
Rowing | ಅಂಟ್ಲಾಂಟಿಕ್ ಮಹಾಸಾಗರದಲ್ಲಿ ಏಕಾಂಗಿಯಾನ: ಜಿಎಸ್‌ಎಸ್ ಮೊಮ್ಮಗಳ ಸಾಧನೆಗೆ ಸಿಎಂ ಗುಣಗಾನ
ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ಚಾಮರಾಜನಗರ - ರಾಮಸಮುದ್ರದ ದೀನಬಂಧು ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿರುವ ಅನನ್ಯ ಪ್ರಸಾದ್ ಅವರ ಕಾಳಜಿ ಮೆಚ್ಚುವಂತದ್ದು ಎಂದು ಸಿಎಂ ಶ್ಲಾಘಿಸಿದರು
ಅಶಕ್ತರು, ಅನಾಥರು, ದೀನರ ಶ್ರೇಯೋಭಿವೃದ್ಧಿಗಾಗಿ ಅತ್ಯಂತ ಕಠಿಣವಾದ ಸಮುದ್ರಯಾನ ಕೈಗೊಂಡಿದ್ದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮೊಮ್ಮಗಳಾದ ಅನನ್ಯಾ ಪ್ರಸಾದ್ ಅವರ ಸಾಧನೆ ಹಲವರಿಗೆ ಸ್ಫೂರ್ತಿದಾಯಕವಾಗಿದೆ.
ಅನಾಥ ಮಕ್ಕಳಿಗಾಗಿ ಸಮುದ್ರದ ದೈತ್ಯ ಅಲೆಗಳನ್ನು ಮೆಟ್ಟಿನಿಂತು ಬರೋಬ್ಬರಿ 3000ಕಿ.ಮೀ ರೋಯಿಂಗ್ ಕೈಗೊಂಡ ಅನನ್ಯಾ ಪ್ರಸಾದ್ ಅವರು ವಿಶ್ವದಾಖಲೆ ಬರೆಯುವ ಮೂಲಕ ಬಡ, ಅನಾಥ ಮಕ್ಕಳಿಗೆ ನೆರವಾಗಿದ್ದಾರೆ.
ಅನಾಥ ಮಕ್ಕಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ 'ದೀನಬಂಧು ಟ್ರಸ್ಟ್, ಅನಂತಾಶ್ರಮ' ಹಾಗೂ ಇಂಗ್ಲೆಂಡಿನಲ್ಲಿ ಮಾನಸಿಕ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪಿಸಿರುವ 'ಮಾನಸಿಕ ಆರೋಗ್ಯ ಪ್ರತಿಷ್ಠಾನ'ಕ್ಕೆ ಹಣ ಸಂಗ್ರಹಿಸುವ(ಫಂಡ್ ರೈಸಿಂಗ್) ಸಲುವಾಗಿ ಅನನ್ಯಾ ಪ್ರಸಾದ್ ಅವರು ಅತ್ಯಂತ ಕಠಿಣ 'ಸೋಲೋ ರೋಯಿಂಗ್' ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಅನನ್ಯಾ ಸಾಧನೆಗೆ ಸಿಎಂ ಅಭಿನಂದನೆ
ಅಟ್ಲಾಂಟಿಕ್ ಮಹಾಸಾಗರವನ್ನು ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡುತ್ತಾ ದಾಟಿ ದಾಖಲೆ ಮಾಡಿದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್ ಅವರನ್ನು ಸಿಎಂ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಶನಿವಾರ ಬೆಂಗಳೂರಿನ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ತಮ್ಮನ್ನು ಭೇಟಿಯಾಗಿದ್ದ ಅನನ್ಯಾ ಪ್ರಸಾದ್ ಅವರಿಗೆ ಶುಭ ಹಾರೈಸಿದರು.
ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ಚಾಮರಾಜನಗರ - ರಾಮಸಮುದ್ರದ ದೀನಬಂಧು ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿರುವ ಅನನ್ಯ ಪ್ರಸಾದ್ ಅವರ ಕಾಳಜಿ ಮೆಚ್ಚುವಂತದ್ದು ಎಂದು ಸಿಎಂ ಶ್ಲಾಘಿಸಿದರು.
ದೀನಬಂಧು ಕಾರ್ಯವೇನು?
ದೀನಬಂಧು ಎಲ್ಲಾ ಜಾತಿ, ಧರ್ಮ ಮತ್ತು ಧರ್ಮದ ಅನಾಥ ಮತ್ತು ನಿರ್ಗತಿಕ ಮಕ್ಕಳ ಕಲ್ಯಾಣಕ್ಕೆ ಬದ್ಧವಾಗಿರುವ ಸ್ವಯಂಸೇವಾ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು 1992 ರಲ್ಲಿ ಪ್ರೊ. ಜಿ.ಎಸ್.ಜಯದೇವ್ ಅವರು ಚಾಮರಾಜನಗರದಲ್ಲಿ ಸ್ಥಾಪಿಸಿದ್ದರು.
ದೀನಬಂಧು ಸಂಸ್ಥೆ ಮೊದಲು ಆರು ಮಂದಿ ಬಾಲಕರ ಸಣ್ಣ ಗುಂಪಿನೊಂದಿಗೆ ಆರಂಭವಾಯಿತು. ಈಗ ದೀನಬಂಧು ಮಕ್ಕಳ ಮನೆಯು 40 ಬಾಲಕರು ಮತ್ತು 40 ಬಾಲಕಿಯರನ್ನು ಪೋಷಿಸುತ್ತಿದೆ.
ಟ್ರಸ್ಟ್ ನೆರೆಯ ಹಳ್ಳಿಗಳ ಮಕ್ಕಳಿಗಾಗಿ ಶಾಲೆಯನ್ನೂ ನಡೆಸುತ್ತಿದೆ. ಎಲ್‌ಕೆಜಿಯಿಂದ 10 ನೇ ತರಗತಿಯವರೆಗೆ ಮತ್ತು ಹಿಂದುಳಿದ ಹಿನ್ನೆಲೆಯ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ಒದಗಿಸುತ್ತಿದೆ. ಇಂಡೋ-ಮಿಮ್ ಕಾರ್ಖಾನೆಯು ಶಾಲೆಯ ವೆಚ್ಚಗಳನ್ನು ನೋಡಿಕೊಳ್ಳುತ್ತಿದೆ. ಹೆಚ್ಚುವರಿಯಾಗಿ, ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಅನುಭವಿ ಕಲಿಕೆ ಉತ್ತೇಜಿಸಲು ದೀನಬಂಧು ಶಿಕ್ಷಕ ಸಂಪನ್ಮೂಲ ಕೇಂದ್ರ (ಟಿಆರ್‌ಸಿ) ಆರಂಭಿಸಲಾಗಿದೆ. ಪ್ರಸ್ತುತ, ಟಿಆರ್‌ಸಿ 240 ಸರ್ಕಾರಿ ಶಾಲೆಗಳಿಂದ 200 ಕ್ಕೂ ಹೆಚ್ಚು ಶಿಕ್ಷಕರೊಂದಿಗೆ ಸಹಯೋಗ ಹೊಂದಿದ್ದು, ಸುಮಾರು 10,000 ವಿದ್ಯಾರ್ಥಿಗಳಿಗೆ ಪ್ರಯೋಜನ ನೀಡುತ್ತದೆ.
52 ದಿನ ಸಮುದ್ರಯಾನ
ಎರಡನೇ ದೊಡ್ಡ ಮಹಾಸಾಗರವಾದ ಅಟ್ಲಾಂಟಿಕವು ಭೂಮಿಯ ಐದನೇ ಒಂದು ಭಾಗದ ನೀರಿನಿಂದ ಆವರಿಸಿದೆ. ಅಮೆರಿಕಾ ಭೂಖಂಡ, ಯೂರೋಪ್ ಹಾಗೂ ಆಫ್ರಿಕಾ ಖಂಡಗಳ ನಡುವೆ ವಿಸ್ತರಿಸಿಕೊಂಡಿದೆ. ಇಂತಹ ಭಯಾನಕ ಸಾಗರದಲ್ಲಿ ಅನನ್ಯಾ ಪ್ರಸಾದ್ ಏಕಾಂಗಿಯಾಗಿ ಯಾನ ಕೈಗೊಂಡು ಬಡವರ ಪರ ಇರುವ ಕಾಳಜಿ ಮೆರೆದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅನನ್ಯ ಪ್ರಸಾದ್ ಅವರು ಒಬ್ಬಂಟಿಯಾಗಿ ಸಮುದ್ರ ರೋಯಿಂಗ್ ನಡೆಸಿ ಅಟ್ಲಾಂಟಿಕ್ ಸಮುದ್ರದಲ್ಲಿ 3000ಕಿ.ಮೀ ದೂರವನ್ನು ಯಶಸ್ವಿಯಾಗಿ ಕ್ರಮಿಸಿದ ಮೊದಲ ಏಷಿಯನ್ ಮಹಿಳೆ ಎಂಬ ದಾಖಲೆಗೆ ಪಾತ್ರರಾಗಿದ್ದರು. ಅನನ್ಯ ಅವರು ಕೇವಲ 52 ದಿನ 5 ಗಂಟೆ 44 ನಿಮಿಷಗಳಲ್ಲಿ 3000 ಕಿ.ಮೀ ರೋಯಿಂಗ್ ಮಾಡಿದ್ದರು.
ಡಿ.11ರಂದು ಸ್ಪೇನ್ ದೇಶದ ಕ್ಯಾನರಿ ದ್ವೀಪದಲ್ಲಿರುವ ಲಾ ಗೊಮೆರಾದಿಂದ ರೋಯಿಂಗ್ ಆರಂಭಿಸಿದ ಅನನ್ಯಾ ಅವರು ಜ.1 ರಂದು ಕೆರಿಬಿಯನ್ ನಾಡಿನ ಆಂಟಿಗುವಾ ದ್ವೀಪದಲ್ಲಿ ಯಶಸ್ವಿಯಾಗಿ ಸಮುದ್ರಯಾನ ಪೂರೈಸಿದರು. (ಸಮುದ್ರಯಾನದಲ್ಲಿ ತಲುಪುವ ಗುರಿ, ಬೋಟು ಚಲಿಸುವ ವೇಗ, ಒಟ್ಟು ಪ್ರಯಾಣದ ಅವಧಿ ಆಧಾರದ ಮೇಲೆ ದಿನ ಪರಿಗಣಿಸಲಾಗುತ್ತದೆ).
ಭಾರತೀಯ ನಾರಿಯ ಶಕ್ತಿ ಪ್ರದರ್ಶಿಸಲು ಸಾಧನೆ
ತಮ್ಮ ಸಾಧನೆ ಕುರಿತು ಪ್ರತಿಕ್ರಿಯಿಸಿದ್ದ ಅನನ್ಯಾ ಪ್ರಸಾದ್ ಅವರು, "ಚಿಕ್ಕಂದಿನಿಂದಲೂ ಪ್ರಕೃತಿಯೊಂದಿಗೆ ಒಡನಾಟ ಇರಿಸಿಕೊಂಡಿದ್ದೆ. ರೋಯಿಂಗ್ ಸ್ಪರ್ಧೆಯಲ್ಲಿ ಭಾರತದ ಮಹಿಳೆಯರು ಪಾಲ್ಗೊಳ್ಳುವುದು ಕಷ್ಟ ಎಂಬ ಅಭಿಪ್ರಾಯವನ್ನು ಸುಳ್ಳಾಗಿಸಲು ನಿರ್ಧರಿಸಿ ಕಠಿಣ ತರಬೇತಿ ಪಡೆದೆ. ಇದನ್ನೇ ಸವಾಲಾಗಿ ಸ್ವೀಕರಿಸಿ ಸಮುದ್ರ ರೋಯಿಂಗ್, ಮೌಂಟೇನ್ ರೋಯಿಂಗ್ ಕಲಿತೆ. ಏಕಾಂಗಿ ರೋಯಿಂಗ್‌ನಲ್ಲಿ ಎಲ್ಲವನ್ನೂ ನಾವೇ ನಿಭಾಯಿಸಬೇಕಿತ್ತು. ಇದೆಲ್ಲವನ್ನು ಕಲಿತಿದ್ದರಿಂದ ಏಕಾಂಗಿ ಯಾನ ಯಶಸ್ವಿಯಾಯಿತು" ಎಂದು ಅನನ್ಯ ಹೇಳಿದ್ದರು.
