಿ ಮತ್ತು ಯುಜಿಡಿ ಕಾಮಗಾರಿಗೆ ಅನುದಾನ, ರಸ್ತೆಗಳ ಅಭಿವೃದ್ಧಿ, ಕೆರೆಗಳ ಪುನಶ್ಚೇತನ ಮತ್ತಿತರ ವಿಷಯಗಳ ಚರ್ಚೆ ನಡೆಯಲಿದೆ.


ಬಯಲು ಸೀಮೆ ಜಿಲ್ಲೆಯಾದ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಈ ಸಂಪುಟ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಎರಡು ವಾರಗಳ ಹಿಂದೆ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದ್ದರೂ, ಮಾವುಬೆಳೆಗಾರರ ಹೋರಾಟ ಮತ್ತಿತರ ಕಾರಣಗಳಿಗಾಗಿ ಕೊನೇ ಕ್ಷಣದಲ್ಲಿ ಸಂಪುಟ ಸಭೆ ನಡೆಸುವುದರಿಂದ ಸರ್ಕಾರ ಹಿಂದೆ ಸರಿದಿತ್ತು. ಈಗ ಮತ್ತೆ ವಿಶೇಷ ಸಚಿವ ಸಂಪುಟ ಸಭೆ ಬುಧವಾರ (ಜುಲೈ.2) ನಡೆಯುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ನೆಲಮಂಗಲ, ದೇವನಹಳ್ಳಿ, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ಸೇರಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿ ಘೋಷಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸಿದ ಬಳಿಕ ಈ ಘೋಷಣೆ ಆಗಲಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವಿವಿಧ ಯೋಜನೆಗಳಿಗೆ ಅನುವಾಗಲು ಈ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 18 ವರ್ಷಗಳು ಉರುಳಿದರೂ ಯಾವುದೇ ಬದಲಾವಣೆ ಕಂಡಿಲ್ಲ. ಅವಳಿ ಜಿಲ್ಲೆಗಳಲ್ಲಿ ಘಟಾನುಘಟಿ ರಾಜಕಾರಣಿಗಳಿದ್ದರೂ ಅಭಿವೃದ್ಧಿ ಮಾತ್ರ ಕಣ್ಣಿಗೆ ಗೋಚರಿಸುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳನ್ನೇ ಹೊದ್ದು ಮಲಗಿರುವ ಬಯಲು ಸೀಮೆ ಜಿಲ್ಲೆಯ ಜನರಲ್ಲಿ ವಿಶೇಷ ಸಂಪುಟ ಸಭೆ ಬೆಟ್ಟದಷ್ಟು ನಿರೀಕ್ಷೆಗಳನ್ನು ತುಂಬಿದೆ. ಸಂಪುಟ ಸಭೆಯಲ್ಲಿ ಈ ಜಿಲ್ಲೆಗಳಿಗೆ ಏನೆಲ್ಲಾ ಕಾರ್ಯಕ್ರಮ, ಯೋಜನೆ ಘೋಷಣೆಯಾಗಲಿವೆ ಎಂಬ ಕುತೂಹಲ ಜನರಲ್ಲಿದೆ.

ಬಯಲು ಸೀಮೆ ಜಿಲ್ಲೆಗಳ ಸಮಸ್ಯೆಗಳೇನು?

ಬಯಲು ಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿದ್ದು, ನೀರಾವರಿ ಕನಸು ಅನಿಶ್ಚಿತವಾಗಿದೆ. ಕೆ.ಸಿ.ವ್ಯಾಲಿ ಯೋಜನೆ ಮೂಲಕ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ಪೂರೈಸುತ್ತಿದ್ದರೂ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.

ಎರಡು ಹಂತದ ಶುದ್ದೀಕರಣವಾದರೂ ಕಲುಷಿತ ನೀರು ಕೆರೆಗಳಿಗೆ ಸೇರುತ್ತಿದ್ದು, ಅಂತರ್ಜಲವನ್ನು ಕಲುಷಿತಗೊಳಿಸುತ್ತಿದೆ. ಮೂರನೇ ಹಂತದ ಶುದ್ದೀಕರಣ ನಡೆಸುವಂತೆ ರೈತರು ಒತ್ತಾಯಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಈ ವಿಷಯ ಕುರಿತಂತೆಯೂ ಸಂಪುಟದಲ್ಲಿ ಚರ್ಚಿಸಬೇಕು ಎಂಬ ಆಗ್ರಹ ರೈತ ಸಮುದಾಯದಿಂದ ಕೇಳಿ ಬರುತ್ತಿದೆ.

