BBMP Tax: ವಾಣಿಜ್ಯ ಕಟ್ಟಡ, ಖಾಲಿ ನಿವೇಶನಕ್ಕೂ ಘನ ತ್ಯಾಜ್ಯ ಶುಲ್ಕ!
x

ಬಿಬಿಎಂಪಿ 

BBMP Tax: ವಾಣಿಜ್ಯ ಕಟ್ಟಡ, ಖಾಲಿ ನಿವೇಶನಕ್ಕೂ ಘನ ತ್ಯಾಜ್ಯ ಶುಲ್ಕ!

ಈ ಹೊಸ ನೀತಿಯು ಖಾಲಿ ಸ್ಥಳಗಳಿಗೂ ಅನ್ವಯವಾಗುವಂತಿದ್ದು, ಸುಮಾರು 46 ಲಕ್ಷ ಆಸ್ತಿ ಮಾಲೀಕರಿಗೆ ಘನ ತ್ಯಾಜ್ಯ ವಿಲೇವಾರಿ ಶುಲ್ಕ ಪಾವತಿಸುವ ಜವಾಬ್ದಾರಿ ಬಂದಿದೆ. ಬಿಬಿಎಂಪಿಯು ಈ ಉಪಕ್ರಮದಿಂದಾಗಿ 600 ಕೋಟಿ ರೂ ನಿಂದ 750 ಕೋಟಿ ರೂವರೆಗೆ ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಿದೆ.


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶನಿವಾರದಂದು ಹೊಸ ಆದೇಶ ಹೊರಡಿಸಿದ್ದು, ನಗರದಲ್ಲಿ ಇರುವ ವಸತಿ, ವಸತಿಯೇತರ ಮತ್ತು ವಾಣಿಜ್ಯ ಕಟ್ಟಡಗಳಿಂದ ಕಸದ ನಿರ್ವಹಣೆಗೆ ಬಳಕೆದಾರರ ಶುಲ್ಕ ವಿಧಿಸಲು ತೀರ್ಮಾನಿಸಿದೆ. ಇದು 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ಈ ಹೊಸ ನೀತಿಯು ಖಾಲಿ ಸ್ಥಳಗಳಿಗೂ ಅನ್ವಯವಾಗುವಂತಿದ್ದು, ಸುಮಾರು 46 ಲಕ್ಷ ಆಸ್ತಿ ಮಾಲೀಕರಿಗೆ ಘನ ತ್ಯಾಜ್ಯ ವಿಲೇವಾರಿ ಶುಲ್ಕ ಪಾವತಿಸುವ ಅನಿವಾರ್ಯತೆ ಎದುರಾಗಿದೆ. ಬಿಬಿಎಂಪಿಯು ಈ ಉಪಕ್ರಮದಿಂದಾಗಿ 600 ಕೋಟಿ ರೂ ನಿಂದ 750 ಕೋಟಿ ರೂಪಾಯಿವರೆಗೆ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಈ ಬಳಕೆದಾರರ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲಾಗುತ್ತದೆ. ಪರಿಣಾಮವಾಗಿ, ಒಟ್ಟು ಆಸ್ತಿ ತೆರಿಗೆ ದರ ಶೇಕಡಾ 30 ರಿಂದ 35 ಏರಿಕೆ ಆಗಬಹುದೆಂದು ಅಂದಾಜಿಸಲಾಗಿದೆ.

ಈ ಕ್ರಮದ ಕುರಿತು ನಗರಾಭಿವೃದ್ಧಿ ಇಲಾಖೆ ಮಾರ್ಚ್ 4ರಂದು ಒಪ್ಪಿಗೆ ನೀಡಿತ್ತು. ನಂತರ ಬಿಬಿಎಂಪಿಯು ವಿವಿಧ ಸ್ವತ್ತುಗಳ ಮಾಲೀಕರಿಗೆ ವಿಧಿಸಲಾಗುವ ಶುಲ್ಕದ ಪ್ರಮಾಣಗಳ ಬಗ್ಗೆ ಚರ್ಚೆ ನಡೆಸಿತ್ತು. ಈ ಚರ್ಚೆಯ ಬಳಿಕ ಏಪ್ರಿಲ್ 4ರಂದು ಆಡಳಿತಾಧಿಕಾರಿ ಎಸ್.ಆರ್. ಉಮಾಶಂಕರ್ ಅವರು ಅಂತಿಮ ಆದೇಶ ಹೊರಡಿಸಿದ್ದಾರೆ.

