ಎಸ್‌ಐಟಿಗೆ ಪತ್ರ ಬರೆದ ಸೌಜನ್ಯ ತಾಯಿ ; ಮುಸುಕುಧಾರಿ ಮಂಪರು ಪರೀಕ್ಷೆಗೆ ಒತ್ತಾಯ
x

ಎಸ್‌ಐಟಿಗೆ ಪತ್ರ ಬರೆದ ಸೌಜನ್ಯ ತಾಯಿ ; ಮುಸುಕುಧಾರಿ ಮಂಪರು ಪರೀಕ್ಷೆಗೆ ಒತ್ತಾಯ

ಸೌಜನ್ಯಳ ಮೃತದೇಹವನ್ನೂ ಹೂತು ಹಾಕುವ ಸಂಚು ನಡೆದಿರುವ ಸಾಧ್ಯತೆ ಇತ್ತೆಂಬುದು ಮುಸುಕುಧಾರಿ ಸಂದರ್ಶನದಿಂದ ತಿಳಿದು ಬಂದಿದೆ. ಸತ್ಯಾಂಶ ಹೊರಬರಬೇಕಾದರೆ ಮುಸುಕುಧಾರಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಸೌಜನ್ಯ ತಾಯಿ ಎಸ್‌ಐಟಿಗೆ ಮನವಿ ಮಾಡಿದ್ದಾರೆ.


ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮುಸುಕುಧಾರಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಅಸಹಜ ಸಾವುಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಸೌಜನ್ಯ ಅವರ ತಾಯಿ ಪತ್ರ ಬರೆದಿದ್ದಾರೆ.

2012 ರಲ್ಲಿ ತಮ್ಮ ಮಗಳು ಸೌಜನ್ಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾರೆ. ಘಟನೆ ನಡೆದು 13 ವರ್ಷ ಕಳೆದರೂ ಪೊಲೀಸರು ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಪ್ರಸ್ತುತ, ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ಕುರಿತು ಹೇಳಿಕೆ ನೀಡಿದ್ದ ಸಾಕ್ಷಿ ದೂರುದಾರ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಮುಸುಕುಧಾರಿಯೇ ಧರ್ಮಸ್ಥಳದಲ್ಲಿ ಮೃತ ದೇಹ ವಿಲೇವಾರಿ ಮಾಡುತ್ತಿದ್ದ ವಿಷಯವು ನಾನು ಸೇರಿದಂತೆ ಹಲವರಿಗೆ ತಿಳಿದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸೌಜನ್ಯ ಪ್ರಕರಣದ ನಂತರ ಧರ್ಮಸ್ಥಳ ತೊರೆದಿದ್ದ

ಮುಸುಕುಧಾರಿಗೆ ಸೌಜನ್ಯ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ಮಾಹಿತಿ ಇದ್ದರೂ ಆತ ನೀಡಿರುವ ಲಿಖಿತ ದೂರಿನಲ್ಲಿ ಏನನ್ನೂ ಹೇಳಿಲ್ಲ. 2014 ರಲ್ಲಿ ಸೌಜನ್ಯ ಪ್ರಕರಣದ ನಂತರವೇ ಈ ವ್ಯಕ್ತಿ ಧರ್ಮಸ್ಥಳ ತೊರೆದಿದ್ದ. ಅಲ್ಲದೇ ಈತನೇ ಮಣ್ಣಸಂಕದಲ್ಲಿ ಹಲವಾರು ಶವಗಳನ್ನು ಹೂತಿರುವುದಾಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ.

ಸೌಜನ್ಯ ಹಂತಕರ ಕುರಿತು ಸಾಕ್ಷಿದಾರ ರವಿ ಪೂಜಾರಿ ಎಂಬಾತ ಮುಸುಕುಧಾರಿಗೆ ಆರೋಪಿಗಳ ಬಗ್ಗೆ ಹೇಳಿದ್ದ ಎಂಬುದು ಆತನ ಸಂದರ್ಶನದಿಂದಲೇ ಗೊತ್ತಾಗಿದೆ. ಈಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವಿಚಾರಣೆ ವೇಳೆ ಮುಸುಕುಧಾರಿಯ ಸಹೋದರಿ ಕೂಡ ಕೆಲ ಮಾಹಿತಿ ಹಂಚಿಕೊಂಡಿರುವುದು ತಿಳಿದು ಬಂದಿದೆ. ಮುಸುಕುಧಾರಿಯನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಬೇಕು ಎಂದು ಸೌಜನ್ಯ ತಾಯಿ ಕುಸುಮಾವತಿ ಮನವಿ ಮಾಡಿದ್ದಾರೆ.

ಧರ್ಮಸ್ಥಳ ಪ್ರಕರಣಗಳ ತನಿಖೆಗಾಗಿ ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಭೇಟಿ ನೀಡಿತ್ತು. ಆ.12 ರಂದು ಪಾಂಗಳದಲ್ಲಿರುವ ನಮ್ಮ ಮನೆಗೆ ಭೇಟಿ ನೀಡಿ ಹೇಳಿಕೆ ಪಡೆದಿತ್ತು. ಆ.13 ರಂದು ಉಜಿರೆಯಲ್ಲಿ ಸಂತ್ರಸ್ತರ ಮುಂದುವರಿದ ವಿಚಾರಣೆಗೆ ಬರುವಂತೆ ಸೂಚಿಸಿತ್ತು. ಅಂದು ನಾನು ಉಜಿರೆಗೆ ಭೇಟಿ ನೀಡಿದ್ದಾಗ ಮುಸುಕುಧಾರಿಯ ಸಹೋದರಿ ಕೂಡ ಬಂದಿದ್ದರು.

ಸೌಜನ್ಯ ಹಂತಕರ ಮಾಹಿತಿ ಇರುವ ಸಾಧ್ಯತೆ

ಧರ್ಮಸ್ಥಳದ ಪ್ರಮುಖರೊಬ್ಬರು ಮುಸುಕುಧಾರಿಗೆ 2014 ರಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ವಿಚಾರವಾಗಿ ಪ್ರಾಣ ಬೆದರಿಕೆ ಹಾಕಿದ್ದರು. ಅದರಿಂದಲೇ ಆತ ಧರ್ಮಸ್ಥಳ ಬಿಟ್ಟು ಓಡಿ ಹೋಗಬೇಕಾಯಿತು ಎಂದು ಆತನ ಸಹೋದರಿ ಆಯೋಗಕ್ಕೆ ಮಾಹಿತಿ ನೀಡಿದ್ದನ್ನು ನಾನು ಕೇಳಿಸಿಕೊಂಡಿದ್ದೆ. ಹಾಗಾಗಿ ಮುಸುಕುಧಾರಿಗೆ ಸೌಜನ್ಯ ಹಂತಕರ ಮಾಹಿತಿ ಇರಬಹುದು ಎಂಬ ಅನುಮಾನವಿದೆ. ಆ.24 ರಂದು ಮಾಧ್ಯಮವೊಂದಕ್ಕೆ ಮುಸುಕುಧಾರಿಯೇ ನೀಡಿದ ಸಂದರ್ಶನದಲ್ಲಿ ರವಿ ಪೂಜಾರಿ ಎಂಬಾತ ಸೌಜನ್ಯ ಹಂತಕರ ಹೆಸರು ಹೇಳಿದ್ದ. ಬಳಿಕ ರವಿ ಪೂಜಾರಿಯನ್ನು ಕಚೇರಿಗೆ ಕರೆಸಿಕೊಂಡು ಕೊಲೆ ಮಾಡಲಾಯಿತು ಎಂದೆಲ್ಲಾ ವಿವರಿಸಿದ್ದಾನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮುಸುಕುಧಾರಿ ತನ್ನ ಸಂದರ್ಶನದಲ್ಲಿ ಹೇಳಿರುವ ಇನ್ನೊಂದು ಅಂಶವೆಂದರೆ ಸೌಜನ್ಯ ಮೃತದೇಹ ಸಿಕ್ಕ ಮಣ್ಣಸಂಕದಲ್ಲಿ ಆತನೇ ಹಲವಾರು ಹೆಣಗಳನ್ನು ಹೂತು ಹಾಕಿರುವುದಾಗಿ ಹೇಳಿದ್ದಾನೆ. ಅಲ್ಲಿ ಸೌಜನ್ಯಳ ಮೃತದೇಹವನ್ನೂ ಹೂತು ಹಾಕುವ ಸಂಚು ನಡೆದಿರುವ ಸಾಧ್ಯತೆ ಇತ್ತೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಎಲ್ಲಾ ಅಂಶಗಳು ಬಯಲಾಗಬೇಕಾದರೆ ಮುಸುಕುಧಾರಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

Read More
Next Story