
ಹಾಸನಾಂಬ ದರ್ಶನೋತ್ಸವ ದರ್ಶನಕ್ಕೆ ಸುಗಮ ವ್ಯವಸ್ಥೆ : ಸಚಿವ ಕೃಷ್ಣಬೈರೇಗೌಡ
ಹಾಸನಾಂಬ ದರ್ಶನೋತ್ಸವ ಭಕ್ತಾದಿಗಳ ಸಾಗರೋಪಾದಿಯಲ್ಲಿ ಬರುತ್ತಿದ್ದು, ದರ್ಶನಕ್ಕೆ ಬಂದ ಜನರ ಸಂಖ್ಯೆ ದಾಖಲೆ ಮಟ್ಟವನ್ನು ತಲುಪಿದೆ. 1.2 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ.
ಹಾಸನಾಂಬ ದರ್ಶನೋತ್ಸವ ಭಕ್ತಾದಿಗಳ ಸಾಗರೋಪಾದಿಯಲ್ಲಿ ಬರುತ್ತಿದ್ದು, ದರ್ಶನಕ್ಕೆ ಬಂದ ಜನರ ಸಂಖ್ಯೆ ದಾಖಲೆ ಮಟ್ಟವನ್ನು ತಲುಪಿದೆ. ಶನಿವಾರ ರಾತ್ರಿ ವೇಳೆಗೆ 1.2 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಜಾತ್ರಾ ಮಹೋತ್ಸವದ ವ್ಯವಸ್ಥೆಗಳು ಯೋಜನೆಯಂತೆ ಸುಗಮವಾಗಿ ನಡೆಯುತ್ತಿವೆ ಎಂದು ಹಾಸನ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ದೇವಾಲಯದಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದ ಸಚಿವ ಕೃಷ್ಣಬೈರೇಗೌಡ, ಭಕ್ತಾದಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸುಸಜ್ಜಿತ ಕ್ರಮ ಕೈಗೊಂಡ ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರೆ ಇಲಾಖೆ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಗಿನ 2 ರಿಂದ 5 ಗಂಟೆಯವರೆಗೆ ದೇವಾಲಯ ಮುಚ್ಚಲಾಗುತ್ತಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಕಾರಣ ಆ ಸಮಯದಲ್ಲಿಯೂ ಮುಚ್ಚದಿರಲು ನಿರ್ಧರಿಸಿದ್ದೇವೆ. ಆದ್ದರಿಂದ ಎಲ್ಲರೂ ಹೆಚ್ಚು ವಿಳಂಬವಿಲ್ಲದೆ ದರ್ಶನ ಪಡೆಯಬಹುದು ಎಂದು ಹೇಳಿದ್ದಾರೆ.
ಒಂದು ಸಾವಿರ ರೂ. ಟಿಕೆಟ್ ದರ್ಶನವು ದಿನವಿಡೀ 10 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ, 300 ರೂ. ಟಿಕೆಟ್ ದರ್ಶನವು 10 ರಿಂದ 30 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತಿದೆ. ಧರ್ಮ ದರ್ಶನವು 30 ನಿಮಿಷಗಳಿಂದ ಗರಿಷ್ಠ 2.30ಗಂಟೆಯಲ್ಲಿ ಆಗುತ್ತಿದೆ ಎಂದು ತಿಳಿಸಿದರು.
ಎಲ್ಲಾ ವ್ಯವಸ್ಥೆಗಳು ಸುಸೂತ್ರವಾಗಿ ಸಾಗಿವೆ. ಗಣ್ಯರ ದರ್ಶನವೂ ಸಹ ಗೌರವಯುತವಾಗಿ ಸಾಗುತ್ತಿದೆ. ಶೌಚಾಲಯಗಳು ಅತ್ಯಂತ ಸ್ವಚ್ಛವಾಗಿದ್ದು, ಕಸವನ್ನು ನಿರಂತರವಾಗಿ ತೆಗೆಯಲಾಗುತ್ತಿದೆ. ಅ. 22 ರವರೆಗೆ ಅತೀ ಹೆಚ್ಚು ಜನಸಂದಣಿ ಇರುವುದರಿಂದ, ಭಕ್ತರು ಸಾಧ್ಯವಾದರೆ ಅಷ್ಟರೊಳಗೆ ಬಂದು ದರ್ಶನ ಪಡೆದುಕೊಳ್ಳಬಹುದು ಎಂದರು.