ಹಿಂದೆ ವಸತಿ ಕಟ್ಟಡಗಳಿಗೆ ಮಾತ್ರ ನಿಗದಿತ ಶುಲ್ಕವಿತ್ತು. 600 ಚದರ ಅಡಿ ವಿಸ್ತೀರ್ಣದ ಮನೆಗಳಿಗೆ ತಿಂಗಳಿಗೆ 10ರೂ ಮತ್ತು 4,000 ಚದರ ಅಡಿಗಿಂತ ಹೆಚ್ಚಿರುವ ಮನೆಗಳಿಗೆ 400 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ವಸತಿಯೇತರ ಕಟ್ಟಡಗಳಿಗೆ 1,000 ಚದರ ಅಡಿ ವಿಸ್ತೀರ್ಣದ ಸ್ವತ್ತುಗಳಿಗೆ ತಿಂಗಳಿಗೆ 2,000 ರೂಪಾಯಿ ಪಾವತಿಸಬೇಕಾಗುತ್ತದೆ. 50,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣವಿರುವ ಕಟ್ಟಡಗಳಿಗೆ ಈ ಶುಲ್ಕವು 35 ಲಕ್ಷ ರೂಗಳವರೆಗೆ ಏರಿಕೆಯಾಗಲಿದೆ.

ಹೋಟೆಲ್‌ ಮತ್ತು ಲಾಡ್ಜ್‌ಗಳಿಗೆ 1,000 ಚದರ ಅಡಿ ವಿಸ್ತೀರ್ಣದ ಸಂದರ್ಭದಲ್ಲಿ ವರ್ಷಕ್ಕೆ 4,000 ರೂಪಾಯಿ ಮತ್ತು 50,000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ವರ್ಷಕ್ಕೆ 70 ಲಕ್ಷ ರೂ ಪಾವತಿಸಬೇಕಾಗುತ್ತದೆ. ತಾರಾ ಹೋಟೆಲ್‌ಗಳಲ್ಲಿ 10,000 ಚದರ ಅಡಿ ವಿಸ್ತೀರ್ಣದ ಹೋಟೆಲ್‌ಗಳಿಗೆ ವರ್ಷಕ್ಕೆ 95,000 ರೂ ಮತ್ತು 50,000 ಚದರ ಅಡಿಗಿಂತ ಹೆಚ್ಚಿದ್ದರೆ ವರ್ಷಕ್ಕೆ 87.5 ಲಕ್ಷ ರೂಪಾಯಿ ಬಳಕೆದಾರರ ಶುಲ್ಕ ಪಾವತಿಸಬೇಕು.

ಘನ ತ್ಯಾಜ್ಯ ವಿಲೇವಾರಿ ಬಳಕೆದಾರರ ಶುಲ್ಕವು ಸ್ವಂತ ಉಪಯೋಗದ ಸ್ವತ್ತುಗಳು, ಹೋಟೆಲ್, ಲಾಡ್ಜ್ ಮತ್ತು ತಾರಾ ಹೋಟೆಲ್‌ಗಳ ಉಪಯೋಗದ ಸ್ವತ್ತುಗಳಾಗಿದ್ದಲ್ಲಿ ಅವುಗಳ ಆಸ್ತಿ ತೆರಿಗೆಯ ಮೊತ್ತದ ಶೇಕಡ 60ರಷ್ಟನ್ನು ಮೀರುವಂತಿಲ್ಲ. ಬಾಡಿಗೆಗೆ ನೀಡಿದ ಸ್ವತ್ತುಗಳಿಗೆ ವಿಧಿಸುವ ಬಳಕೆದಾರರ ಶುಲ್ಕವನ್ನು ಆಸ್ತಿ ತೆರಿಗೆಯ ಮೊತ್ತದ ಶೇ 30ಕ್ಕೆ ಮಿತಿಗೊಳಿಸಲಾಗಿದೆ.

Read More
Next Story