ಸೌಜನ್ಯ ಪ್ರಕರಣ| ರಾಜ್ಯವ್ಯಾಪಿ ಜನಾಗ್ರಹ ಆಂದೋಲನ;  75 ಕಡೆ ಏಕಕಾಲದಲ್ಲಿ ಹೋರಾಟ
x

ಸೌಜನ್ಯ ಪ್ರಕರಣ| ರಾಜ್ಯವ್ಯಾಪಿ ಜನಾಗ್ರಹ ಆಂದೋಲನ; 75 ಕಡೆ ಏಕಕಾಲದಲ್ಲಿ ಹೋರಾಟ

ಸೌಜನ್ಯ ಅತ್ಯಾಚಾರ, ಹತ್ಯೆ ನಡೆದು 13ವರ್ಷಗಳಾದರೂ ಆರೋಪಿಗಳನ್ನು ಬಂಧಿಸದಿರುವುದು ಪ್ರಕರಣವನ್ನು ಕಗ್ಗಂಟಾಗಿಸಿದೆ. ಸರ್ಕಾರಗಳು ಕೂಡ ಪ್ರಕರಣ ಇತ್ಯರ್ಥಕ್ಕೆ ಮನಸ್ಸು ಮಾಡದಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.


ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ರಾಜ್ಯದ ಉದ್ದಗಲಕ್ಕೂ 75ಕ್ಕೂ ಹೆಚ್ಚು ಕಡೆಗಳಲ್ಲಿ ಜನಾಗ್ರಹ ಕಾರ್ಯಕ್ರಮ ಆಯೋಜಿಸಲಾಗಿದೆ.

ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವದಲ್ಲಿ ನಡೆಯುವ ಈ ಚಳವಳಿಯು ಸಾಮಾಜಿಕ, ನ್ಯಾಯದ ಚಟುವಟಿಕೆಯಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಸೌಜನ್ಯ ಅತ್ಯಾಚಾರ, ಹತ್ಯೆ ನಡೆದು 13ವರ್ಷಗಳಾದರೂ ಆರೋಪಿಗಳನ್ನು ಬಂಧಿಸದಿರುವುದು ಪ್ರಕರಣವನ್ನು ಕಗ್ಗಂಟಾಗಿಸಿದೆ. ಸರ್ಕಾರಗಳು ಕೂಡ ಪ್ರಕರಣ ಇತ್ಯರ್ಥಕ್ಕೆ ಮನಸ್ಸು ಮಾಡದಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಸೌಜನ್ಯ ಪ್ರಕರಣವು ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ.

ರಾಜ್ಯವ್ಯಾಪಿ ಆಂದೋಲನ

ಬೆಂಗಳೂರು ನಗರದ 14 ಪ್ರಮುಖ ವೃತ್ತಗಳು, ರಾಜ್ಯದ 15 ಜಿಲ್ಲೆಗಳು, 10 ಗ್ರಾಮ ಪಂಚಾಯಿತಿ ಕಚೇರಿಗಳು ಹಾಗೂ ವಿವಿಧ ನಗರ, ಪಟ್ಟಣಗಳ 36 ಜಂಕ್ಷನ್‌ಗಳಲ್ಲಿ ಜನಾಗ್ರಹ ಚಳವಳಿ ಏಕಕಾಲದಲ್ಲಿ ನಡೆಯಲಿವೆ.

ಚಳವಳಿಯಲ್ಲಿ ಮೊಂಬತ್ತಿ ಹಿಡಿದು ಮೆರವಣಿಗೆ ನಡೆಸಲಿದ್ದಾರೆ. ಸೌಜನ್ಯ ಹತ್ಯೆ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುತ್ತದೆ. ಹಲವೆಡೆ ಪ್ರತಿಭಟನಾ ಸಭೆ, ಭಿತ್ತಿಪತ್ರ ಪ್ರದರ್ಶನ ಹಾಗೂ ಬೃಹತ್ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗಿದೆ.

‘ನ್ಯಾಯದ ಹಾದಿಯಲ್ಲಿ ಇತಿಹಾಸ ನಿರ್ಮಾಣ’

ರಾಜ್ಯಾದ್ಯಂತ ನಡೆಯುವ ಜನಾಗ್ರಹ ಚಳವಳಿಗಳು ಸಂಪೂರ್ಣ ಶಾಂತಿಯುತವಾಗಿ ಇರಲಿವೆ ಎಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯರು ಹೇಳಿದ್ದಾರೆ.

ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಸೌಜನ್ಯಗೆ ನ್ಯಾಯ ದೊರೆಯುವ ತನಕ ಹೋರಾಟ ನಿಲ್ಲದು. ಇದು ಕೇವಲ ಒಂದು ಪ್ರಕರಣವಲ್ಲ, ರಾಜ್ಯದ ಮಹಿಳಾ, ಮಾನವ ಹಕ್ಕುಗಳ ಪರ ಹೋರಾಟವಾಗಿದೆ ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಆಂದೋಲನದ ಕಾನೂನು ಹಾದಿ

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಜನಾಗ್ರಹ ಚಳವಳಿಯ ಕುರಿತಂತೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಜನಾಗ್ರಹ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದ ತಡೆಯಾಜ್ಞೆ ಇಲ್ಲ. ಆದರೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತವು ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಸೌಜನ್ಯ ಪ್ರಕರಣದ ಹಿನ್ನೆಲೆ

2012 ಅ.9 ರಂದು ನಡೆದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಇಡೀ ರಾಜ್ಯದಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಘಟನೆ ನಡೆದು 13 ವರ್ಷಗಳಾದರೂ ಈವರೆಗೂ ಆರೋಪಿಗಳನ್ನು ಬಂಧಿಸದಿರುವುದು ವ್ಯವಸ್ಥೆಯನ್ನೇ ಅಣಕಿಸುವಂತಿದೆ.

ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಿದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಅಂದಿನಿಂದ ಸೌಜನ್ಯ ಪರ ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ಜನಾಂದೋಲನ ರೂಪಿಸಲು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಜನಾಗ್ರಹ ಹೋರಾಟ ಆಯೋಜಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಜನಾಗ್ರಹ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಮಾನವ ಹಕ್ಕು ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ರಾಷ್ಟ್ರ ಮಟ್ಟದ ಚರ್ಚೆಗೆ ಕಾರಣವಾಗಲಿದೆ.

Read More
Next Story