Internal Reservation | ಒಳಮೀಸಲಾತಿ “ತಕ್ಕಡಿ”ಯಲ್ಲಿ ತೂಗದ ಸಾಮಾಜಿಕ ನ್ಯಾಯ
x

Internal Reservation | ಒಳಮೀಸಲಾತಿ “ತಕ್ಕಡಿ”ಯಲ್ಲಿ ತೂಗದ ಸಾಮಾಜಿಕ ನ್ಯಾಯ

ಒಳ ಮೀಸಲಾತಿ ಹಂಚಿಕೆಯಲ್ಲಿ ಸಾಮಾಜಿಕ‌ ನ್ಯಾಯ ಪರಿಪಾಲಿಸಿಲ್ಲ ಎಂಬ ಚರ್ಚೆ, ವ್ಯಾಖ್ಯಾನಗಳು ಈಗ ಆರಂಭವಾಗಿವೆ. ಮೀಸಲಾತಿ ವಂಚಿತ ಅಲೆಮಾರಿ ಸಮುದಾಯಗಳು ಈಗ ಹೋರಾಟಕ್ಕೂ ಅಣಿಯಾಗುತ್ತಿವೆ.


ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ಜಾರಿಯಾಗಬೇಕಾಗಿದ್ದ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಒಳ ಮೀಸಲಾತಿ ವರದಿ ರಾಜಕೀಯ ಹಿತಾಸಕ್ತಿಗೆ ಒಳಗಾಗಿದೆ.

ಒಳ ಮೀಸಲಾತಿ ಹಂಚಿಕೆಯಲ್ಲಿ ಸಾಮಾಜಿಕ‌ ನ್ಯಾಯ ಪರಿಪಾಲಿಸಿಲ್ಲ ಎಂಬ ಚರ್ಚೆ, ವ್ಯಾಖ್ಯಾನಗಳು ಈಗ ಆರಂಭವಾಗಿವೆ. ಅದರಲ್ಲೂ ಅಲೆಮಾರಿ ಸಮುದಾಯಗಳನ್ನು ಕಡೆಗಣಿಸಿರುವುದಕ್ಕೆ ದಲಿತರಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಭಟನೆಗಳ ಹಾದಿಗೂ ಹೊರಳುತ್ತಿದೆ.

ಒಳ ಮೀಸಲಾತಿ ಆರಂಭದ ಹಾದಿ...

ಒಳ ಮೀಸಲಾತಿ ಒದಗಿಸುವ ಮೊದಲ ಗಂಭೀರ ಪ್ರಯತ್ನವನ್ನು 2005 ರಲ್ಲಿ ಅಂದಿನ ಸಿಎಂ ಧರಂ ಸಿಂಗ್ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಮಾಡಿತು. ಪ್ರಾಯೋಗಿಕ ದತ್ತಾಂಶವನ್ನು ಸಂಗ್ರಹಿಸಲು ಮತ್ತು ವಿವಿಧ ಎಸ್ಸಿ ಗುಂಪುಗಳ ನಡುವೆ ವಿತರಿಸಬೇಕಾದ ಮೀಸಲಾತಿ ಪ್ರಮಾಣವನ್ನು ಸೂಚಿಸಲು ಅದು ನ್ಯಾ. ಎ.ಜೆ ಸದಾಶಿವ ಆಯೋಗವನ್ನು ಸ್ಥಾಪಿಸಿತು. ಆಯೋಗವು 2012 ರಲ್ಲಿ ತನ್ನ ವರದಿಯನ್ನು ಯಡಿಯೂರಪ್ಪ ಅವರ ಉತ್ತರಾಧಿಕಾರಿ ಡಿ.ವಿ ಸದಾನಂದ ಗೌಡ ಅವರಿಗೆ ಸಲ್ಲಿಸಿತು.

ಆಯೋಗವು ಪರಿಶಿಷ್ಟರನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿತು.

