
ಕಾಲ್ತುಳಿತ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕರ್ನಾಟಕ ಹೈಕೋರರ್ಟ್‌ಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿಕೃಷ್ಣ ಮನವಿ ಮಾಡಿದ್ದಾರೆ.
Bangalore Stampede|ಸಿಬಿಐ ತನಿಖೆಗಾಗಿ ಹೈಕೋರ್ಟ್ ಮೊರೆ ಹೋದ ಸ್ನೇಹಮಯಿ ಕೃಷ್ಣ
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂ.4 ರಂದು ನಡೆದ ಕಾಲ್ತುಳಿತ ದುರಂತದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಮನವಿಯ ಜೊತೆಗೆ, ಘಟನೆ ನಡೆದ ದಿನದಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಯಾಣದ ದಾಖಲೆಗಳನ್ನು ಸಹ ಲಗತ್ತಿಸಿದ್ದಾರೆ.
ದೂರಿನಲ್ಲಿ ಏನಿದೆ?
ಸ್ನೇಹಮಯಿ ಕೃಷ್ಣ ಅವರು ತಮ್ಮ ದೂರಿನಲ್ಲಿ ಕಾಲ್ತುಳಿತ ಸಂಭವಿಸಿದ ದಿನದಂದು ಡಿಸಿಎಂ ಡಿ.ಕೆ. ಶಿವಕುಮಾರ್ ನಿಗದಿತ ಪ್ರವಾಸ ಪಟ್ಟಿ ಮತ್ತು ಅವರು ಸಂಚರಿಸಿದ ದಾಖಲೆಗಳನ್ನು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಘಟನೆ ನಡೆದ ದಿನದಂದು ಸಂಜೆ 4 ರವರೆಗೆ ಡಿ.ಕೆ. ಶಿವಕುಮಾರ್ ಅವರ ಕಾರ್ಯಕ್ರಮ ಕನಕಪುರದಲ್ಲಿ ನಿಗದಿಯಾಗಿತ್ತು. ನ್ಯಾಯಾಲಯದ ಕಟ್ಟಡ ನಿರ್ಮಾಣ ಕಾರ್ಯ ವೀಕ್ಷಿಸುವುದು ಕಾರ್ಯಕ್ರಮದ ಪಟ್ಟಿಯಲ್ಲಿತ್ತು.
ಪೂರ್ವ ನಿಗದಿಯಂತೆ ಸಂಜೆಯವರೆಗೂ ಕನಕಪುರದಲ್ಲಿಯೇ ಇರಬೇಕಿತ್ತು. ಆದರೆ, ಡಿ.ಕೆ. ಶಿವಕುಮಾರ್ ಅವರು ತಮ್ಮ ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲಿ ಇರದ ಆರ್‌ಸಿಬಿ ಆಟಗಾರರ ಸ್ವಾಗತಕ್ಕೆ ತೆರಳಿದ್ದೇಕೆ, ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಬೆಂಗಾವಲು ವಾಹನದಲ್ಲಿ ಕರೆತಂದಿದ್ದು ಏಕೆ ಎಂಬ ಪ್ರಶ್ನೆಗಳನ್ನು ಸ್ನೇಹಮಯಿ ಕೃಷ್ಣ ಎತ್ತಿದ್ದಾರೆ.
ಈ ಅನಿರೀಕ್ಷಿತ ಭೇಟಿಯ ಹಿಂದಿನ ಕಾರಣ ಮತ್ತು ಕಾಲ್ತುಳಿತ ಘಟನೆಗೆ ಇರುವ ಸಂಬಂಧದ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ. ಹಾಗಾಗಿ ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.
ಬೆಂಗಳೂರು ಕಾಲ್ತುಳಿತದಲ್ಲಿ 11 ಮಂದಿ ಸಾವು
ಕಳೆದ ಜೂನ್ 4ರಂದು ಆರ್‌ಸಿಬಿ ಗೆಲುವನ್ನು ಸಂಭ್ರಮಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಲಕ್ಷಾಂತರ ಅಭಿಮಾನಿಗಳು ನೆಚ್ಚಿನ ಆಟಗಾರರನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದು, ಜನಸಂದಣಿಯ ನಿಯಂತ್ರಣವಿಲ್ಲದೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು.