
ಎಮ್‌ಎಲ್‌ಸಿ ರಾಜೇಂದ್ರ ಮತ್ತು ಭರತ್
ರಾಜೇಂದ್ರ ಹತ್ಯೆ ಸಂಚು: ಸೋಮ ಪೊಲೀಸರಿಗೆ ಶರಣು, ಮಾಸ್ಟರ್ ಮೈಂಡ್ ಭರತ್ ಬಂಧನ
ಸಚಿವ ಕೆ.ಎನ್ ರಾಜಣ್ಣ ಅವರ ಪುತ್ರ ರಾಜೇಂದ್ರನ ಹತ್ಯೆಗೆ 70 ಲಕ್ಷ ರೂ. ಮೊತ್ತದ ಡೀಲ್ ಮಾಡಲಾಗಿದೆ ಎಂಬ ಆರೋಪ ಸೋಮನ ಮೇಲೆ ಇದೆ.
ಎಂಎಲ್‌ಸಿ ರಾಜೇಂದ್ರ ಅವರ ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೋಮ ಮತ್ತು ಅಮಿತ್ ಪೊಲೀಸರ ಮುಂದೆ ಶರಣಾಗಿದ್ದಾನೆ.
ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಹಾಜರಾದ ಸೋಮನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಚಿವ ಕೆ.ಎನ್ ರಾಜಣ್ಣ ಅವರ ಪುತ್ರ ರಾಜೇಂದ್ರನ ಹತ್ಯೆಗೆ 70 ಲಕ್ಷ ರೂ. ಮೊತ್ತದ ಸುಪಾರಿ ಪಡೆದಿದ್ದ ಎಂಬ ಆರೋಪ ಸೋಮನ ಮೇಲೆ ಇದೆ. ಈಗಾಗಲೇ 5 ಲಕ್ಷ ರೂ. ಮುಂಗಡವಾಗಿ ಸ್ವೀಕರಿಸಿದ್ದ ಎನ್ನಲಾಗಿದೆ. ತನಿಖೆ ಮುಂದುವರಿದಿದ್ದು, ಹತ್ಯೆಗೆ ಸುಪಾರಿ ನೀಡಿದ ವ್ಯಕ್ತಿಗೆ ಶೋಧ ನಡೆಸುತ್ತಿದ್ದಾರೆ.
ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಭರತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಭರತ್ ರಾಜೇಂದ್ರ ಹತ್ಯೆಯ ಸ್ಕೆಚ್ ರೂಪಿಸಿದ್ದ ಮತ್ತು ಮಾರ್ಗದರ್ಶನ ನೀಡಿದ್ದ ಎಂದು ಆರೋಪಿಸಲಾಗಿದೆ. ಭರತ್ ಪೊಲೀಸರ ಗಮನವನ್ನು ಬೇರೆಡೆ ತಿರುಗಿಸಲು ಹಾಗೂ ಸಾಕ್ಷ್ಯಗಳನ್ನು ನಾಶಪಡಿಸಲು ಮುಂದಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಸೋಮನ ಸೂಚನೆಯಂತೆ ಭರತ್ ಗ್ಯಾಂಗ್‌ಗೆ ನಾಯಕತ್ವ ನೀಡುತ್ತಿದ್ದ.
ಭರತ್ ಗ್ಯಾಂಗ್ ಮತ್ತು ಸೋಮ ನಡುವೆ ಸಂಪರ್ಕ ಸಾಧಿಸಿ, ಯಾರು ಎಲ್ಲಿ, ಯಾವಾಗ ಭೇಟಿಯಾಗಬೇಕು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದ. ರಾಜೇಂದ್ರನ ಚಲನವಲನಗಳ ಕುರಿತು ಮಾಹಿತಿ ಸಂಗ್ರಹಿಸಿ ಸೋಮನಿಗೆ ನೀಡುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅನಾಮಧೇಯ ಮೂಲಗಳಿಂದ ಲಭ್ಯವಾದ ಆಡಿಯೋದಲ್ಲಿ ರಾಜೇಂದ್ರನ ಹತ್ಯೆಗೆ ಸಂಬಂಧಿಸಿದ ಮಾತುಕತೆಗಳು ದಾಖಲಾಗಿದ್ದು, ಇದನ್ನು ಆಧರಿಸಿ ಸೋಮ, ಭರತ್, ಅಮಿತ್, ಗುಂಡ, ಮತ್ತು ಯತೀಶ್ ವಿರುದ್ಧ ಪ್ರಕರಣ ದಾಖಲಾಗಿರುವುದು ಬಹಿರಂಗವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ರಾಜೇಂದ್ರ ಅವರ ಮಗಳ ಜನ್ಮದಿನದ ದಿನವೇ ಹತ್ಯೆಯ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಹತ್ಯೆ ಆಗಲಿಲ್ಲ. ಇದರಿಂದಾಗಿ, ಮತ್ತೊಮ್ಮೆ ಕೊಲೆಗೆ ಸಂಚು ರೂಪಿಸಲಾಗಿತ್ತು. ಈ ಯೋಜನೆಗಾಗಿ ಹೊಸ ಕಾರು ಹಾಗೂ ಶಸ್ತ್ರಾಸ್ತ್ರ ಖರೀದಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳು ರಾಜೇಂದ್ರನ ಚಲನವಲನಗಳ ಮೇಲೆ ನಿಗಾ ಇಟ್ಟು, ಮಧುಗಿರಿ, ತುಮಕೂರು, ಬೆಂಗಳೂರು, ಮತ್ತು ಕಲಾಸಿಪಾಳ್ಯ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಮಾಹಿತಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.