ಬಲಗೈ (ಹೊಲೆಯರು), ಎಡಗೈ (ಮಾದಿಗರು), ಸ್ಪೃಶ್ಯ ಸಮುದಾಯ (ಬೋವಿಗಳು, ಲಂಬಾಣಿಗಳು) ಮತ್ತು ಅಲೆಮಾರಿ ಜಾತಿಗಳು ಎಂಬ ಗುಂಪುಗಳನ್ನು ರಚಿಸಿತು. ಪರಿಶಿಷ್ಟರಿಗೆ ಒದಗಿಸಲಾಗಿದ್ದ ಒಟ್ಟು ಶೇ 15 ರಷ್ಟು ಮೀಸಲಾತಿಯಲ್ಲಿ ಕ್ರಮವಾಗಿ ಈ ನಾಲ್ಕೂ ಗುಂಪುಗಳಿಗೆ ಶೇ. 6, 5, 3 ಮತ್ತು 1 ರಷ್ಟು ಮೀಸಲಾತಿ ಹಂಚಿಕೆಗೆ ಶಿಫಾರಸು ಮಾಡಿತ್ತು. ಆದಾಗ್ಯೂ, ಸಮೀಕ್ಷೆಯನ್ನು ಸರಿಯಾಗಿ ಮಾಡಲಾಗಿಲ್ಲ. ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಗುಂಪುಗಳ ಕುರಿತಾದ ಗೊಂದಲಗಳನ್ನು ಅದು ಪರಿಹರಿಸಿಲ್ಲ ಎಂದು ಬಲಗೈ ಸಮುದಾಯವು ವರದಿಗೆ ವಿರೋಧ ವ್ಯಕ್ತಪಡಿಸಿತ್ತು.

ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿ ರಚನೆ

2022 ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಒಳ ಮೀಸಲಾತಿ ನೀಡುವ ಕುರಿತು ಶಿಫಾರಸುಗಳನ್ನು ಮಾಡಲು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿತು.

2023 ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು, ಸಮಿತಿಯು ತನ್ನ ವರದಿಯನ್ನು ನೀಡಿತು. ಇದರಲ್ಲಿ ಎಸ್ಸಿ ಎಡಗೈಗೆ ಶೇ. 6, ಎಸ್ಸಿ ಬಲಗೈಗೆ ಶೇ 5.5, ಎಸ್ಸಿ ಸ್ಪೃಶ್ಯರಿಗೆ (ಭೋವಿ, ಲಂಬಾಣಿ, ಕೊರಚ, ಕೊರಮ, ಇತ್ಯಾದಿ) ಶೇ.4.5 ಮತ್ತು ಅಲೆಮಾರಿ ಗುಂಪುಗಳಿಗೆ ಶೇ. 1 ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು.

ಬೊಮ್ಮಾಯಿ ಸರ್ಕಾರವು ಒಟ್ಟು ಪರಿಶಿಷ್ಟರ ಮೀಸಲಾತಿಯನ್ನು ಶೇ 15ರಿಂದ ರಿಂದ 17 ಕ್ಕೆ ಹೆಚ್ಚಿಸುವ ನಿರ್ಧಾರವನ್ನು ಪರಿಗಣಿಸಲಾಗಿತ್ತು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿಂದುಳಿದಿರುವಿಕೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕಿರುವುದು ಇಂದಿನ ಅವಶ್ಯಕತೆ, ಒಳ ಮೀಸಲಾತಿಯ ಸದಾಶಯವೂ ಅದೇ. ಕಳೆದ 35 ವರ್ಷಗಳಿಂದ ಒಳಮೀಸಲಾತಿಗಾಗಿ ನಿರಂತರ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನನ್ವಯ ರಾಜ್ಯದಲ್ಲಿ ರಚನೆಯಾದ ನ್ಯಾ.ನಾಗಮೋಹನ್ ದಾಸ್ ಅವರ ಏಕ ವ್ಯಕ್ತಿ ಆಯೋಗ ಸುದೀರ್ಘವಾಗಿ ಅಧ್ಯಯನ ಹಾಗೂ ಸಮೀಕ್ಷೆಯನ್ನು ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಮೇ 5 ರಿಂದ ಜುಲೈ 6 ರವರೆಗೆ ಆಯೋಗ ನಡೆಸಿರುವ ಹೊಸ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ರಾಜ್ಯದ ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು ಮತ್ತು 1,07,01,982 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.

