
ಸೌಜನ್ಯ ಪ್ರಕರಣ| ನ್ಯಾಯಕ್ಕಾಗಿ ಕಲಬುರಗಿ ಯುವಕರ ಪಾದಯಾತ್ರೆ; ಧರ್ಮಸ್ಥಳದಲ್ಲಿ ಯುವಕರು-ಭಕ್ತರ ಮಧ್ಯೆ ವಾಗ್ವಾದ
ಕಲಬುರಗಿಯ ಯುವಕರು ʼನಕಲಿ ದೇವಮಾನವʼ ಎಂದು ಘೋಷಣೆ ಕೂಗಿದಾಗ ಭಕ್ತರು ಕೆರಳಿದ್ದಾರೆ. ಯುವಕರು ಹಾಗೂ ದೇವಸ್ಥಾನದ ಭಕ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಕಲಬುರಗಿಯಿಂದ ಪಾದಯಾತ್ರೆಯಲ್ಲಿ ಬಂದಿದ್ದ ಯುವಕರ ಗುಂಪೊಂದು ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಕೋರಿ ಘೋಷಣೆ ಕೂಗಿದ ಘಟನೆ ಸೋಮವಾರ ನಡೆದಿದೆ.
ಕಲಬುರಗಿಯ ಆಳಂದದಿಂದ ಬಂದಿದ್ದ ಯುವಕರು ಸೌಜನ್ಯ ಪರ ಘೋಷಣೆ ಕೂಗುತ್ತಾ ದೇವಸ್ಥಾನ ಪ್ರವೇಶಿಸಲು ಮುಂದಾಗಿದ್ದಾರೆ. ಆಗ ದೇವಸ್ಥಾನದ ಭಕ್ತರು ಯುವಕರನ್ನು ತಡೆದಿದ್ದಾರೆ. ಇದರಿಂದ ಕುಪಿತರಾದ ಕಲಬುರಗಿಯ ಯುವಕರು ʼನಕಲಿ ದೇವಮಾನವʼ ಎಂದು ಘೋಷಣೆ ಕೂಗಿದಾಗ ಭಕ್ತರು ಕೆರಳಿದ್ದಾರೆ. ಯುವಕರು ಹಾಗೂ ದೇವಸ್ಥಾನದ ಭಕ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ತಕ್ಷಣ ಮಧ್ಯಪ್ರವೇಶಿಸಿದ ಧರ್ಮಸ್ಥಳ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಕ್ಷೇತ್ರದ ಹೆಸರು ಕೆಡಿಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದರು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿಭಟನಾನಿರತ ಯುವಕರನ್ನು ಪೊಲೀಸರು ಉಜಿರೆಗೆ ಕಳುಹಿಸಿಕೊಟ್ಟರು. ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿರುವುದರಿಂದ ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.
ಈಗಾಗಲೇ ದೇವಸ್ಥಾನದ ಮಾಜಿ ಸ್ವಚ್ಛತಾ ಕಾರ್ಮಿಕನೊಬ್ಬ ತಾವು ೨೦ ವರ್ಷಗಳಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದ ಬಳಿಕ ಸೌಜನ್ಯ, ಅನನ್ಯಾ ಭಟ್ ಪ್ರಕರಣ ಕುರಿತಂತೆ ಚರ್ಚೆ ಹೆಚ್ಚಾಗಿದೆ.