ಗ್ಯಾರಂಟಿಗಳಿಂದ ಸಾಮಾಜಿಕ ನ್ಯಾಯ, ಅಭಿವೃದ್ಧಿಯಿಂದ ಸಮೃದ್ಧಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ
x

ಗ್ಯಾರಂಟಿಗಳಿಂದ ಸಾಮಾಜಿಕ ನ್ಯಾಯ, ಅಭಿವೃದ್ಧಿಯಿಂದ ಸಮೃದ್ಧಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ

ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿಎಂ ಹೇಳಿದರು.


"ನಮ್ಮ ಸರ್ಕಾರವು ಬಸವಾದಿ ಶರಣರ 'ನುಡಿದಂತೆ ನಡೆಯಬೇಕು' ಎಂಬ ಧ್ಯೇಯದಲ್ಲಿ ನಂಬಿಕೆಯಿಟ್ಟು, ಗ್ಯಾರಂಟಿ ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯವನ್ನು ಮತ್ತು ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಮೃದ್ಧ ಕರ್ನಾಟಕವನ್ನು ನಿರ್ಮಿಸುತ್ತಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ನಮ್ಮ ಸರ್ಕಾರದ ಪರಮ ಗುರಿ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 79ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾಡಿನ ಜನತೆಗೆ ಸಂದೇಶ ನೀಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್ ಸೇರಿದಂತೆ ಎಲ್ಲ ಮಹನೀಯರನ್ನು ಹಾಗೂ ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂತಹ ವೀರರನ್ನು ಸ್ಮರಿಸಿದ ಅವರು, ದೇಶ ನಿರ್ಮಾಣದಲ್ಲಿ ಉತ್ಪಾದಕ ವರ್ಗ ಹಾಗೂ ದೇಶ ರಕ್ಷಣೆಯಲ್ಲಿ ಸೈನಿಕ ವರ್ಗದ ಕೊಡುಗೆಯನ್ನು ಕೊಂಡಾಡಿದರು.

ಅಸಮಾನತೆ ಅಳಿಸಲು ಗ್ಯಾರಂಟಿಗಳ ಯಶಸ್ಸು

ದೇಶದಲ್ಲಿ ಸಂಪತ್ತಿನ ಅಸಮಾನ ಹಂಚಿಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, "ದೇಶದ ಶೇ.10ರಷ್ಟು ಶ್ರೀಮಂತರ ಬಳಿ ಶೇ.80ರಷ್ಟು ಸಂಪತ್ತು ಶೇಖರಣೆಯಾಗಿದೆ. ಈ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ," ಎಂದರು. ಈ ಯೋಜನೆಗಳಿಗೆ ಈವರೆಗೆ 96,000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚ ಮಾಡಲಾಗಿದ್ದು, ಇವು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಜನರನ್ನು ತಲುಪಿವೆ. ಈ ಯೋಜನೆಗಳಿಂದಾಗಿ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇ.23ರಷ್ಟು ಹೆಚ್ಚಾಗಿದ್ದು, ನಮ್ಮ 'ಕರ್ನಾಟಕ ಅಭಿವೃದ್ಧಿ ಮಾದರಿ'ಗೆ ವಿಶ್ವಸಂಸ್ಥೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ ಎಂದು ಸಂತಸ ಹಂಚಿಕೊಂಡರು.

ಕೃಷಿ, ಕೈಗಾರಿಕೆ ಹಾಗೂ ಶಿಕ್ಷಣಕ್ಕೆ ಬಲ

ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಹೇಳಿದ ಸಿಎಂ, "ಕೃಷಿ ವಲಯಕ್ಕೆ 51,339 ಕೋಟಿ ರೂ. ಅನುದಾನ ನೀಡಿದ್ದೇವೆ. ಎಪಿಎಂಸಿಗಳನ್ನು ಬಲಪಡಿಸಿದ್ದರಿಂದ ಕೃಷಿ ಉತ್ಪನ್ನಗಳ ಆವಕದಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ," ಎಂದರು. ಕೈಗಾರಿಕಾ ಕ್ಷೇತ್ರದಲ್ಲಿ 10 ಲಕ್ಷ ಕೋಟಿ ರೂ.ಗೂ ಅಧಿಕ ಹೂಡಿಕೆಯಾಗಿದ್ದು, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ದೇಶಕ್ಕೆ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು. ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ 65,000 ಕೋಟಿ ರೂ. ಮೀಸಲಿಡಲಾಗಿದ್ದು, ಪ್ರೊ. ಸುಖ್ದೇವ್ ಥೋರಟ್ ನೇತೃತ್ವದ ಆಯೋಗದ ವರದಿಯ ಅನ್ವಯ ರಾಜ್ಯದ್ದೇ ಆದ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು.

ಬೆಂಗಳೂರು ಅಭಿವೃದ್ಧಿ ಮತ್ತು ಮೂಲಸೌಕರ್ಯ

ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 1,35,000 ಕೋಟಿ ರೂ.ಗಳಿಗೂ ಹೆಚ್ಚಿನ ವೆಚ್ಚದಲ್ಲಿ ಮೆಟ್ರೋ, ಡಬಲ್ ಡೆಕರ್ ರಸ್ತೆ, ಸುರಂಗ ರಸ್ತೆ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಾರ್ಷಿಕ 5,000 ಕೋಟಿ ರೂ. ಒದಗಿಸಲಾಗುತ್ತಿದ್ದು, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸರ್ಕಾರ ಆದ್ಯತೆ ನೀಡಿದೆ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 12,000 ಕಿ.ಮೀ.ಗೂ ಹೆಚ್ಚು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ಉಲ್ಲೇಖಿಸಿದ ಅವರು, "ನಾವು ಸಂವಿಧಾನದ ಉಳಿವಿಗಾಗಿ ಪಣ ತೊಡಬೇಕು. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಮೂಲಕ ಅಂಕಿ-ಅಂಶಗಳನ್ನು ಸಂಗ್ರಹಿಸಿ, ಅದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸುವುದು ನಮ್ಮ ಆದ್ಯತೆ," ಎಂದರು. ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಹಂಚಿಕೆಯ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಾದ ಅನಿವಾರ್ಯತೆಯನ್ನು ಅವರು ಪ್ರತಿಪಾದಿಸಿದರು.

ಕರ್ನಾಟಕವನ್ನು 'ಸರ್ವ ಜನಾಂಗದ ಶಾಂತಿಯ ತೋಟ'ವಾಗಿ ಉಳಿಸಿಕೊಂಡು, ಸಾಮರಸ್ಯದಿಂದ ಕೂಡಿದ ಸಶಕ್ತ ಭಾರತವನ್ನು ಕಟ್ಟೋಣ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

Read More
Next Story