2011ರಲ್ಲಿ ಕೇಂದ್ರ ಸರ್ಕಾರ ನಡೆಸಿರುವ ಜಾತಿಗಣತಿಯಲ್ಲಿ ಕರ್ನಾಟಕದಲ್ಲಿರುವ ಒಟ್ಟು ಪರಿಶಿಷ್ಟರ ಸಂಖ್ಯೆ ಒಂದು ಕೋಟಿ ನಾಲ್ಕು ಲಕ್ಷದ ಎಪ್ಪತ್ತು ನಾಲ್ಕು ಸಾವಿರದ ಒಂಬೈನೂರಾ ತೊಂಭತ್ತೆರಡು (1,04,74,992) 2025ರಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆಯಲ್ಲಿ ಭಾಗಿಯಾಗಿರುವುದು 1,07,01,982 ಜನರು. ಕಳೆದ ಹದಿನೈದು ವರ್ಷದಲ್ಲಿ ಪರಿಶಿಷ್ಟರಲ್ಲಿ ಹೆಚ್ಚಳವಾಗಿರುವ ಜನಸಂಖ್ಯೆ 2,23,990 ಮಾತ್ರ.

ಜನಸಂಖ್ಯೆ ಅಸ್ವಾಭಾವಿಕ ಏರಿಕೆ

ನ್ಯಾ.ನಾಗಮೋಹನ್ ದಾಸ್ ಸಲ್ಲಿಸಿರುವ ವರದಿಯಲ್ಲಿ ಬೇಡ ಜಂಗಮ ಮತ್ತು ಬುಡ್ಗ ಜಂಗಮ ಜಾತಿ ಸಂಖ್ಯೆ ಅಸ್ವಾಭಾವಿಕವಾಗಿ ಏರಿಕೆಯಾಗಿರುವುದನ್ನು ಗಮನಿಸಿದ್ದು ಅದಕ್ಕೆ ನೀಡಿರುವ ಕಾರಣ ಭಾರತದ ಫಲವಂತಿಕೆ ದರ(ಟಿಎಫ್ ಆರ್) 2.0 ಇದೆ. ಇದರಂತೆ 2011ರಲ್ಲಿ 1.17,426 ಜನಸಂಖ್ಯೆ ಇರುವ ಬೇಡ ಜಂಗಮ ಮತ್ತು ಬುಡ್ಗ ಜಂಗಮ ಜನಸಂಖ್ಯೆ 2025ಕ್ಕೆ 1,44,387ರಷ್ಟು ಇರಬೇಕು. ಅದು ಅಸ್ವಾಭಾವಿಕವಾಗಿ ಏರಿಕೆಯಾಗಿರುವುದರಿಂದ 3,22,049 ರಷ್ಟಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಭಾರತದ ಒಟ್ಟು ಫಲವಂತಿಕೆ ದರ (ಟಿಎಫ್ ಆರ್) ನಂತೆ ಲೆಕ್ಕಹಾಕಿದರೆ 2011ರಲ್ಲಿ ಇರುವ ಪರಿಶಿಷ್ಟರ ಸಂಖ್ಯೆ 1,04,74,992 ಆದರೆ 2025ಕ್ಕೆ ಅದು ಎಷ್ಟಿರಬೇಕು. ಆಯೋಗದ ವರದಿಯಲ್ಲಿ ಉಲ್ಲೇಖವಾಗಿರುವಂತೆ 2011ಮತ್ತು 2025ರ ನಡುವೆ ಆಗಿರುವ ಪರಿಶಿಷ್ಟರ ಸಂಖ್ಯೆ ಕೇವಲ 2,23,990 ಎನ್ನುವುದು ಗಮನಾರ್ಹ.

