ನಾಳೆಯಿಂದ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ
x

ನಾಳೆಯಿಂದ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಶನಿವಾರದಿಂದ ಆರಂಭಿಸುತ್ತಿದೆ. ಮೀಟರ್ ರೀಡರುಗಳು ಮನೆಗಳನ್ನು ಜಿಯೋಟ್ಯಾಗಿಂಗ್ ಮೂಲಕ ಕಾರ್ಯ ಪ್ರಾರಂಭಿಸಲಿದೆ.


ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಶನಿವಾರದಿಂದ ಆರಂಭಿಸುತ್ತಿದೆ. ವಿದ್ಯುತ್‌ ಮೀಟರ್ ರೀಡರುಗಳು ಎಲ್ಲ ಮನೆಗಳನ್ನು ಜಿಯೋಟ್ಯಾಗಿಂಗ್ ಮಾಡುವ ಕಾರ್ಯ ಪ್ರಾರಂಭಿಸಲಿದೆ.

ಆಯೋಗವು ಯಾವುದೇ ಮನೆಗಳು ತಪ್ಪಿ ಹೋಗದಂತೆ ಯಶಸ್ವಿಯಾಗಿ ಸಮೀಕ್ಷೆ ಕೈಗೊಳ್ಳಲು ರಾಜ್ಯದ ಜನತೆ ಸಹಕರಿಸಬೇಕು. ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸುವ ಬದ್ಧತೆಯೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆಯೋಗದ ಅಧ್ಯಕ್ಷ ಮಧುಸೂಧನ್ ಆರ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಕೆಲಸಗಳಾಗಿರುವ ಮನೆ ಪಟ್ಟಿ ಮತ್ತು ಅವುಗಳ ನಕ್ಷೆ (ಮ್ಯಾಪಿಂಗ್) ಸಿದ್ಧಪಡಿಸುವ ಕಾರ್ಯವನ್ನು ಒಳಗೊಂಡಿರುತ್ತದೆ. ಅದು ರಾಜ್ಯಾದ್ಯಂತ ಎಲ್ಲಾ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆಗಳನ್ನು ನೀಡುವುದು ಮತ್ತು ಮ್ಯಾಪಿಂಗ್ ಮಾಡುವ ಕೆಲಸವನ್ನು ಸಾಧ್ಯವಾಗಿಸುತ್ತದೆ. ರಾಜ್ಯದಲ್ಲಿರುವ ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕವಿರುವುದರಿಂದ ವಾಸದ ಮನೆಗಳ ಆರ್. ಆರ್. ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷೆ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಇದು ಎರಡನೇ ಹಂತದಲ್ಲಿ ಸಮೀಕ್ಷೆಯ ಕಾರ್ಯವನ್ನು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುತ್ತದೆ. ಎರಡನೇಯ ಹಂತದ ಸಮೀಕ್ಷೆಯ ಕಾರ್ಯವನ್ನು ದಸರಾ ರಜೆಯ ಅವಧಿಯಲ್ಲಿ ಸೆ.22 ರಿಂದ ಅ.7 ರವರೆಗೆ ನಡೆಸಲು ಗುರಿ ಹೊಂದಲಾಗಿದೆ. ಈ ಸಮಯದಲ್ಲಿ ಶಾಲಾ ರಜಾದಿನಗಳು ಇರುವುದರಿಂದ ಸಮೀಕ್ಷೆ ಕಾರ್ಯಕ್ಕೆ ಪೂರಕವಾಗುತ್ತದೆ ಎಂದಿದ್ದಾರೆ.