2007ರಲ್ಲಿ ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆಯಾದಾಗಿನಿಂದಲೂ ಈ ಹಿಂದಿನ ಸ್ಥಿತಿಯಲ್ಲಿಯೇ ಇದೆ. ಯಾವುದೇ ರೀತಿಯ ಚಹರೆ ಬದಲಾಗಿಲ್ಲ. ಹೆದ್ದಾರಿ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಬೆಂಗಳೂರಿನಿಂದ ಹೈದರಾಬಾದ್‌ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಎರಡು ಮೂರು ವರ್ಷಗಳಿಂದ ಪೂರ್ಣಗೊಂಡಿಲ್ಲ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಿ, ತ್ವರಿತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಬಯಲುಸೀಮೆ ಜಿಲ್ಲೆಗಳ ಅಭಿವೃದ್ಧಿ ಕುರಿತು ಚರ್ಚೆ

ರಾಜ್ಯ ಸರ್ಕಾರ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಉದ್ದೇಶಿಸಿರುವುದರಿಂದ ಬಯಲುಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆದು, ಹಲವು ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕಾವೇರಿ ನೀರು ಪೂರೈಕೆ, ಮೆಟ್ರೋ ವಿಸ್ತರಣೆ, ಎಸ್‌ಟಿಪಿ ಮತ್ತು ಯುಜಿಡಿ ಕಾಮಗಾರಿಗೆ ಅನುದಾನ, ಜಿಲ್ಲಾಸ್ಪತ್ರೆಗೆ ಅನುದಾನ, ರಸ್ತೆಗಳ ಅಭಿವೃದ್ಧಿ, ಕೆರೆಗಳ ಪುನಶ್ಚೇತನ, ಜಿಲ್ಲಾ ಕೌಶಲ ತರಬೇತಿ ಕೇಂದ್ರ ಸ್ಥಾಪನೆ, ರಕ್ತನಿಧಿ ಕೇಂದ್ರ, ರೇಷ್ಮೆ ಸೀರೆ ಮಾರ್ಕೆಟಿಂಗ್ ಕಾಂಪ್ಲೆಕ್ಸ್ ಸ್ಥಾಪನೆ ಕುರಿತ ಚರ್ಚೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ, ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಕೆ, ಸರ್ಕಾರಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಎತ್ತಿನಹೊಳೆ ಯೋಜನೆ ಸೇರಿದಂತೆ ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಇನ್ನೂ ನನಸಾಗದ ದಶಕಗಳ ಕನಸು

ನಂದಿಬೆಟ್ಟಕ್ಕೆ ರೋಪ್‌ ವೇ ನಿರ್ಮಿಸುವ ದಶಕಗಳ ಕನಸು ಈವರೆಗೂ ಈಡೇರಿಲ್ಲ. ದಿವಂಗತ ನಟ ಶಂಕರ್‌ನಾಗ್ ಅವರು ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಯೋಜನೆಯನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು. ಆ ಬಳಿಕ 30 ವರ್ಷಗಳಿಂದ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕುರಿತಂತೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

2.93 ಕಿ.ಮೀ ಉದ್ದದ ರೋಪ್‌ ವೇ ನಿರ್ಮಾಣಕ್ಕೆ ಬೆಟ್ಟದ ಕೆಳಭಾಗದಲ್ಲಿ ಟರ್ಮಿನಲ್‌ ನಿರ್ಮಿಸಲು ಸುಮಾರು ಏಳು ಎಕರೆ ಭೂಮಿ ಅಗತ್ಯವಿದೆ. ಅದರಲ್ಲಿ 86 ಗುಂಟೆ ಹಾಗೂ ನಂದಿ ಬೆಟ್ಟದ ಮೇಲಿನ ಎರಡು ಎಕರೆ ಭೂಮಿ ಅರಣ್ಯ ಇಲಾಖೆಗೆ ಸೇರಿದೆ. ಸದ್ಯ ಇಲಾಖೆಯಿಂದ ಕ್ಲಿಯರೆನ್ಸ್‌ ದೊರೆತಿದ್ದು, 93.40 ಕೋಟಿ ರೂ. ವೆಚ್ಚದಲ್ಲಿ ರೋಪ್‌ ವೇ ನಿರ್ಮಿಸಲು ಸರ್ಕಾರ ಮುಂದಾಗಿದೆ.