ವಿಐಪಿ ಪಾಸ್ ರದ್ದತಿಯಿಂದ ಸುಗಮ ದರ್ಶನ:
ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಿರುವುದರಿಂದ ಭಕ್ತರು ಸುಗಮವಾಗಿ ದರ್ಶನ ಪಡೆಯುತ್ತಿದ್ದಾರೆ. ಇದರಿಂದಾಗಿ ಭಕ್ತರಲ್ಲಿ ಸಂತಸ ಮೂಡಿದೆ. ನಾಡಿನ ನಾನಾ ಭಾಗಗಳಿಂದ ಭಕ್ತರ ದಂಡೇ ಹಾಸನಾಂಬೆಯ ದರ್ಶನಕ್ಕೆ ಹರಿದು ಬರುತ್ತಿದೆ. ಕಳೆದ ವರ್ಷಗಳಲ್ಲಿ ಪಾಸ್‌ಗಳ ಹಂಚಿಕೆಯಿಂದ ಗೊಂದಲ ಉಂಟಾಗಿ, ಸ್ಥಳೀಯರು ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ಜಿಲ್ಲಾಡಳಿತ, ಶಾಸಕರು, ಸಂಸದರೊಂದಿಗೆ ಚರ್ಚಿಸಿ ಪಾಸ್ ಪದ್ಧತಿಯನ್ನು ರದ್ದುಪಡಿಸಿದ್ದಾರೆ. ಇದರಿಂದ ಭಕ್ತರು ಸುಗಮವಾಗಿ ದರ್ಶನ ಪಡೆದು ಹಿಂತಿರುಗುತ್ತಿದ್ದಾರೆ. ಭಕ್ತರಿಂದಲೂ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ದೇವಿ ದರ್ಶನ ಪಡೆದು ಭಾವೈಕ್ಯತೆ ಮೆರೆದ ಅನ್ಯಧರ್ಮೀಯರು
ಹಾಸನಾಂಬೆ ದರ್ಶನಕ್ಕೆ ನಾಡಿನ ನಾನಾ ಭಾಗಗಳಿಂದ ಭಕ್ತರ ದಂಡೇ ಹರಿದು ಬರುತ್ತಿದೆ. ವಿಶೇಷವೆಂದರೆ, ಅನ್ಯ ಧರ್ಮಿಯರು ಸಹ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದು ಭಕ್ತಿ ಸಮರ್ಪಿಸುತ್ತಿದ್ದಾರೆ. ವಿಜಯಪುರದ ವಕೀಲ ಅನ್ವರ್ ಹುಸೇನ್ ಅವರು ಸ್ನೇಹಿತರೊಂದಿಗೆ ಆಗಮಿಸಿ 300 ರೂ. ಟಿಕೆಟ್ ಪಡೆದು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.ಸೃಷ್ಟಿಕರ್ತ ಎಲ್ಲರೂ ಒಂದೇ. ನಾವು ಬೇರೆ ಬೇರೆ ಹೆಸರಿನಿಂದ ಕರೆಯುತ್ತೇವೆ. ದೇವರು, ದೈವ ಭಕ್ತಿಗೆ ಭೇದ-ಭಾವ ಇಲ್ಲ. ಭಕ್ತಿ, ದಯೆ, ಕರುಣೆಯಲ್ಲಿ ಇಲ್ಲದ ಭಿನ್ನತೆ ನಮ್ಮಲ್ಲಿ ಯಾಕೆ? ಎಲ್ಲರೂ ಒಂದೇ. ಹೀಗಾಗಿ ನಾನು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದೇನೆ ಎಂದು ಭಕ್ತ ಅನ್ವರ್ ಹುಸೇನ್ ಭಾವೈಕ್ಯತಾ ಸಂದೇಶ ಸಾರಿದರು.