ಇ-ಆಡಳಿತ ಮತ್ತು ಇಂಧನ ಇಲಾಖೆಗಳು ವಿದ್ಯುಚ್ಛಕ್ತಿ ಮೀಟರ್ ಸಂಪರ್ಕದ (ಆ‌ರ್.ಆ‌ರ್. ನಂಬರ್) ಆಧಾರದ ಮೇಲೆ ವಿನ್ಯಾಸಗೊಳಿಸಿದ ಈ ನವೀನ, ಕ್ರಿಯಾತ್ಮಕ ಮತ್ತು ವಿಶಿಷ್ಟ ವ್ಯವಸ್ಥೆಯು ಉತ್ತಮವಾಗಿದೆ. ಅದಕ್ಕನುಗುಣವಾಗಿ ಒಂದು ಅಗತ್ಯವಾದ 'ಆ್ಯಪ್' ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು ಸೇರಿದಂತೆ, ಆಯೋಗದ ಇಂಧನ ಇಲಾಖೆಯ, ಇ.ಡಿ.ಸಿ.ಎಸ್ ಸಂಸ್ಥೆಯ ಉತ್ಸಾಹಿ ಹಾಗೂ ಸೃಜನಶೀಲ ಸಲಹಾ ತಂಡದ ಸಹಕಾರದೊಂದಿಗೆ ಈ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿದೆ. ಸಮೀಕ್ಷೆಯ ಕಾರ್ಯವನ್ನು ತ್ವರಿತವಾಗಿ ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿರುವ ಇಂಧನ ಇಲಾಖೆಯ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ 'ಮೀಟರ್ ರೀಡರ್' ಗಳನ್ನು ಒಳಗೊಂಡಿರುತ್ತದೆ. ಕರ್ನಾಟಕ ರಾಜ್ಯವು ಎಲ್ಲಾ ಮನೆಗಳನ್ನು ವಿದ್ಯುದ್ದೀಕರಣ ಗೊಳಿಸುವುದರಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯವಾಗಿರುವುದರಿಂದ ಎಸ್ಕಾಂಗಳ ಮೀಟರ್ ರೀಡರ್ ಗಳು, ಗ್ರಾಹಕರ ಮನೆ ಬಳಕೆ ವಿದ್ಯುತ್ ಸಂಪರ್ಕದ ಮೀಟರ್ ಅನ್ನು ಓದುವುದು ಮತ್ತು ಬಿಲಿಂಗ್ ಮಾಡುವುದರ ಜೊತೆಗೆ ಮನೆಗಳನ್ನು 'ಜಿಯೋ ಟ್ಯಾಗ್' ಮಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.

'ಬಿಲ್ಲಿಂಗ್ ಸೈಕಲ್'ನಲ್ಲಿ ಮೀಟ‌ರ್ ರೀಡರ್ ಗಳು ಶನಿವಾರದಿಂದ ಕೆಲಸವನ್ನು ಪ್ರಾರಂಭಿಸುತ್ತಾರೆ ಮತ್ತು ಅಭಿವೃದ್ಧಿ ಪಡಿಸಲಾದ ಆ್ಯಪ್ ನಲ್ಲಿ ದಾಖಲಿಸುತ್ತಾರೆ. ಇದಾದ ನಂತರ ಪ್ರತಿ ಮನೆಗೂ ಸ್ಟಿಕ್ಕರ್ ಅಂಟಿಸಿ ಸಮೀಕ್ಷಾ ದಾರರಿಗೆ ಮನೆಯ ಗುರುತಿಸುವಿಕೆ ಸುಲಭವಾಗುವಂತೆ ಮಾಡುತ್ತಾರೆ. ಪ್ರಸ್ತಾವಿತ ಸಮೀಕ್ಷೆಯು ಹಿಂದುಳಿದ ವರ್ಗಗಳು ಮತ್ತು ಇತರ ಎಲ್ಲಾ ಜನರ 'ದತ್ತಾಂಶಗಳನ್ನು ಸೆರೆಹಿಡಿಯುವುದು' ಮಾತ್ರವಲ್ಲದೆ, ಅಂದಾಜು 7 ಕೋಟಿ ಜನರಿಗೆ ಸರ್ಕಾರಿ ಇಲಾಖೆಗಳಿಂದ ಪ್ರಾರಂಭಿಸಲಾಗಿರುವ ಹಾಗೂ ಮುಂದೆ ಪ್ರಾರಂಭಿಸಲಿರುವ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಬಹುದಾದ ಉಪಯುಕ್ತ ದತ್ತಾಂಶವಾಗಲಿದೆ ಎಂದಿದ್ದಾರೆ.

ಮನೆ ಪಟ್ಟಿ ಕಾರ್ಯಾಚರಣೆಗಳ ಈ ಮೊದಲ ಹಂತವು ತುಂಬಾ ಸವಾಲಿನದ್ದಾಗಿದ್ದರೂ ರಾಜ್ಯದ ಎಲ್ಲಾ ಮನೆಗಳನ್ನು ಒಳಗೊಂಡಂತೆ ವ್ಯವಸ್ಥಿತವಾಗಿ ಸಮೀಕ್ಷೆಯನ್ನು ನಡೆಸುವ ಉದ್ದೇಶಕ್ಕಾಗಿ ಇದು ಬಹಳ ಪ್ರಮುಖ ಕಾರ್ಯವಾಗಿದೆ. ಆದ್ದರಿಂದ, ಸಾರ್ವಜನಿಕರು ಮತ್ತು ಪ್ರತಿಯೊಂದು ಕುಟುಂಬದ ಸದಸ್ಯರು ಮೀಟರ್ ರೀಡರ್ ಗಳಿಗೆ ವಹಿಸಲಾಗಿರುವ ಮನೆ ಪಟ್ಟಿ ಕೆಲಸವನ್ನು ಸುಗಮವಾಗಿ ಪೂರ್ಣಗೊಳಿಸುವ ದಿಸೆಯಲ್ಲಿ ಸಹಕರಿಸಲು ಮತ್ತು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.


Read More
Next Story