ನಂದಿಬೆಟ್ಟಕ್ಕೆ ಐತಿಹಾಸಿಕ ಹಿನ್ನೆಲೆ

ನಂದಿ ಗಿರಿಧಾಮಕ್ಕೆ ಮಹಾತ್ಮ ಗಾಂಧೀಜಿ ಅವರು 1927 ರಲ್ಲಿ ಭೇಟಿ ನೀಡಿದ್ದರು. ನಂದಿಬೆಟ್ಟದ ಸೌಂದರ್ಯಕ್ಕೆ ಮಾರು ಹೋದ ಗಾಂಧೀಜಿ ಅವರು 45 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಆ ದಿನಗಳಲ್ಲಿ ನಂದಿಬೆಟ್ಟಕ್ಕೆ ರಸ್ತೆ ಸಂಪರ್ಕ ಇರಲಿಲ್ಲ. 1,775 ಮೆಟ್ಟಿಲುಗಳನ್ನು ಹತ್ತಿಯೇ ಹೋಗಬೇಕಿತ್ತು. 1936 ಮೇ 10 ರಂದು ಮದ್ರಾಸಿಗೆ ಬಂದಿದ್ದ ಗಾಂಧೀಜಿಗೆ ರಕ್ತದೊತ್ತಡ ಹೆಚ್ಚಿದಾಗ ವೈದ್ಯರು ವಿಶ್ರಾಂತಿಗೆ ಸೂಚನೆ ನೀಡಿದ್ದರು. ಆಗ ಗಾಂಧೀಜಿ ಅವರು ನಂದಿ ಗಿರಿಧಾಮದಲ್ಲಿ ಉಳಿದುಕೊಂಡಿದ್ದರು.

ಐತಿಹಾಸಿಕ ಸಾರ್ಕ್‌ ಶೃಂಗಸಭೆ ಆಯೋಜನೆ

1986 ನವೆಂಬರ್‌ 15 ಹಾಗೂ16ರಂದು ನಂದಿ ಬೆಟ್ಟದ ಶ್ವೇತ ವರ್ಣದ ಕಟ್ಟಡದಲ್ಲಿ ಐತಿಹಾಸಿಕ 2ನೇ ಸಾರ್ಕ್‌ ಶೃಂಗಸಭೆ ನಡೆಸುವ ಮೂಲಕ ದಕ್ಷಿಣ ಏಷ್ಯಾದ ಏಳು ರಾಷ್ಟ್ರಗಳ ಮುಖ್ಯಸ್ಥರ ಸಮಾಗಮಕ್ಕೆ ನಂದಿ ಗಿರಿಧಾಮ ಸಾಕ್ಷಿಯಾಗಿತ್ತು. ಅಲ್ಲದೇ ವಿಶ್ವ ಸಮುದಾಯದ ಗಮನ ಸೆಳೆದಿತ್ತು.

ಭಾರತದ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಸೇರಿ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಆಫ್ಘಾನಿಸ್ತಾನ, ಭೂತಾನ್‌ ದೇಶದ ಪ್ರಧಾನಿಗಳು ಹಾಗೂ ಅಧ್ಯಕ್ಷರು ನಂದಿ ಗಿರಿಧಾಮಕ್ಕೆ ಭೇಟಿ ಕೊಟ್ಟು ನೆಹರು ನಿಲಯದಲ್ಲಿ ಸಾರ್ಕ್‌ ರಾಷ್ಟ್ರಗಳ ನಡುವೆ ಪ್ರಾದೇಶಿಕ ಸಹಕಾರದ ಕುರಿತು ಹಲವು ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿದ್ದರು.

ನಂದಿ ಬೆಟ್ಟದ ತಪ್ಪಲಲ್ಲಿ ಜಿ-20 ಶೃಂಗಸಭೆ

2023 ರಲ್ಲಿ ಅಧ್ಯಕ್ಷತೆ ವಹಿಸಿದ್ದ ಭಾರತ ಜಿ-20 ಶೃಂಗಸಭೆಯ ಕೆಲ ಸಭೆಗಳನ್ನು ನಂದಿ ಗಿರಿಧಾಮದ ತಪ್ಪಲಿನಲ್ಲಿ ನಡೆಸಿತ್ತು. ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆಯೋಜಿಸಿದ್ದ ಮೊದಲ ಜಿ -20 ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಡೆಪ್ಯೂಟೀಸ್ (ಎಫ್‌ಸಿಬಿಡಿ) ಸಭೆಯು ಡಿ.13 ರಿಂದ ಮೂರು ದಿನಗಳ ಕಾಲ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿತ್ತು.

Read More
Next Story