ಒಳ ಮೀಸಲಾತಿಯಲ್ಲಿ ಎಡಗೈ ಸಮುದಾಯಕ್ಕೆ 2011ರಿಂದಲೂ ನಿಗದಿಯಾಗಿರುವುದು ಶೇ.6, ಜನಸಂಖ್ಯೆ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವಿಕೆ ಆಧಾರದ ಮೇಲೆ ಒಳಮೀಸಲಾತಿ ಕಲ್ಪಿಸುವುದಾದರೇ ಮಾದಿಗ ಸಂಬಂಧಿತ ಜಾತಿಗಳಲ್ಲಿಯೇ ಅತಿ ಹೆಚ್ಚು ಹಿಂದುಳಿದಿರುವ ಜಾತಿಗಳಾದ ಅರುಂಧತಿಯಾರ್, ಮೋಚಿ, ಮಚಿಗಾರ್, ಚಮ್ಮಾರ್, ಚಮಗಾರ್, ಡೋರ್ ಕಕ್ಕಯ್ಯ ಜಾತಿಗಳ ಹಿಂದುಳಿದಿರುವಿಕೆಯನ್ನು ಆಯೋಗ ಗುರುತಿಸಿದೆ.

ಬಲಗೈ ಸಮುದಾಯಕ್ಕೆ 2011ರಲ್ಲಿ ಶೇ.5, 2022ರಲ್ಲಿ ಶೇ.5.5 ಈಗ ಶೇ.5ರಷ್ಟು ಮೀಸಲಾತಿಯನ್ನು ನೀಡಬಹುದೆಂದು ಆಯೋಗ ವರದಿ ನೀಡಿದೆ.

ಬಲಗೈ ಸಮುದಾಯದಲ್ಲಿ ಆದಿಕರ್ನಾಟಕ, ಹೊಲಯ, ಹೊಲೆಯ, ಚಲವಾದಿ, ಆದಿದ್ರಾವಿಡ, ರಾನೆಯಾರ್ ಸಮುದಾಯಗಳು ಅತಿಹೆಚ್ಚು ಸೌಲಭ್ಯಗಳನ್ನು ಬಳಸಿಕೊಂಡಿರುವುದನ್ನು ಆಯೋಗ ಗುರುತಿಸಿದೆ. ಅದೇ ಬಲಗೈ ಸಮುದಾಯದಲ್ಲಿ ಬರುವ ಉಳಿದ 38 ಜಾತಿಗಳು 2011ರಿಂದ 2025ರವರೆಗೆ ಸರ್ಕಾರದ ಸೌಲಭ್ಯ ಪಡೆಯಲು ಆಗಿಲ್ಲ ಎನ್ನುವುದು ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತುಮಕೂರು, ಚಿತ್ರದುರ್ಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಾದಿಗ ಸಮುದಾಯ ಆದಿ ಕರ್ನಾಟಕ ಎಂದು ಗುರುತಿಸಿಕೊಂಡಿದೆ , ಹಾಗಾದರೆ ಆದಿಕರ್ನಾಟಕದ ಹೆಸರಿನಲ್ಲಿ ಗುರುತಿಸಿಕೊಂಡಿರುವ ಮಾದಿಗ ಸಮುದಾಯ ಇನ್ನು ಮುಂದೆ ಎಲ್ಲಿಂದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕಿದೆ.