ಒಬ್ಬಂಟಿಯಾಗಿ ಪ್ರಯಾಣಿಸುವಾಗ ಸ್ಯಾಟಲೈಟ್ ಫೋನ್ ಇರುತ್ತದೆ. ನಮ್ಮ ಬೋಟ್ ಅನ್ನು ಟ್ರ್ಯಾಕ್ ಮಾಡಲಾಗುತ್ತಿರುತ್ತದೆ. ಅಪಾಯ ಎದುರಾದಾಗ ತುರ್ತು ಸಿಬ್ಬಂದಿ ನೆರವಿಗೆ ಧಾವಿಸುತ್ತಾರೆ. ಇನ್ನು ಬೋಟ್‌ನಲ್ಲಿ ರೋಯಿಂಗ್ ಮುಗಿಸಿ, ಕ್ಯಾಬಿನ್‌ನಲ್ಲಿ ಮಲಗುತ್ತಿದ್ದೆ. ದೇಹಕ್ಕೆ ಅಗತ್ಯ ಕ್ಯಾಲೊರಿ, ಪ್ರೋಟಿಸ್ ಒದಗಿಸಲು ಆಹಾರ ಸಾಮಾಗ್ರಿಗಳನ್ನು ಜೊತೆಯಲ್ಲೇ ಕೊಂಡೊಯ್ದಿದ್ದೆ ಎಂದು ವಿವರಿಸಿದ್ದಾರೆ.
ಸಮುದ್ರದಲ್ಲಿ ತೆರಳುವಾಗ ಆಕಾಶ ಹಾಗೂ ನೀರೇ ನಮ್ಮ ಮನೆಯಾಗಿರುತ್ತದೆ. ಜಲಚರಗಳಿಂದ ಯಾವುದೇ ಅಪಾಯ ಇರುವುದಿಲ್ಲ. ಆದರೆ, ಸಮುದ್ರ ಸೃಷ್ಟಿಸುವ 25 ಅಡಿ ಎತ್ತರದ ಅಲೆಗಳೇ ಹೆಚ್ಚು ಅಪಾಯಕಾರಿ, ಅವುಗಳನ್ನು ನಿಭಾಯಿಸಿ ಮುಂದೆ ಹೋಗುವುದು ಸವಾಲು ಎನ್ನುತ್ತಾರೆ ಅನನ್ಯ ಪ್ರಸಾದ್.
2018ರಲ್ಲೂ ವಿಶ್ವದ ಕಠಿಣ ರೋಯಿಂಗ್ ರೇಸ್‌ನಲ್ಲಿ ಅನನ್ಯ ಭಾಗವಹಿಸಿದ್ದರು. ಅನನ್ಯ ಅವರ ರೋಯಿಂಗ್ ಸ್ಪರ್ಧೆಗೆ ಬೆಂಗಳೂರಿನ ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್, ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಗಳು ಪ್ರಯೋಜಕತ್ವ ವಹಿಸುವ ಮೂಲಕ ನೆರವಾಗಿದ್ದರು.