
Mysore MUDA Case | ಅಂತಿಮ ವರದಿಗೆ ಸ್ನೇಹಮಯಿ ಕೃಷ್ಣ ಆಕ್ಷೇಪ; ಮೇಲ್ಮನವಿ ಸಲ್ಲಿಸಲು ನಿರ್ಧಾರ
ಆತ್ಮಸಾಕ್ಷಿ ಮಾರಿಕೊಂಡ ಅಧಿಕಾರಿಗಳಷ್ಟೇ ಇಂತಹ ವರದಿ ನೀಡಲು ಸಾಧ್ಯ. ಯಾವ ಸಾಕ್ಷ್ಯಾಧಾರಗಳು ಆರೋಪ ಸಾಬೀತಾಗಲು ಪೂರಕವಾಗಿವೆ ಎಂಬ ಜ್ಞಾನವೂ ಇಲ್ಲದವರಂತೆ ನಡೆದುಕೊಂಡಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಟೀಕಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿ ನಾಲ್ವರಿಗೆ ಕ್ಲೀನ್ ಚಿಟ್ ನೀಡಿದ ಲೋಕಾಯುಕ್ತ ಪೊಲೀಸರ ಅಂತಿಮ ವರದಿ ಪ್ರಶ್ನಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ದೂರುದಾರ ಸ್ನೇಹಮಯಿ ಕೃಷ್ಣ ನಿರ್ಧರಿಸಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಬಿ-ರಿಪೋರ್ಟ್ ಸಲ್ಲಿಸುತ್ತಿರುವ ಕುರಿತು ನೋಟಿಸ್‌ನಲ್ಲಿ ಪ್ರಸ್ತಾಪಿಸಿದ ಲೋಕಾಯುಕ್ತ ಪೊಲೀಸರ ಕ್ರಮಕ್ಕೆ ತೀವ್ರ ವಾಗ್ದಾಳಿ ನಡೆಸಿದ ಸ್ನೇಹಮಯಿ ಕೃಷ್ಣ ಅವರು, ನಾನು ಮಾಡಿರುವ ಆರೋಪಗಳಿಗೆ ಸಾಕ್ಷ್ಯಗಳಿಲ್ಲ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. ಆತ್ಮಸಾಕ್ಷಿ ಮಾರಿಕೊಂಡ ಅಧಿಕಾರಿಗಳಷ್ಟೇ ಇಂತಹ ವರದಿ ನೀಡಲು ಸಾಧ್ಯ. ಯಾವ ಸಾಕ್ಷ್ಯಾಧಾರಗಳು ಆರೋಪ ಸಾಬೀತಾಗಲು ಪೂರಕವಾಗಿವೆ ಎಂಬ ಜ್ಞಾನವೂ ಇಲ್ಲದವರಂತೆ ನಡೆದುಕೊಂಡಿದ್ದಾರೆ ಎಂಬುದಕ್ಕೆ ಈ ಪ್ರಕರಣ ಜ್ವಲಂತ ನಿದರ್ಶನ. "ಪ್ರಭಾವ"ಕ್ಕೆ ಒಳಗಾದ ತನಿಖಾಧಿಕಾರಿಗಳಿಗೆ ಕನಿಷ್ಠ ತಿಳಿವಳಿಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಅವರು, “ಲೋಕಾಯುಕ್ತ ಪೊಲೀಸರ ತನಿಖೆಯ ಮೇಲೆ ವಿಶ್ವಾಸವಿಲ್ಲ ಎಂಬ ನನ್ನ ಆರೋಪವು ಅವರು ಸಿದ್ದಪಡಿಸಿರುವ ಅಂತಿಮ ವರದಿಯಿಂದಲೇ ಸಾಬೀತಾಗಿದೆ. ಮುಖ್ಯಮಂತ್ರಿಯವರ ಪ್ರಭಾವಕ್ಕೆ ಒಳಗಾಗಿ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ” ಎಂದು ದೂರಿದರು.
"ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪ್ರಭಾವ ಬೀರಿರುವ ಕುರಿತ ಅಂಶವನ್ನು ದೃಢಪಡಿಸುವ ತನಿಖಾ ವರದಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲೋಕಾಯುಕ್ತ ಪೊಲೀಸರೊಂದಿಗೆ ಹಂಚಿಕೊಂಡಿದ್ದರೂ ಕ್ಲೀನ್ ಚಿಟ್ ನೀಡಿರುವುದು ನಾಚಿಕೆಗೇಡು. ಸಂಪೂರ್ಣ ವರದಿಯನ್ನು ನನಗೆ ಒದಗಿಸದೇ ನೋಟಿಸ್‌ನಲ್ಲಿ ಬಿ ರಿಪೋರ್ಟ್ ಸಲ್ಲಿಸುವ ಕುರಿತು ಹೇಳಿದ್ದಾರೆ. ಲೋಕಾಯುಕ್ತರ ಅಂತಿ ವರದಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು" ಎಂದು ಹೇಳಿದರು.
ಹೈಕೋರ್ಟ್ ಮೆಟ್ಟಿಲೇರಿದ್ದ ಸ್ನೇಹಮಯಿ ಕೃಷ್ಣ
ಲೋಕಾಯುಕ್ತ ಪೊಲೀಸರ ತನಿಖೆಯ ಮೇಲೆ ವಿಶ್ವಾಸವಿಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ, ಲೋಕಾಯುಕ್ತ ವ್ಯವಸ್ಥೆ ತನಿಖೆಗೆ ಸಮರ್ಥವಾಗಿದೆ. ಈ ಹಂತದಲ್ಲಿ ಸಿಬಿಐ ತನಿಖೆಗೆ ವಹಿಸಲಾಗದು. ಎಲ್ಲಾ ಕಾಯಿಲೆಗಳಿಗೂ ಸಿಬಿಐ ಮದ್ದಲ್ಲ ಎಂದು ಹೇಳಿ ದೂರುದಾರರ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿತ್ತು. ಇದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಕೊಂಚ ರಿಲೀಫ್ ಸಿಕ್ಕಿತ್ತು.
ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು 2024 ಸೆ.24 ರಂದು ಹೈಕೋರ್ಟ್ ವಜಾಗೊಳಿಸಿತ್ತು. ಸಿಎಂ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಿರುವುದರಿಂದ ತನಿಖೆಗೆ ಗ್ನೀನ್ ಸಿಗ್ನಲ್ ನೀಡಿತ್ತು. ಅದಾದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು.
ಅದರಂತೆ ಮೈಸೂರು ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ, ಅವರ ಪತ್ನಿ, ಬಿ.ಎಂ.ಪಾರ್ವತಿ, ಭಾಮೈದ ಬಿ.ಎಂ. ಮಲ್ಲಿಕಾರ್ಜುನಸ್ವಾಮಿ ಹಾಗೂ ಜಮೀನಿನ ಮಾಲೀಕ ದೇವರಾಜು ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.