ಆಯೋಗವೇ ಹೇಳಿರುವಂತೆ 2011ರ ಜನಗಣತಿಯಲ್ಲಿ ಆದಿ ಆಂಧ್ರ 26,486, ಆದಿ ಕರ್ನಾಟಕ 29,20,942, ಆದಿ ದ್ರಾವಿಡ 7,23,697, ಪರಿಶಿಷ್ಟ ಜಾತಿ 7,23,697 ಎಂದು ಹೇಳಿಕೊಂಡಿರುವ ಒಟ್ಟಾರೆ ಜನಸಂಖ್ಯೆ 44,66,745, 2011ರಲ್ಲಿಯೇ ನ್ಯಾ. ಸದಾಶಿವ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಒಳಜಾತಿಯ ಹೆಸರನ್ನು ಕಡ್ಡಾಯವಾಗಿ ನಮೂದಿಸಲು ತಿಳಿಸಿದಾಗಲೂ 24,22,864 ಜನರು ಒಳ ಜಾತಿಯನ್ನು ನಮೂದಿಸಿಲ್ಲ ಬದಲಾಗಿ ಆದಿ ಆಂದ್ರ 1,68,304, ಆದಿ ಕರ್ನಾಟಕ 10,78,994, ಆದಿ ದ್ರಾವಿಡ 5,73,246, ಪರಿಶಿಷ್ಟ ಜಾತಿ 6,02,320 ಒಟ್ಟು 24,22, 864 ಮಂದಿ ಜಾತಿ ಹಾಗೂ ಒಳಜಾತಿಯನ್ನು ನಮೂದಿಸಿದ್ದಾರೆ. 2025ರ ಸಮೀಕ್ಷೆಯಲ್ಲಿಯೂ 4,75,954 ಮಂದಿ ಈ ಗೊಂದಲ ಮುಂದುವರೆಸಿದ್ದರಿಂದಲೇ ನ್ಯಾ.ನಾಗಮೋಹನದಾಸ್ ಅವರು ಒಳಮೀಸಲಾತಿಯನ್ನು ಎಂದು ವರ್ಗೀಕರಿಸಿ ಶೇ.1ರಷ್ಟು ಒಳಮೀಸಲಾತಿ ಕಲ್ಪಿಸಲು ಶಿಫಾರಸ್ಸು ಮಾಡಿದ್ದರು.

ಆದಿಕರ್ನಾಟಕ, ಆದಿದ್ರಾವಿಡ ಹೆಸರಿನಲ್ಲಿ ಮಾದಿಗ ಮತ್ತು ಹೊಲೆಯ ಸಂಬಂಧಿತ ಜಾತಿಗಳು ರಾಜ್ಯದಲ್ಲಿ ಗುರುತಿಸಿಕೊಂಡಿದ್ದು, ಈಗ ಪ್ರಸ್ತಾವಿಸಲಾಗಿರುವ ಒಳ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯ ಸರಿಯಾಗಿ ತೂಗದಂತಾಗಲೂ ಇದು ಸಹ ಪ್ರಮುಖ ಕಾರಣವೆಂದೇ ಹೇಳಬೇಕಿದೆ.

ಎಡಗೈ ಮತ್ತು ಬಲಗೈ ಸಂಬಂಧಿತ ಜಾತಿಗಳನ್ನು ಸಂಪೂರ್ಣವಾಗಿ ವಿಂಗಡಿಸದ ಹೊರತು ನಿರ್ದಿಷ್ಟವಾಗಿ ಜನಸಂಖ್ಯೆಯೂ ಲಭ್ಯವಾಗುವುದಿಲ್ಲ, ಹಿಂದುಳಿದಿರುವಿಕೆಯನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಪ್ರಸ್ತುತ ಸಲ್ಲಿಕೆಯಾಗಿರುವ ಒಳಮೀಸಲಾತಿ ಪ್ರಸ್ತಾಪ ತಾತ್ಕಾಲಿಕವಾಗಿದ್ದು, ಕೇಂದ್ರ ಸರ್ಕಾರ 2028ರಲ್ಲಿ ನಡೆಸುವ ಸಾರ್ವತ್ರಿಕ ಜನಗಣತಿ ನಂತರ ಈಗ ನಿಗದಿಯಾಗಿರುವ ಮೀಸಲಾತಿ ಪ್ರಮಾಣವನ್ನು ಬದಲಿಸಲು ಮತ್ತೊಂದು ಹೋರಾಟವೇ ನಡೆಯಬೇಕಿದೆ.

Read More
Next Story