
ಪರಿಷತ್ ಚುನಾವಣೆ | ನೈರುತ್ಯ ಶಿಕ್ಷಕರ ಕ್ಷೇತ್ರ: ಎಸ್.ಎಲ್. ಭೋಜೇಗೌಡರಿಗೆ ಜೆಡಿಎಸ್ ಟಿಕೆಟ್
ಲೋಕಸಭೆ ಚುನಾವಣೆಯ ಬಳಿಕ ನಡೆಯುತ್ತಿರುವ ವಿಧಾನ ಪರಿಷತ್ತಿನ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆದಿದ್ದು, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಸ್ಪರ್ಧಿಸಲಿದೆ. ಈ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿರುವ ಎಸ್.ಎಲ್.ಭೋಜೇಗೌಡ ಅವರು ಮರು ಸ್ಪರ್ಧೆಗಿಳಿಯಲಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ, ʻʻಎಸ್.ಎಲ್. ಭೋಜೇಗೌಡ ಅವರನ್ನು 2024ರ ಜೂನ್‌ನಲ್ಲಿ ನಡೆಯಲಿರುವ ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಜನತಾದಳ (ಜಾತ್ಯತೀತ) ಪಕ್ಷದ ಅಧಿಕೃತ ಅಭ್ಯರ್ಥಿಯೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಸಭಾ ಸದಸ್ಯರು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ. ದೇವೇಗೌಡರವರು ಘೋಷಿಸಿರುತ್ತಾರೆʼʼ ಎಂದು ತಿಳಿಸಿದ್ದಾರೆ.
ಪದವೀಧರರ ಮೂರು ಹಾಗೂ ಶಿಕ್ಷಕರ ಮೂರು ಸೇರಿದಂತೆ ವಿಧಾನ ಪರಿಷತ್‍ನ ಆರು ಸದಸ್ಯ ಸ್ಥಾನಗಳಿಗೆ ಜೂನ್ ಮೂರರಂದು ಚುನಾವಣೆ ನಡೆಯಲಿದೆ. ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಜೆಡಿಎಸ್‍ಗೆ ಒಂದು ಕ್ಷೇತ್ರವನ್ನು ಮಾತ್ರ ಬಿಟ್ಟುಕೊಟ್ಟಿದೆ.
ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಚುನಾಯಿತರಾಗಿದ್ದ ಮರಿತಿಬ್ಬೇಗೌಡ ಅವರು, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ, ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ಈಗ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.